ಬಾಲಕಿಯರ ಮೇಲೆ ಅತ್ಯಾಚಾರ; ರಾತ್ರಿ ವೇಳೆ ಮಕ್ಕಳನ್ನು ಏಕೆ ಕಳಿಸಬೇಕು ಎಂದ ಗೋವಾ ಸಿಎಂ!

ಇಬ್ಬರು ಬಾಲಕರ ಮೇಲೆ ಹಲ್ಲೆ ನಡೆಸಿ, ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಕಳೆದ ವಾರ ಗೋವಾದ ಬೀಚ್‌ನಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ವಿವಾದಾತ್ಮಕ ಪ್ರತಿಕ್ರಿಯೆ ನೀಡಿರುವ ಗೋವಾ ಸಿಎಂ, ಮಕ್ಕಳ ಸುರಕ್ಷತೆಯ ಹೊಣೆ ಪೋಷಕರದ್ದೇ ಆಗಿರುತ್ತದೆ. ಈ ಘಟನೆಯಲ್ಲಿ ಸಂತ್ರಸ್ತರು ಮತ್ತು ಅವರ ಪೋಷಕರೇ ಜವಾಬ್ದಾರರು. ಇದಕ್ಕೆ ಸರ್ಕಾರ ಮತ್ತು ಪೊಲೀಸರನ್ನು ದೂಷಿಸುವಂತಿಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಇಬ್ಬರು ಬಾಲಕಿಯರು ಮತ್ತು 06 ಬಾಲಕರ ಗುಂಪು ಶನಿವಾರ ಮಧ್ಯಾಹ್ನ 1.30 ಕ್ಕೆ ಬೆನೌಲಿಮ್ ಬೀಚ್‌ಗೆ ಭೇಟಿ ನೀಡಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ಗುಂಪಿನ ಒಂದು ತಂಡವು ಮೂವರು ಹುಡುಗರು ಮತ್ತು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬೀಚ್‌ನಲ್ಲಿಯೇ ಬಿಟ್ಟು ಬೇಗನೇ ಹೊರಟು ಹೋಗಿದ್ದರು.

ಮುಂಜಾನೆ 3.30 ಕ್ಕೆ ಬಾಲಕಿಯರು ತಮ್ಮ ಕಾರಿನ ಬಳಿಗೆ ಬರುತ್ತಿದ್ದಂತೆ ನಾಲ್ವರು ಆರೋಪಿಗಳು ಪೊಲೀಸರಂತೆ ನಟಿಸುತ್ತಾ, ಅವರನ್ನು ಎದುರಿಸಿದ್ದಾರೆ. ಅಲ್ಲದೆ, ಮೂವರು ಹುಡುಗರಿಗೆ ಕಪಾಳಮೋಕ್ಷ ಮಾಡಿ, ಅವರಲ್ಲಿ ಒಬ್ಬರ ಕಣ್ಣಿಗೆ ಮದ್ಯವನ್ನು ಎರಚಿ, ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ಧಾರೆ.

ಈ ಘಟನೆಯ ಬಗ್ಗೆ ನಿನ್ನೆ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ತಡರಾತ್ರಿ ತಮ್ಮ ಮಕ್ಕಳನ್ನು ಹೊರಗೆ ಹೋಗಲು ಅನುಮತಿಸಿದ್ದಕ್ಕಾಗಿ ಪೋಷಕರನ್ನು ದೂಷಿಸಿದ್ದಾರೆ.

“ಇಡೀ ರಾತ್ರಿ 14 ವರ್ಷದ ಮಕ್ಕಳು ಕಡಲತೀರದಲ್ಲಿದ್ದಾಗ, ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ತಮ್ಮ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ, ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಬಾರದು” ಎಂದು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ವಿಡಿಯೋ ನೋಡಿ: ರಸ್ತೆ ದಾಟುತ್ತಿರುವ ನೂರಾರು ಕೃಷ್ಣಮೃಗಗಳ ಅದ್ಭುತ ವಿಡಿಯೋ ವೈರಲ್‌!

‘‘ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವುದು ಪೋಷಕರ ಕರ್ತವ್ಯವಾಗಿದೆ. ಹುಡುಗಿಯರನ್ನು, ಅದರಲ್ಲೂ ವಿಶೇಷವಾಗಿ ಅವರು ಅಪ್ರಾಪ್ತರಾಗಿದ್ದರೆ, ರಾತ್ರಿ ಸಮಯದಲ್ಲಿ ಮನೆಯಿಂದ ಹೊರಹೋಗಲು ಅನುಮತಿಸಬಾರದು” ಎಂದು ಪ್ರಮೋದ್ ಹೇಳಿದ್ದಾರೆ.

“ನಾವು ಪೊಲೀಸರನ್ನು ದೂಷಿಸುತ್ತೇವೆ … ಆದರೆ, ಪಾರ್ಟಿಗಾಗಿ ಬೀಚ್‌ಗೆ ಹೋದ 10 ಜನರಲ್ಲಿ, ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು ಒಟ್ಟು ನಾಲ್ವರು ಇಡೀ ರಾತ್ರಿ ಬೀಚ್‌ನಲ್ಲಿಯೇ ಇದ್ದರು…. ಹದಿಹರೆಯದವರು, ವಿಶೇಷವಾಗಿ ಅಪ್ರಾಪ್ತ ವಯಸ್ಕರು, ಕಡಲತೀರಗಳಲ್ಲಿ ರಾತ್ರಿಗಳನ್ನು ಕಳೆಯಬಾರದು” ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿಯ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಬಿಜೆಪಿಯ ಆಳ್ವಿಕೆಯ ಗೋವಾ ಮಹಿಳೆಯರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ‘ನಾವು ಅವರೆಲ್ಲರನ್ನೂ ಕೊಲ್ಲುತ್ತೇವೆ’: ಮಾರಣಾಂತಿಕ ಬೆದರಿಕೆ ಹಾಕಿದ್ದ ಮಿಜೋರಾಂ ಸಂಸದರ ವಿರುದ್ದ ಅಸ್ಸಾಂ ಕ್ರಮ!

ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ ಮುಖ್ಯಮಂತ್ರಿಯವರ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ. “ರಾತ್ರಿಯಲ್ಲಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ಸುತ್ತಾಡಬೇಕು” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ಸಿನ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಕೂಡ ಟ್ವೀಟ್ ಮಾಡಿ, “ಇಂತಹ ನುಡಿಮುತ್ತನ್ನು ಆಡಿದ್ದಕ್ಕೆ ಮುಖ್ಯಮಂತ್ರಿ ರಾಜೀನಾಮೆ ನೀಡಿ ತ್ಯಜಿಸಿ ಮನೆಗೆ ಹೋಗಬೇಕು” ಎಂದು ಹೇಳಿದ್ದಾರೆ.

ಗೋವಾದ ಮತ್ತೊಂದು ವಿರೋಧ ಪಕ್ಷವಾದ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ, ಮುಖ್ಯಮಂತ್ರಿಯ ಹೇಳಿಕೆಯನ್ನು ‘ಅಸಹ್ಯಕರ’ ಎಂದು ಕರೆದ್ದಾರೆ. “ಮುಖ್ಯಮಂತ್ರಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಅಸಹ್ಯಕರವಾಗಿದೆ. ನಾಗರಿಕರ ಸುರಕ್ಷತೆಯು ಪೊಲೀಸ್ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅವರು ಅದನ್ನು ಒದಗಿಸಲು ಸಾಧ್ಯವಾಗದಿದ್ದರೆ, ಮುಖ್ಯಮಂತ್ರಿಗೆ ಈ ಹುದ್ದೆಯಲ್ಲಿ ಕುಳಿತುಕೊಳ್ಳಲು ಹಕ್ಕಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ದೆಹಲಿ ಅಧಿವೇಶನದ ವಿಸ್ತರಣೆಗೆ ಬಯಸಿದೆ; ಆದರೆ, ಗೋವಾದಲ್ಲಿ ಅಲ್ಲ!

“ಗೋವಾ ಮುಖ್ಯಮಂತ್ರಿ ತಮ್ಮ ಮಕ್ಕಳನ್ನು ರಾತ್ರಿಯಲ್ಲಿ ಹೊರಗೆ ಹೋಗಲು ಅನುಮತಿಸಿದ್ದಕ್ಕಾಗಿ ಪೋಷಕರನ್ನು ದೂಷಿಸುತ್ತಿರುವುದು ಆಘಾತಕಾರಿ… ಇದು ಗೋವಾ ಸುರಕ್ಷಿತವಲ್ಲ ಎಂದು ಹೇಳಿಕೊಳ್ಳುತ್ತಿದೆ. ನಮ್ಮ ಭದ್ರತೆಯನ್ನು ರಾಜ್ಯ ಸರ್ಕಾರವು ನಮಗೆ ಖಾತ್ರಿಪಡಿಸದಿದ್ದರೆ, ಯಾರು ಮಾಡಬಹುದು? ಮಹಿಳೆಯರಿಗೆ ಸುರಕ್ಷಿತ ರಾಜ್ಯ ಎಂದು ಗೋವಾಗೆ ಇತಿಹಾಸವಿದೆ… ಬಿಜೆಪಿ ಆಡಳಿತದಲ್ಲಿ ಆ ಟ್ಯಾಗ್ ಕಳೆದುಹೋಗುತ್ತಿದೆ” ಎಂದು ಸ್ವತಂತ್ರ ಶಾಸಕ ರೋಹನ್ ಖೌಂಟೆ ಟ್ವೀಟ್ ಮಾಡಿದ್ದಾರೆ.

ಒಬ್ಬ ಸರ್ಕಾರಿ ನೌಕರ ಸೇರಿದಂತೆ ನಾಲ್ವರು ದುಷ್ಕರ್ಮಿಗಳು ಪೊಲೀಸರಂತೆ ಪೋಸ್ ಕೊಟ್ಟು, ಬಾಲಕರನ್ನು ಥಳಿಸಿದ ನಂತರ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು. ಘಟನೆಯು ರಾಜ್ಯ ರಾಜಧಾನಿ ಪಣಜಿಯಿಂದ 30 ಕಿ.ಮೀ ದೂರದಲ್ಲಿರುವ ಬೆನೌಲಿಮ್ ಬೀಚ್‌ನಲ್ಲಿ ನಡೆದಿದೆ. ನಾಲ್ವರು ಆರೋಪಿಗಳನ್ನು ಈಗಾಗಲೆ ಬಂಧಿಸಲಾಗಿದೆ.

ಪ್ರಭಾವಿ ವ್ಯಕ್ತಿಯೊಬ್ಬರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬುಧವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಶಾಸಕರೊಬ್ಬರು ಹೇಳಿದ್ದಾರೆ. ಘಟನೆಯ ತನಿಖೆಯ ಮೇಲೆ ಮಂತ್ರಿಯೊಬ್ಬರು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಪತ್ರಕರ್ತ ತರುಣ್‌ ತೇಜ್‌ಪಾಲ್‌ ಆರೋಪಮುಕ್ತ; ಗೋವಾ ಕೋರ್ಟ್‌ ತೀರ್ಪು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights