ಬಿಜೆಪಿ ದೆಹಲಿ ಅಧಿವೇಶನದ ವಿಸ್ತರಣೆಗೆ ಬಯಸಿದೆ; ಆದರೆ, ಗೋವಾದಲ್ಲಿ ಅಲ್ಲ!
ಆಮ್ ಆದ್ಮಿ ಪಕ್ಷ ಆಡಳಿತದಲ್ಲಿರುವ ದೆಹಲಿಯಲ್ಲಿ ವಿಧಾನಸಭೆ ಅಧಿವೇಶನವನ್ನು ಎರಡು ದಿನಗಳಿಂದ 10 ಕ್ಕೆ ವಿಸ್ತರಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ. ಆದರೆ, ಗೋವಾದಲ್ಲಿ ಅದೇ ರೀತಿ ಅಧಿವೇಶನವನ್ನು ವಿಸ್ತರಿಸಲು ಬಿಜೆಪಿ ಬಯಸುವುದಿಲ್ಲ ಎಂದು ಗೋವಾ ಫಾರ್ವರ್ಡ್ ಪಕ್ಷ ಭಾನುವಾರ ಹೇಳಿದೆ.
ದೆಹಲಿಯಲ್ಲಿ ಜುಲೈ 29 ಮತ್ತು 30 ರಂದು ವಿಧಾನಸಭಾ ಅಧಿವೇಶನ ನಡೆಯಲಿದೆ. ಅದನ್ನು 10 ದಿನಗಳಿಗೆ ವಿಸ್ತರಿಸಬೇಕು ಎಂದು ಪ್ರತಿಪಕ್ಷ ನಾಯಕ ರಾಮ್ವೀರ್ ಸಿಂಗ್ ಬಿಧುರಿ ನೇತೃತ್ವದ ದೆಹಲಿ ಬಿಜೆಪಿ ಒತ್ತಾಯಿಸಿದೆ ಎಂದು ವರದಿಯಾಗಿದೆ. ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜಿಎಫ್ಪಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ, ಬಿಜೆಪಿ ಅಧಿಕಾರದಲ್ಲಿರುವ ಗೋವಾದಲ್ಲಿ ವಿಧಿವೇಶನ ವಿಸ್ತರಣೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ದೆಹಲಿ ಬಿಜೆಪಿ ನಾಯಕ ರಾಮ್ವೀರ್ ಬಿಧುರಿ ಅವರು ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಜನರ ಧ್ವನಿ ಕೇಳಲು ಅಧಿವೇಶನವನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಬಿಜೆಪಿಗರು ಗೋವಾ ಜನರ ಧ್ವನಿ ಕೇಳಲು ಉತ್ಸುಕರಾಗಿಲ್ಲ, ನಾವು ಗೋವಾ ಜನರ ಧ್ವನಿಯನ್ನೂ ಕೇಳಲು ಬಯಸುತ್ತೇವೆ ಎಂದು ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ಜುಲೈ 28 ರಿಂದ ಮೂರು ದಿನಗಳವರೆಗೆ ನಿಗದಿಯಾಗಿರುವ ಗೋವಾ ವಿಧಾನಸಭೆ ಅಧಿವೇಶನವನ್ನು ವಿಸ್ತರಿಸಬೇಕೆಂದು ಜಿಎಫ್ಪಿ ಮತ್ತು ಕಾಂಗ್ರೆಸ್ ಒತ್ತಾಯಿಸುತ್ತಿವೆ.
ಇದನ್ನೂ ಓದಿ: BJP v/s TMC: ಉಳಿವು ಮತ್ತು ಮರಳಿ ಪಡೆಯುವ ಯತ್ನದಲ್ಲಿ ಬಂಗಾಳದಲ್ಲಿ ಭಾರೀ ಹಿಂಸಾಚಾರ!