FACT CHECK | ದೆಹಲಿಯಲ್ಲಿ ಸಂಭವಿಸಿದ ಭೂಕಂಪದ ದೃಶ್ಯಗಳು ಎಂದು ಟರ್ಕಿಯ ಹಳೆಯ ವಿಡಿಯೋ ಹಂಚಿಕೆ
ದೆಹಲಿಯಲ್ಲಿ ಸಂಭವಿಸಿದ ಭೂಕಂಪದಿಂದ ಭೂಮಿ ಕುಸಿದು ರಸ್ತೆಗಳು ಇಭ್ಭಾಗವಾಗಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.
View this post on Instagram
ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಫೆಬ್ರವರಿ 17 ರಂದು ಬೆಳಿಗ್ಗೆ 4.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು ದೆಹಲಿಯಲ್ಲಿ ಭೂಕಂಪದಿಂದಾಗಿ ರಸ್ತೆಗಳು ಸೀಳಿವೆ ಎಂದು ಹೇಳಿಕೊಂಡಿದ್ದಾರೆ. Pk9069 ಎಂಬ YouTube ಬಳಕೆದಾರರು ಮತ್ತು geeta_singh2346 ಎಂಬ Instagram ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ದೆಹಲಿ-NCRನಲ್ಲಿ ಭೂಕಂಪ, 2000 ಕೋಟಿ ರೂಪಾಯಿ ನಷ್ಟ” ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಂಆಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋದ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಬಳಸಿ ಸರ್ಚ್ ಮಾಡಿದಾಗ, Cabdulahi Bulshaawi ಎಂಬ ಫೇಸ್‌ಬುಕ್ ಪುಟದಲ್ಲಿ 2023 ಫೆಬ್ರವರಿ 7 ರಂದು ಪೋಸ್ಟ್ ಮಾಡಲಾದ ಒಂದು ಫೋಟೋ ಲಭ್ಯವಾಗಿದೆ. ಈ ಫೋಟೋದಲ್ಲಿ ವೈರಲ್ ವಿಡಿಯೋದಲ್ಲಿರುವಂತೆಯೇ ರಸ್ತೆಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ತೋರಿಸಲಾಗಿದೆ. ಬಳಕೆದಾರರು ಈ ಫೋಟೋವನ್ನು ಟರ್ಕಿಯ ಭೂಕಂಪಕ್ಕೆ ಸಂಬಂಧಿಸಿದ್ದು ಎಂದು ಬರೆದುಕೊಂಡಿದ್ದಾರೆ.
ಇಂಡಿಯಾ ಟಿವಿಯ ವರದಿಯೊಂದರಲ್ಲಿಯೂ ವೈರಲ್ ವಿಡಿಯೋ ಟರ್ಕಿಯ ಭೂಕಂಪಕ್ಕೆ ಸಂಬಂಧಿಸಿದೆ ಎಂದು ಖಚಿತಪಡಿಸಲಾಗಿದೆ. ಈ ಮೂಲಕ ದೆಹಲಿಯದಲ್ಲ ಎಂದು ದೃಢವಾಗಿದೆ.
ದೆಹಲಿಯಲ್ಲಿ ಭೂಕಂಪದ ನಂತರ ಯಾವುದೇ ರಸ್ತೆ ಹಾನಿಯಾಗಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ದೆಹಲಿಯ ಭೂಕಂಪದಿಂದ ರಸ್ತೆ ಸೀಳಿದೆ ಎಂಬ ಹೇಳಿಕೆ ಸುಳ್ಳು. ವೈರಲ್ ವಿಡಿಯೋ ಟರ್ಕಿಯ ಭೂಕಂಪಕ್ಕೆ ಸಂಬಂಧಿಸಿದೆ. ಜನರು ಇದನ್ನು ದೆಹಲಿಯ ಭೂಕಂಪಕ್ಕೆ ತಪ್ಪಾಗಿ ಜೋಡಿಸಿ ಹಂಚಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ಭೂಕಂಪದಿಂದ ಯಾವುದೇ ರಸ್ತೆ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಸಿಗಲಿಲ್ಲ. ಭೂಕಂಪದ ಬಗ್ಗೆ ವರದಿಗಳಿದ್ದವು, ಆದರೆ ಹಾನಿಯ ಬಗ್ಗೆ ಏನೂ ಇರಲಿಲ್ಲ. ದೆಹಲಿ ಫೆಬ್ರವರಿ 17 ರಂದು ಬೆಳಿಗ್ಗೆ ಸಣ್ಣ ಭೂಕಂಪ ಸಂಭವಿಸಿತು. ಇದರ ತೀವ್ರತೆ 4.0 ಎಂದು ದಾಖಲಾಗಿದೆ. ಈ ಭೂಕಂಪ ಬೆಳಗಿನ ಜಾವ ಸಂಭವಿಸಿದ್ದರಿಂದ ಹಲವರಿಗೆ ಅದು ಗೊತ್ತಾಗಲೇ ಇಲ್ಲ. ಕೆಲವರು ಭೂಕಂಪದಿಂದ ಎಚ್ಚರಗೊಂಡರು. ಆದರೆ, ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಕೇರಳ CPI(M) ನಾಯಕ ಮಾಹಾಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಸುಳ್ಳು ಪೋಸ್ಟ್ ಹಂಚಿಕೆ

