BJP v/s TMC: ಉಳಿವು ಮತ್ತು ಮರಳಿ ಪಡೆಯುವ ಯತ್ನದಲ್ಲಿ ಬಂಗಾಳದಲ್ಲಿ ಭಾರೀ ಹಿಂಸಾಚಾರ!

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯ ನಂತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 2,000 ದೂರುಗಳು ದಾಖಲಾಗಿವೆ. ಈ ಪೈಕಿ ಶೇ.69 ರಷ್ಟು ದೂರುಗಳು ಒಂಬತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯದ 23 ಜಿಲ್ಲೆಗಳ ಪೈಕಿ ಒಂಬತ್ತು ಜಿಲ್ಲೆಗಳ ಜನರು ಹೆಚ್ಚಿನ ತೊಂದರೆಯನ್ನು ಅನುಭವಿಸಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವು ಕೊಲ್ಕತ್ತಾ ಹೈಕೋರ್ಟ್‌ಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಹೇಳಿದೆ.

ಬಂಗಾಳ ರಾಜಕೀಯ ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅಂಕಿಅಂಶಗಳನ್ನು ಪರಿಶೀಲಿಸಿದಾಗ ಹೆಚ್ಚಿನ ಹಿಂಸಾಚಾರಗಳು ಎರಡು ರೀತಿಯ ಸ್ಥಳಗಳಲ್ಲಿ ನಡೆದಿದೆ ಎಂದು ಸೂಚಿಸುತ್ತದೆ. ಒಂದು, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದ ಉತ್ತರ ಬಂಗಾಳದ ಜಿಲ್ಲೆಗಳು. ಈ ಜಿಲ್ಲೆಗಳಲ್ಲಿ ಟಿಎಂಸಿ ತನ್ನ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿತ್ತು. ಎರಡನೆಯದು, ದಕ್ಷಿಣ ಬಂಗಾಳದ ಜಿಲ್ಲೆಗಳು ಟಿಎಂಸಿಯ ಭದ್ರಕೋಟೆಗಳಾಗಿದ್ದು, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಆಕ್ರಮಣಕಾರಿಯಾಗಿ ಪ್ರಚಾರ ಮಾಡುವ ಮೂಲಕ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿತ್ತು.

ಎನ್‌ಎಚ್‌ಆರ್‌ಸಿಗೆ 1,979 ದೂರುಗಳು ಬಂದಿದ್ದು, ಅದರಲ್ಲಿ 322 ಉತ್ತರ ಬಂಗಾಳದ ಕೂಚ್ ಬೆಹಾರ್‌ ಜಿಲ್ಲೆಯಿಂದ ಬಂದಿವೆ. ಈ ಜಿಲ್ಲೆಯಲ್ಲಿ ಮತದಾದದ ದಿನದಂದು ಕೇಂದ್ರ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದಕ್ಷಿಣ ಬಂಗಾಳದ ಬಿರ್ಭಮ್‌ನಿಂದ 314, ದಕ್ಷಿಣ 24 ಪರಗಣಗಳಿಂದ 203, ಉತ್ತರ 24 ಪರಗಣದಿಂದ 196 ಮತ್ತು ಪೂರ್ವ ಬುರ್ದ್ವಾನ್ ಜಿಲ್ಲೆಗಳಿಂದ 113 ದೂರುಗಳನ್ನು ಆಯೋಗವು ಸ್ವೀಕರಿಸಿದೆ.

ಇದನ್ನೂ ಓದಿ: ಸೈಕಲ್ ರಿಕ್ಷಾ ತುಳಿಯುತ್ತಿದ್ದ ಬಡ ದಲಿತ; ಈಗ ಪಶ್ಚಿಮ ಬಂಗಾಳದ ಟಿಎಂಸಿ ಶಾಸಕ!

“ಆಡಳಿತಾತ್ಮಕ ಜಿಲ್ಲೆಗಳಾದ ಕೂಚ್ ಬೆಹಾರ್, ಬಿರ್ಭುಮ್, ಪುರ್ಬಾ ಬರ್ಧಮನ್, ಉತ್ತರ 24 ಪರಗಣಗಳು, ದಕ್ಷಿಣ 24 ಪರಗಣಗಳು ಮತ್ತು ಕೋಲ್ಕತ್ತಾದಿಂದ ಹೆಚ್ಚಿನ ಸಂಖ್ಯೆಯ ದೂರುಗಳು ಬಂದಿವೆ. ಅಲ್ಲದೆ, ದಕ್ಷಿಣ ಬಂಗಾಳದ ಜಿಲ್ಲೆಗಳಾದ ಬರುಯಿಪುರ, ಬಸಿರ್ಹತ್, ಬರಾಕ್‌ಪೋರ್ ಮತ್ತು ಡೈಮಂಡ್ ಹಾರ್ಬರ್ ಜಿಲ್ಲೆಗಳು ಹೆಚ್ಚು ಪರಿಣಾಮ ಬೀರುವ ಪೊಲೀಸ್ ಜಿಲ್ಲೆಗಳಾಗಿವೆ’’ ಎಂದು ವರದಿಯನ್ನು ಸಿದ್ಧಪಡಿಸಲಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಚುನಾವಣಾ ಸಮಯದ ಹಿಂಸಾಚಾರವು ಎರಡೂ ಪಕ್ಷಗಳು ತಮ್ಮ ನೆಲೆಗಳನ್ನು ಮರಳಿ ಪಡೆಯಲು ಮತ್ತು ಉಳಿಸಿಕೊಳ್ಳುವ ಪ್ರಯತ್ನಗಳ ಪರಿಣಾಮವಾಗಿದೆ. “ದಕ್ಷಿಣ ಬಂಗಾಳದ ಅನೇಕ ಪ್ರದೇಶಗಳಲ್ಲಿ, ಆಡಳಿತ ಪಕ್ಷವು ಬಿಜೆಪಿಯನ್ನು ತನ್ನ ತಕ್ಷಣದ ಸವಾಲಾಗಿ (ಎದುರಾಳಿ) ನೋಡಿದೆ. ಬಿಜೆಪಿ ತನ್ನ ಭದ್ರಕೋಟೆಗಳನ್ನು ಅಸ್ತಿರಗೊಳಿಸಬಹುದು ಎಂದು ಟಿಎಂಸಿ ಭಾವಿಸಿದ್ದಂತಿದೆ. ಅದೇ ರೀತಿ ಉತ್ತರ ಬಂಗಾಳದಲ್ಲಿ, ಟಿಎಂಸಿ ತನ್ನ ಹಿಂದಿನ ನೆಲೆಯನ್ನು ಮರಳಿ ಪಡೆಯಲು ಪ್ರಯತ್ನಿಸಿತು ಮತ್ತು ಬಿಜೆಪಿ ತನ್ನ ಹೊಸ ನೆಲೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿತ್ತು” ಎಂದು ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ಬಿಷ್ಣುಪ್ರಿಯಾ ದತ್ತಾ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳ to ಕೇರಳ: ಪ್ರಭಾವ ಕಳೆದುಕೊಂಡ ಕಾಂಗ್ರೆಸ್‌; ಮತಗಳಿಕೆಯಲ್ಲಿ ಭಾರೀ ಕುಸಿತ!

ಬಂಗಾಳದ ಕೂಚ್ ಬೆಹಾರ್‌, ಬಿರ್ಭುಮ್, ದಕ್ಷಿಣ 24 ಪರಗಣ ಮತ್ತು ಉತ್ತರ 24 ಪರಗಣಗಳಲ್ಲಿ ಭಯೋತ್ಪಾದನೆ ಹರಡುವ ತಂತ್ರವನ್ನು ಟಿಎಂಸಿ ಅಳವಡಿಸಿಕೊಂಡಿದೆ. ಈ ಸ್ಥಳಗಳಲ್ಲಿ ಮುಂಬರುವ ಚುನಾವಣೆಗಳಲ್ಲಿ, ಜನರ ತೀರ್ಪು ಬಿಜೆಪಿಯ ಪರವಾಗಿ ಹೋಗುತ್ತದೆ ಎಂದು ಅವರಿಗೆ ತಿಳಿದಿದೆ. ಇದಕ್ಕಾಗಿಯೇ ಅವರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಹೇಳಿದ್ದಾರೆ.

ಮುರ್ಷಿದಾಬಾದ್ ಮತ್ತು ಮಾಲ್ಡಾದಂತಹ ಜಿಲ್ಲೆಗಳಲ್ಲಿ ಚುನಾವಣಾ ಸಮಯದ ಹಿಂಸಾಚಾರ ಕಡಮೆ ವರದಿಯಾಗಿವೆ. ಏಕೆಂದರೆ ಈ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತದಾರರು ಪ್ರಾಬಲ್ಯ ಹೊಂದಿದ್ದಾರೆ. ಬಿಜೆಪಿಗೆ ಅಲ್ಲಿ ಸರಿಯಾದ ನೆಲೆಯಿಲ್ಲ. ಹೀಗಾಗಿ, ಅವರು  ಆ ಸ್ಥಳಗಳಲ್ಲಿ ಅತಿಕ್ರಮಣ ಮಾಡಲು ಸಮಗ್ರ ಪ್ರಯತ್ನವನ್ನೂ ಮಾಡಲಿಲ್ಲ.

ಎನ್‌ಎಚ್‌ಆರ್‌ಸಿ ವರದಿಯು ಪಕ್ಷಪಾತದಿಂದ ಕೂಡಿದೆ ಎಂದು ಟಿಎಂಸಿ ಹೇಳಿದೆ.  “ಇದು ಬಿಜೆಪಿಯನ್ನು ಪ್ರತಿನಿಧಿಸುವ ಸಂಸ್ಥೆಯಲ್ಲದೆ, ಮತ್ತೇನೂ ಅಲ್ಲ. ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಹಾಗೂ ಚುನಾವಣಾ ಆಯೋಗವು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ವಹಿಸಿಕೊಂಡ ಸಂದರ್ಭದಲ್ಲಿ ಕೆಲವು ಹಿಂಸಾಚಾರಗಳು ನಡೆದವು. ಆಯೋಗವು ಮುಖ್ಯಮಂತ್ರಿಯಿಂದ ನೇಮಿಸಲ್ಪಟ್ಟ ಆಡಳಿತಾಧಿಕಾರಿಗಳನ್ನು ವರ್ಗಾಯಿಸಿತು. ಅಲ್ಲದೆ, ಹಿಂಸಾಚಾರವು ಚುನಾವಣಾ ಆಯೋಗದ ಅಸಮರ್ಥತೆಯ ಪರಿಣಾಮವಾಗಿದೆ’’ ಎಂದು ಟಿಎಂಸಿ ಸಂಸದ ಮತ್ತು ವಕ್ತಾರ ಸೌಗತ ರಾಯ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ್ದು ತಪ್ಪಾಯಿತು; ಟಿಎಂಸಿಗೆ ಹಿಂದಿರುಗಲು ಅವಕಾಶ ಕೊಡಿ: ಬಂಗಾಳ ಬಿಜೆಪಿ ಸೇರಿದ್ದವರ ಪರದಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights