ಫ್ಯಾಕ್ಟ್‌ಚೆಕ್: ಹಲಾಲ್ ಬಗ್ಗೆ ಸುಳ್ಳು ಕರಪತ್ರ ಹಂಚುತ್ತಿರುವ ಬಿಜೆಪಿಗರು

ಇದೀಗ ಹೊಸದಾಗಿ ‘ಹಲಾಲ್’ ವಿಚಾರವನ್ನು ಸಂಘಪರಿವಾರ ವಿವಾದವನ್ನಾಗಿ ಮಾಡಿದ್ದು, ಹಲವಾರು ಸುಳ್ಳುಗಳನ್ನು ‘ವೈಜ್ಞಾನಿಕ ಆಧಾರವಿದೆ’ ಎಂದು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಎಚ್‌ಪಿ ಮತ್ತು ಬಜರಂಗದಳದ ಪೋಸ್ಟರ್‌ ಒಂದು ವೈರಲ್ ಆಗಿದೆ.

ವೈರಲ್ ಪೋಸ್ಟರ್‌ನಲ್ಲಿ, “ಮುಸ್ಲಿಮರ ಅಂಡಿಯಿಂದ ಹಲಾಲ್ ಮಾಡಿರುವ ಮಾಂಸವನ್ನು ಖರೀದಿ ಮಾಡಬೇಡಿ. ಹಲಾಲ್ ಎಂದರೆ ಅಲ್ಲಾಹನ ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಮಾಂಸ ವಿತರಣೆ ಮಾಡುವುದು. ಹಲಾಲ್‌‌‌ ಮಾಡುವ ಸಂದರ್ಭದಲ್ಲಿ ವಧೆಯಾಗುವ ಪ್ರಾಣಿಯ ಕತ್ತಿನ ಭಾಗ ಸೀಳಿ ಹಾಗೇ ಬಿಡುತ್ತಾರೆ. 

ಆಗ ಆ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ಕೆಲವು ವಿಷಕಾರಿ ಅಂಶಗಳು ಬಿಡುಗಡೆಯಾಗಿ ಪ್ರಾಣಿಯ ದೇಹದ ಎಲ್ಲಾ ಭಾಗಗಳಿಗೆ ಹರಡಿ ಮಾಂಸವು ವಿಷಯುಕ್ತವಾಗುತ್ತದೆ. ಇದರ ನಿರಂತರ ಸೇವನೆಯಿಂದ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದು. ಇದು ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ. ಅವೈಜ್ಞಾನಿಕ ವಿಧಾನವಾದ ಹಲಾಲ್‌ ಮಾಡಿದ ಮಾಂಸ ಖರೀದಿಸುವುದರ ಬದಲು. ನಮ್ಮ ಹಿಂದು ಬಾಂಧವರು ಮಾಡುವ ‘ಜಟ್ಕಾಕಟ್‌’ ವಿಧಾನ ವೈೆಜ್ಞಾನಿಕವಾಗಿದೆ” ಎಂದು ಬಜರಂಗದಳದ ಪೋಸ್ಟರ್‌ ಹರಿದಾಡುತ್ತಿದೆ.

ಬಿಜೆಪಿ ಬೆಂಬಲಿತ ಸಂಘಟನೆಯ ಈ ಪೋಸ್ಟರ್‌ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಜನರು ಹಂಚಿಕೊಂಡಿದ್ದಾರೆ.

ಹಲಾಲ್ ವಿರುದ್ದ ಕರಪತ್ರ ಹಂಚುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತರಾಟೆ ತೆಗೆದುಕೊಂಡ ಸಾರ್ವಜನಿಕರು

ಹಲಾಲ್ ಎಂದರೇನು?

ವಾಸ್ತವದಲ್ಲಿ ‘ಹಲಾಲ್‌‌’ ಎಂಬುವುದು ಮಾಂಸಕ್ಕೆ ಬಳಸುವ ಪ್ರಾಣಿಗಳನ್ನು ಕೊಲ್ಲುವ ವಿಧಾನಕ್ಕೆ ಇರುವ ಹೆಸರೇ ಅಲ್ಲ. ‘ಹಲಾಲ್‌’ ಎಂಬುದು ಅರೇಬಿಕ್ ಪದವಾಗಿದ್ದು, ಇದನ್ನು ‘ಸಮ್ಮತ’ ಎಂಬುವುದಾಗಿ ಸರಳವಾಗಿ ಅರ್ಥೈಸಬಹುದಾಗಿದೆ. ಆದರೆ, ಮಾಂಸಕ್ಕಾಗಿ ಪ್ರಾಣಿಯನ್ನು ಕೊಯ್ಯುವ ವಿಧಾನವೊಂದನ್ನಷ್ಟೆ ಹಲಾಲ್‌ ಎಂದು ಬಹುತೇಕರು ಅರ್ಥೈಸಿಕೊಂಡಿದ್ದಾರೆ.

ವಾಸ್ತವದಲ್ಲಿ ಪ್ರಾಣಿಯನ್ನು ಕೊಲ್ಲುವ ಇಸ್ಲಾಮಿ ವಿಧಾನಕ್ಕೆ ‘ದ್ಸಬಹ್’ ಎಂದು ಕರೆಯುತ್ತಾರೆ. ಮಾಂಸದ ಪ್ರಾಣಿಯ ಕತ್ತಿನ ಮುಂಭಾಗಕ್ಕೆ ಹರಿತವಾದ ಚೂರಿಯಿಂದ, ಮುಖ್ಯ ರಕ್ತನಾಳ, ಶ್ವಾಸ ನಾಳ ಮತ್ತು ಅನ್ನ ನಾಳವನ್ನು ಕೊಯ್ಯುವುದಾಗಿದೆ ದ್ಸಬಹ್. ಈ ವೇಳೆ ಪ್ರಾಣಿಯ ಬೆನ್ನುಹುರಿಯನ್ನು ಕತ್ತರಿಸಬಾರದು. (ಹಲಾಲ್‌ ಮತ್ತು ಹರಾಂ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಫ್ಯಾಕ್ಟ್‌ಚೆಕ್‌:

ಪೋಸ್ಟರ್‌ ಅಲ್ಲಿರುವ ಮಾಹಿತಿ ನಿಜವೇ?

ಪೋಸ್ಟರ್‌ ಮುಖ್ಯವಾಗಿ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತದೆ. ಇದು ಸಮಾಜದಲ್ಲಿ ಮುಸ್ಲಿಮರ ವಿರುದ್ದ ದ್ವೇಷ ಹರಡುವ ಬಜರಂಗದಳ ಎಂದಿನ ಕಾರ್ಯವಾಗಿದೆ. ಉಳಿದಂತೆ ಅದು, ಯಾಕೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬಾರದು ಎಂಬುದಕ್ಕೆ ಹಲವು ಕಾರಣಗಳನ್ನು ನೀಡುತ್ತದೆ. ಅವುಗಳನ್ನು ಮುಖ್ಯವಾಗಿ ಕೆಳಗಿನಂತೆ ಪಟ್ಟಿ ಮಾಡಬಹುದು.

  • ಹಲಾಲ್ ಎಂದರೆ ಅಲ್ಲಾಹನ ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಮಾಂಸ ವಿತರಣೆ ಮಾಡುವುದು.

ಈ ವಾದಕ್ಕೆ ಯಾವುದೆ ಹುರುಳಿಲ್ಲ. ಹಿಂದೂಗಳು ದೇವರಿಗೆ ನೈವೇದ್ಯ ಅರ್ಪಿಸುಂತೆ, ಮುಸ್ಲಿಮರು ಅಲ್ಲಾಹುವಿಗೆ ನೈವೇದ್ಯ ಅರ್ಪಿಸುವ ಆಚರಣೆಯನ್ನು ಮಾಡುವುದಿಲ್ಲ. ಅದಾಗ್ಯೂ ಮುಸ್ಲಿಮರು ಪ್ರಾಣಿಯನ್ನು ಕೊಲ್ಲುವಾಗ ‘ಬಿಸ್ಮಿಲ್ಲಾಹಿ-ರ್‍ರಹ್ಮಾನಿ-ರ್‍ರಹೀಂ’ ಎಂದು ಹೇಳುತ್ತಾರೆ. ಇದು ಯಾವುದೆ ‘ಅಪರಾಧಿ’ ಮಂತ್ರವಲ್ಲ. ಇದು ಕೇವಲ ತಾನು ನಂಬಿದ ದೇವರನ್ನು ನೆನೆಯುವುದಾಗಿದೆ.

ಇದನ್ನು ಮಸ್ಲಿಮರು ಕೇವಲ ಪ್ರಾಣಿಯನ್ನು ಕೊಯ್ಯುವಾಗ ಮಾತ್ರ ಹೇಳುವುದಲ್ಲ. ಮುಸ್ಲಿಮರು ತಿನ್ನಲಾರಂಭಿಸುವಾಗ, ಕುಡಿಯಲಾರಂಭಿಸುವಾಗ, ಮನೆಯಿಂದ ಹೊರಗೆ ಕಾಲಿಡುವಾಗ, ಮನೆಯೊಳಕ್ಕೆ ಪ್ರವೇಶಿಸುವಾಗ, ವಾಹನವೇರುವಾಗ, ವ್ಯಾಪಾರ ಆರಂಭಿಸುವಾಗ, ಯಾರಿಗಾದರೂ ಏನನ್ನಾದರೂ ಕೊಡುವಾಗ, ದುಡಿಮೆ ಆರಂಭಿಸುವಾಗ ಹೀಗೆ ಎಲ್ಲಾ ಕಾರ್ಯಗಳ ಆರಂಭದಲ್ಲೂ ಅಲ್ಲಾಹುವಿನ ನಾಮ ಉಚ್ಚರಿಸುತ್ತಾರೆ.

ತಾನು ನಂಬಿದ ದೇವನನ್ನು ನೆನೆದು ಕೆಲಸ ಪ್ರಾರಂಭ ಮಾಡುವುದು ಯಾರಿಗೂ ತೊಂದರೆ ಮಾಡುವುದಿಲ್ಲ. ಇದನ್ನು ಎಲ್ಲಾ ನಂಬಿಕೆಯ ಜನರು ಮಾಡುತ್ತಾರೆ. ಆದರೆ ಬಜರಂಗದಳ ಇದನ್ನು ‘ಅಪರಾಧ’ ಎಂಬಂತೆ ಬಿಂಬಿಸುತ್ತದೆ. ಇದು ದ್ವೇಷ ಹರಡುವ ತಂತ್ರವೆ ಹೊರತು ಬೇರೇನಿಲ್ಲ.

  • ಹಲಾಲ್‌‌‌‌ ಮಾಡುವ ಸಂದರ್ಭದಲ್ಲಿ ವಧೆಯಾಗುವ ಪ್ರಾಣಿಯ ಕತ್ತಿನ ಭಾಗ ಸೀಳಿ ಹಾಗೇ ಬಿಡುತ್ತಾರೆ. ಆಗ ಆ ಪ್ರಾಣಿಯ ಮೆದುಳಿನ ಗ್ರಂಥಿಯಿಂದ ಕೆಲವು ವಿಷಕಾರಿ ಅಂಶಗಳು ಬಿಡುಗಡೆಯಾಗಿ ಪ್ರಾಣಿಯ ದೇಹದ ಎಲ್ಲಾ ಭಾಗಗಳಿಗೆ ಹರಡಿ ಮಾಂಸವು ವಿಷಯುಕ್ತವಾಗುತ್ತದೆ.

ಈ ವಾದಗಳು ಕೂಡಾ ಸುಳ್ಳಾಗಿದ್ದು, ಇದಕ್ಕೆ ಯಾವುದೆ ವೈಜ್ಞಾನಿಕ ಆಧಾರವಿಲ್ಲ. ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಆಹಾರ ತಜ್ಞ ಕೆ.ಸಿ. ರಘು, “ಮುಸ್ಲಿಮರು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ವಿಧಾನದಿಂದ ಯಾವುದೆ ರೀತಿಯಲ್ಲಿ ಅಪಾಯವಿಲ್ಲ. ಮೆದುಳಿನ ಗ್ರಂಥಿಯಿಂದ ವಿಷಕಾರಿ ಅಂಶಗಳು ಬಿಡುಗಡೆಯಾಗುತ್ತದೆ ಎಂಬ ವಿಚಾರ ಸುಳ್ಳಾಗಿದ್ದು, ಇದಕ್ಕೆ ಯಾವುದೆ ವೈಜ್ಞಾನಿಕ ಆಧಾರವಿಲ್ಲ” ಎಂದು ಹೇಳಿದ್ದಾರೆ.

‘‘ಪ್ರಾಣಿಗಳ ಮಾಂಸಗಳಲ್ಲಿ ವಿಷ ಇರುವುದು ಅವುಗಳಿಗೆ ಕೊಡುವ ಮೇವು ಮತ್ತು ಅವುಗಳನ್ನು ಸಾಕುವ ವಿಧಾನದಿಂದಾಗಿದೆ. ಅವುಗಳು ತಿನ್ನುವ ಆಹಾರದಲ್ಲಿ ವಿಷ ಇರುವುದರಿಂದ ಅವುಗಳ ಮಾಂಸವು ವಿಷಕಾರಿಯಾಗುತ್ತದೆ ಹೊರತು, ಕೊಂದ ನಂತರ ಅಲ್ಲ. ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವಾಗ ಆದಷ್ಟು ಬೇಗನೆ ಪ್ರಾಣ ಹೋಗುವಂತೆ ಕೊಂದರೆ ಆರೋಗ್ಯಕ್ಕೆ ಒಳ್ಳೆಯದು. ಹಾಗೆ ನೋಡಿದರೆ ಮುಸ್ಲಿಮರು ಮಾಂಸಕ್ಕಾಗಿ ಕೊಯ್ಯುವಾಗ ಪ್ರಾಣಿಗಳ ಜೀವ ಬೇಗನೇ ಹಾರಿ ಹೋಗುತ್ತದೆ” ಎಂದು ಹೇಳಿದ್ದಾರೆ. 

  • ಹಲಾಲ್‌ ಮಾಡಿದ ಮಾಂಸದ ನಿರಂತರ ಸೇವನೆಯಿಂದ ಆರೋಗ್ಯದಲ್ಲಿ ಏರು ಪೇರಾಗುತ್ತದೆ ಮತ್ತು ಹಲಾಲ್‌ ಮಾಡಿರುವ ಮಾಂಸವು ವಿಷಯುಕ್ತವಾಗುತ್ತದೆ ಎಂಬುವುದು ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ.
  • ಹಲಾಲ್‌ ಮಾಡುವುದು ಅವೈಜ್ಞಾನಿಕ. ಹಿಂದೂಗಳು ಮಾಡುವ ‘ಜಟ್ಕಾಕಟ್‌’ ವಿಧಾನ ವೈೆಜ್ಞಾನಿಕವಾಗಿದೆ. 

ಬಜರಂಗದಳದ ಈ ಎರಡು ವಾದಕ್ಕೂ ಯಾವುದೆ ಹುರುಳಿಲ್ಲ. ಆರೋಗ್ಯದಲ್ಲಿ ಏರು ಪೇರಾಗುವುದು ಮಾಂಸದ ಗುಣಮಟ್ಟದಲ್ಲಿ ಆಗಿರುವುದರಿಂದ, ಮುಸ್ಲಿಮರು ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ರೀತಿಯಿಂದಲ್ಲ. 

ಕೆ.ಸಿ. ರಘು ಅವರು, “ಪ್ರಾಣಿಗೆ ಕೊಡುವ ರಾಸಾಯನಿಕ ಭರಿತ ಆಹಾರದಿಂದಾಗಿ ಅದರ ಮಾಂಸದಲ್ಲಿ ವಿಷ ಇರಬಹುದೆ ಹೊರತು, ಪ್ರಾಣಿಯನ್ನು ಯಾವುದೇ ರೀತಿಯಲ್ಲಿ ಕೊಂದರೂ ಅದರ ಮಾಂಸದಲ್ಲಿ ವಿಷ ಹರಡುವುದಿಲ್ಲ. ಇವೆಲ್ಲಾ ಸುಳ್ಳಾಗಿದ್ದು, ಯಾವುದೆ ವೈಜ್ಞಾನಿಕ ಆಧಾರ ಇಲ್ಲ” ಎಂದು ಹೇಳುತ್ತಾರೆ.

ಇತ್ತೀಚೆಗೆ ಬಿಜೆಪಿ ಬೆಂಬಲಿತ ಸಂಘಟನೆಗಳು ರಾಜ್ಯದಲ್ಲಿ ತೀವ್ರ ರೀತಿಯ ‘ಇಸ್ಲಾಮೊಫೊಬಿಯಾ’ ಹರಡುತ್ತಿವೆ. ಯಾವುದೆ ರೀತಿಯಲ್ಲೂ ಯಾರಿಗೂ ತೊಂದರೆ ಮಾಡದ ಮುಸ್ಲಿಮರ ಆಚರಣೆ ಮತ್ತು ಸಂಪ್ರದಾಯಗಳನ್ನು ಈ ಸಂಘಟನೆಗಳು ‘ಅಪರಾಧಿಕರಣ’ ಮಾಡುತ್ತಿವೆ. ಈ ಮೂಲಕ ಜನರ ನಡುವೆ ಮುಸ್ಲಿಂ ದ್ವೇಷ, ಅಪನಂಬಿಕೆ ಹರಡುವಂತೆ ಮಾಡಿ, ಸಮಾಜದಲ್ಲಿ ಒಡಕುಂಟು ಮಾಡುತ್ತಿವೆ. ರಾಜ್ಯದ ಬಿಜೆಪಿ ಸರ್ಕಾರ ಇದಕ್ಕೆ ನೇರವಾಗಿಯೆ ಬೆಂಬಲಿಸುತ್ತಿದೆ ಎಂಬುವುದು ಅಪಾಯಕಾರಿಯಾದ ಸಂಗತಿಯಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಶಾರೂಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಹಿಷ್ಕರಿಸಿ ಎಂದು ಯೋಗಿ ಆದಿತ್ಯನಾಥ್ ಹೇಳಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights