ಸೆಲ್ಫಿ ತೆಗೆದುಕೊಳ್ಳುವಾಗ ದೋಣಿ ಮುಗುಚಿ ತಂದೆ-ಮಗ ಸಾವು…!
ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ 39 ವರ್ಷದ ವ್ಯಕ್ತಿ ಮತ್ತು ಅವರ ಮಗ ದೋಣಿ ಉರುಳಿಬಿದ್ದು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಸಂಜೆ ಪತ್ನಿ, ಮಗ, ಮಗಳು ಮತ್ತು ಇಬ್ಬರು ಸ್ನೇಹಿತರೊಂದಿಗೆ ವಂಗಿ ಪ್ರದೇಶದ ಉಜಾನಿ ಹಿನ್ನೀರಿನ ಹಳ್ಳದಲ್ಲಿ ದೋಣಿ ವಿಹಾರಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
“ಕುಟುಂಬದ ಸದಸ್ಯರೊಬ್ಬರು ಸೆಲ್ಫಿ ಕ್ಲಿಕ್ ಮಾಡುವಾಗ, ದೋಣಿ ಅಸಮತೋಲನಗೊಂಡು ಉರುಳಿಬಿದ್ದಿದೆ. ಆರು ಜನರೂ ನೀರಿನಲ್ಲಿ ಬಿದ್ದಿದ್ದಾರೆ” ಎಂದು ಸೋಲಾಪುರದ ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವಿ ಸತ್ಪುಟೆ ಹೇಳಿದ್ದಾರೆ.
ಘಟನೆಯಲ್ಲಿ ಓರ್ವ ವ್ಯಕ್ತಿ ಮತ್ತು ಅವರ 13 ವರ್ಷದ ಮಗ ಸಾವನ್ನಪ್ಪಿದ್ದಾರೆ. ಅವರ ಪತ್ನಿ, ಮಗಳು ಮತ್ತು ಇತರ ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕರ್ಮಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್ ಪಡುಲೆ ತಿಳಿಸಿದ್ದಾರೆ.

