ಫ್ಯಾಕ್ಟ್‌ಚೆಕ್: ಮದರ್ ತೆರೆಸಾ ಅವರನ್ನು ತಪ್ಪಾಗಿ ಚಿತ್ರಿಸಿದ ಬಲಪಂಥೀಯರು, ವಾಸ್ತವ ಬೇರೆ ಇದೆ
ಮದರ್ ತೆರೆಸಾ ಯಾರಿಗೆ ಗೊತ್ತಿಲ್ಲ ಹೇಳಿ, ‘ಸೇವೆ’ ಎಂಬ ಪದಕ್ಕೆ ಅನ್ವರ್ಥ ರೂಪದಂತೆ ಬದುಕಿದ್ದವರು ಮದರ್ ತೆರೆಸಾ. ಭಾರತದಲ್ಲಿ ಬಡವರು, ಅನಾರೋಗ್ಯ ಪೀಡಿತರು ಮತ್ತು ದೀನ ದಲಿತರ ಬಗ್ಗೆ ಆ ತಾಯಿ ಮಾಡಿರುವ ಸೇವೆ ಅನನ್ಯ. “ಇತರರಿಗಾಗಿ ಬದುಕದ ಬದುಕು ಬದುಕೇ ಅಲ್ಲ. ನೀವು ಹೋದಲ್ಲೆಲ್ಲ ಪ್ರೀತಿಯನ್ನು ಪಸರಿಸಿ. ನಿಮ್ಮ ಬಳಿ ಬಂದವರು ಸಂತಸಪಡದೆ ಹೋಗಬಾರದು” ಎಂಬ ಸ್ಫೂರ್ತಿದಾಯಕ ಮಾತುಗಳಿಂದ ಇಡೀ ಮನುಕುಲವನ್ನೇ ಗೆದ್ದಿದ್ದ ಭಾರತದ ‘ಅಮ್ಮ’ ಮದರ್ ತೆರೆಸಾ.
ಇಂತಹ ತಾಯಿಯ ಬಗ್ಗೆ ರಾಷ್ಟ್ರಧರ್ಮ ಎಂಬ ಬಲಪಂಥಿಯ ಪ್ರತಿಪಾದಕ ಸೋಶಿಯಲ್ ಮೀಡಿಯಾದ ಫೆಸ್‌ಬುಕ್ ಪೇಜ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅಗಸ್ಟ್ 26ಕ್ಕೆ ತೆರೆಸಾ ಅವರ 112ನೇ ವರ್ಷದ ಜನ್ಮ ದಿನಾಚರಣೆ. ಈ ಸಂದರ್ಭದಲ್ಲಿ ಅವರ ಕುರಿತು ಒಂದು ವಿಡಿಯೋವನ್ನು ಹಂಚಿಕೊಂಡಿರುವ ರಾಷ್ಟ್ರಧರ್ಮ ಪೇಸ್‌ಬುಕ್ (ಫೇಕ್) ಪೇಜ್ ಮದರ್ ತೆರೆಸಾ ಅವರನ್ನು ವಂಚಕಿ, ಸೇವೆ ಹೆಸರಿನಲ್ಲಿ ಮತಾಂತರ ಮಾಡಿ, ವಿದೇಶಿ ಹಣವನ್ನು ಹೊಡೆದು ತನ್ನ ಚಾರಿಟಿಗೆ ಜಮಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.
‘ ನಿಮಗೆ ತಿಳಿಯದ ಮದರ್ ತೆರೆಸಾ ಕರಾಳ ಮುಖ ‘ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಮದರ್ ತೆರೆಸಾ ತನ್ನ ಸ್ವಾರ್ಥಕ್ಕಾಗಿ ಈ ಸೇವೆಯನ್ನು ಮಾಡಿದ್ದಾರೆಯೇ ಎಂದು ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಮದರ್ ತೆರೆಸಾ ಪರಿಚಯ :
1910ರಲ್ಲಿ ಉತ್ತರ ಮೆಸಿಡೋನಿಯಾದ ಸ್ಕೋಪ್ಜೆಯಲ್ಲಿ ಜನಿಸಿದ ಮದರ್ ತೆರೇಸಾ ಅವರ ಮೊದಲ ಹೆಸರು ಆಗ್ನೆಸೇ ಗೋನ್ಕ್ಸೆ ಬೊಜಾಕ್ಸಿಯು. ಮದರ್ ತೆರೆಸಾ ಅವರ ತಂದೆ ಅವರು ಎಂಟು ವರ್ಷದವಳಿದ್ದಾಗ ಕುಟುಂಬವನ್ನು ಬಡತನಕ್ಕೆ ತಳ್ಳಿದರು. ಆಕೆಯನ್ನು ಚರ್ಚ್‌ನಲ್ಲಿ ಸಾಕಲಾಯಿತು. ತನ್ನ 12ನೇ ವಯಸ್ಸಿನಲ್ಲಿ ಅವರು ಸನ್ಯಾಸಿನಿಯಾಗಲು ನಿರ್ಧರಿಸಿದರು. ತನ್ನ 18ನೇ ವಯಸ್ಸಿನಲ್ಲಿ ಅವರು ಕ್ಯಾಥೋಲಿಕ್ ಸಿಸ್ಟರ್ಸ್ ಆಫ್ ಲೊರೆಟೊ ಆರ್ಡರ್‌ಗೆ ಸೇರಲು ಡಬ್ಲಿನ್‌ಗೆ ಹೋದರು. ನಂತರ ಒಂದು ವರ್ಷದ ಬಳಿಕ ಅವರು ಶಿಕ್ಷಕರಾಗಲು ಕೊಲ್ಕತ್ತಾಕ್ಕೆ ತೆರಳಿದರು.

1943ರ ಬಂಗಾಳದ ಕ್ಷಾಮದಿಂದ ಉಂಟಾದ ದುಃಖ ಮತ್ತು ಸಾವಿಗೆ ಅವರು ಸಾಕ್ಷಿಯಾದರು. ಆ ವೇಳೆ ಹಲವಾರು ಮೃತದೇಹಗಳು ಬೀದಿಗಳಲ್ಲಿ ಬಿದ್ದುದನ್ನು ನೋಡಿದ ಅವರ ಮೇಲೆ ಆ ದೃಶ್ಯ ಬಹಳ ಆಳವಾದ ಪ್ರಭಾವ ಬೀರಿತು. 1950ರಲ್ಲಿ ಮಿಷನರೀಸ್ ಆಫ್ ಚಾರಿಟಿ ಎಂಬ ಸ್ವಯಂ ಸೇವಾ ಸಂಘವನ್ನು ಕೊಲ್ಕತ್ತಾದಲ್ಲಿ ಸ್ಥಾಪಿಸಿದ ಮದರ್ ತೆರೇಸಾ ಸುಮಾರು 45 ವರ್ಷಗಳ ಕಾಲ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ನಾನು ಕಾನ್ವೆಂಟ್ ತೊರೆದು ಬಡವರಿಗೆ ಸಹಾಯ ಮಾಡಬೇಕೆಂಬುದು ಜೀಸಸ್ನ ಆದೇಶವಾಗಿತ್ತು ಎಂದು ಮದರ್ ತೆರೇಸಾ ಹೇಳಿಕೊಂಡಿದ್ದಾರೆ. ನೀಲಿ ಅಂಚು ಹೊಂದಿರುವ ಸರಳವಾದ ಬಿಳಿ ಕಾಟನ್ ಸೀರೆ ಧರಿಸತೊಡಗಿದ ಮದರ್ ತೆರೇಸಾ ಆರಂಭದಿಂದಲೂ ಜನರ ಮೇಲೆ ಸಹಾನುಭೂತಿ ಮತ್ತು ಪ್ರೀತಿಯನ್ನು ತೋರಿಸತೊಡಗಿದರು.
1910ರ ಆಗಸ್ಟ್ 26ರಂದು ಯುರೋಪ್‌ನ ಮಸಿಡೋನಿಯಾದಲ್ಲಿ ಜನಿಸಿದ ಮದರ್ ತೆರೆಸಾ 1997ರ ಸೆಪ್ಟೆಂಬರ್ 5ರಂದು ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಮಸಿಡೋನಿಯಾ ತೊರೆದ ನಂತರ ಹಲವಾರು ದೇಶ ಸುತ್ತಿದರೂ ಕೊನೆಗೆ ನೆಲೆಯೂರಿದ್ದು ಭಾರತದಲ್ಲಿ.

ಮದರ್ ತೆರೆಸಾ ಬಗ್ಗೆ RSS ಕೂಡ ಅಸಹನೆ :
ತೆರೆಸಾ ತೀರಿಕೊಂಡು 25 ವರ್ಷಗಳಾಗಿದ್ದರೂ, ಸಂಘ ಪರಿವಾರ ಮತ್ತು ಬಲಪಂಥಿಯರಿಗೆ ಮಾತ್ರ ತೆರೆಸಾ ಮೇಲಿರುವ ಅಸಹನೆ ಕಡಿಮೆ ಆಗಿಲ್ಲ. 2014ರಲ್ಲಿ ಕೇಂದ್ರದಲ್ಲಿ NDA ಅಧಿಕಾರಕ್ಕೆ ಬಂದ ನಂತರ ಈ ಚರ್ಚೆಗಳು ಹೆಚ್ಚು ಮುನ್ನಲೆಗೆ ಬಂದಿತ್ತು. 2015ರಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಮದರ್ ತೆರೇಸಾ ಅವರ ಸೇವೆ ನಿಸ್ವಾರ್ಥವಾಗಿತ್ತು. ಆದರೆ, ಆ ಸೇವೆಯ ಹಿಂದಿನ ಉದ್ದೇಶ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದೇ ಆಗಿತ್ತು ಎಂದಿದ್ದರು.

ಬಡ ಜನರಿಗೆ ಯೋಗ್ಯವಾದ ಆಸ್ಪತ್ರೆಯನ್ನು ನಡೆಸಲು ಅವರ ಬಳಿ ಹಣವಿತ್ತು. ಆದರೆ ಅವರು ಎಂದಿಗೂ ಆ ರೀತಿ ಮಾಡಲಿಲ್ಲ. ಚಿಕಿತ್ಸೆ ನೀಡದೆ ನೋವು ನಿವಾರಣೆಗಾಗಿ ಜೀಸಸ್ನಲ್ಲಿ ಪ್ರಾರ್ಥಿಸುತ್ತೇವೆ ಎಂದು ಹೇಳುತ್ತಲೇ ಎಲ್ಲರ ಪ್ರೀತಿ, ಗೌರವವನ್ನು ಗಳಿಸಿದರು, ಮತಾಂತರ ಮಾಡಿದರು, ಕೆಲವು ಹಗರಣದಲ್ಲಿ ಮದರ್ ತೆರೇಸಾ ಅವರ ಒಳಗೊಳ್ಳುವಿಕೆಯನ್ನು ಮುಚ್ಚಿಹಾಕಲಾಯಿತು. ಅವರು ನಿಜವಾಗಿಯೂ ಸಂತಳೇ? ಅಥವಾ ಪಾಪಿಯೇ? ಅಥವಾ ಎರಡರಲ್ಲೂ ಸ್ವಲ್ಪವೇ? ಎಂಬ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.

ಈಗ ಮಾತನಾಡುತ್ತಿರುವ RSS ಆಗಲಿ ರಾಷ್ಟ್ರಧರ್ಮದ ಪ್ರತಿಪಾದಕರಾಗಲಿ ಮದರ್ ತೆರೆಸಾ ಬಗ್ಗೆ ಇಂತಹ ಆರೋಪಗಳನ್ನು ಮಾಡಿರುವುದು ಇದೇ ಮೊದಲೇನಲ್ಲ. ಬಹಳ ಹಿಂದಿನಿಂದಲೂ ಇಂತಹ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ, ಮದರ್ ತೆರೆಸಾ ಸಾವಿನ ನಂತರ ಅವರ ಕುರಿತು ಸಾಕಷ್ಟು ಊಹಾಪೋಹಗಳು ಕೇಳಿಬಂದಿದ್ದು ಅದು ಸತ್ಯ ಎಂಬುದಕ್ಕ ಯಾವುದೇ ಆಧಾರವಿಲ್ಲ.
ಭಾರತದಲ್ಲಿ ಜಾತಿ ಎಂಬ ರೋಗಗ್ರಸ್ಥ ವ್ಯವಸ್ಥೆಯೇ ಸರಿ ಎಂದು ಪ್ರತಿಪಾದಿಸುವ ಸಂಘ ಪರಿವಾರ ಮತ್ತು ಬಲಪಂಥೀಯರು, ದಲಿತ ಮತ್ತು ಇತರೆ ಹಿಂದುಳಿದ ಸಮುದಾಯವನ್ನು ಮುಟ್ಟಿಸಿಕೊಳ್ಳಲು ಅಸಹ್ಯ ಪಡುವ ಸಂದರ್ಭ ಇದ್ದಾಗ, ಅದರಲ್ಲೂ ಕೊಳಚೆ ಪ್ರದೇಶದ ಹಿಂದುಳಿದ ಜಾತಿಯ ಬಡವರಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಪ್ರೀತಿ, ಮಮತೆ ವಾತ್ಸಲ್ಯವನ್ನು ತೋರಿಸಿ ಅವರಿಗೆ ಚಿಕಿತ್ಸೆ, ಸಾಂತ್ವನ ನೀಡಿ ಗುಣಮುಖರನ್ನಾಗಿ ಮಾಡುತ್ತಿದ್ದ ಮದರ್ ತೆರೆಸಾ ಅವರ ಸೇವೆಗೆ ಬೆಲೆ ಕಟ್ಟಲಾಗದು. ಆಗ ಈ RSS ಮತ್ತು ರಾಷ್ಟ್ರಧರ್ಮದ ಪ್ರತಿಪಾದಕರು ಎಲ್ಲಿದ್ದರು ಎಂಬುದು ಸಾರ್ವಜನಿಕ ಪ್ರಶ್ನೆಯಾಗಿದೆ. ಇದಕ್ಕೆ ಅವರು ಉತ್ತರಿಸುತ್ತಾರೆಯೇ?
ತೆರೆಸಾ ಸೇವೆಗೆ ಒಲಿದ ಪ್ರಶಸ್ತಿ ಮತ್ತು ಗೌರವಗಳು
ಮದರ್ ತೆರೇಸಾ ಅವರು ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದು. ಅವರು 1979 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಮತ್ತು 1980 ರಲ್ಲಿ ಭಾರತ ರತ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. ಜನರಲ್ಲಿ ಸ್ನೇಹವನ್ನು ಉತ್ತೇಜಿಸಲು ಮತ್ತು 1990 ರಲ್ಲಿ ಬಡವರು ಮತ್ತು ಅನಾಥರ ಸಹಾಯಕ್ಕಾಗಿ ಅವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಯನ್ನು ನೀಡಲಾಯಿತು. ಮತ್ತು ಶಾಂತಿ ದೇವತೆ ‘ ಎಂಬ ಗೌರವವನ್ನು ಪಡೆದಿದ್ದಾರೆ.

ಹೆಸರಾಂತ ಪತ್ರಕರ್ತ ಲೇಖಕ ಕುಶವಂತ್ ಸಿಂಗ್ ಒಮ್ಮೆ ಮದರ್ ತೆರೆಸಾ ಅವರ ಬಳಿ ಕೇಳುತ್ತಾರೆ. ತೆರೆಸಾ ನಿನ್ನಲ್ಲಿ ಸಾಯುತ್ತಿರುವವರ ಮತ್ತು ನೋಯುತ್ತಿರುವವರ ಬಗ್ಗೆ ಆಸಕ್ತಿ ಯಾಕೆ, ಯಾವಾಗ ಮೂಡಿತು?
ಅದಕ್ಕೆ ಉತ್ತರಿಸಿದ ಮದರ್ ತೆರೆಸಾ ಅದು ನನ್ನ ಒಳಗಿನ ದನಿ, ದೇವರ ಪ್ರೇರಣೆ, ಸಾಮಾನ್ಯವಾಗಿ ಯಾರಿಗೂ ಸಾಯುತ್ತಿರುವ ವೃದ್ಧರು, ನೋವಿನಿಂದ ಒದ್ದಾಡುತ್ತಿರುವ ರೋಗಿಗಳು, ಅವಮಾನದಿಂದ ಬೇಯುತ್ತಿರುವ ಅಂಗವಿಕಲರು ಇಷ್ಟವಾಗುವುದಿಲ್ಲ. ಹಾಗೆ ಯಾರಿಗೂ ಬೇಡವಾದವರು ನನಗೆ ಬೇಕು, ಯಾಕೆಂದರೆ ಯಾರೂ ಅವರನ್ನು ಪ್ರೀತಿಸುವುದಿಲ್ಲ; ಅವರ ಬಗ್ಗೆ ಕಾಳಜಿ ವಹಿಸಿಕೊಳ್ಳುವುದಿಲ್ಲ ಎಂದಿದ್ದರು ತೆರೆಸಾ..
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಜೀವಂತವಾಗಿರುವ BSF ಸೈನಿಕನನ್ನು’ ಹುತಾತ್ಮ’ ಎಂದು ಸುಳ್ಳು ಸುದ್ದಿ ಹಂಚಿಕೆ

