ಬಿಜೆಪಿ ಸರ್ವಾಧಿಕಾರಿ ಧೋರಣೆ ಹೊಂದಿದೆ: BJP ತೊರೆದು AAP ಸೇರಿದ ಕೌನ್ಸಿಲರ್!
ಬಿಜೆಪಿಯ ಆಡಳಿತವು ಸರ್ವಾಧಿಕಾರಿ ಧೋರಣೆಯನ್ನು ತಳೆದಿದೆ ಎಂದು ಆರೋಪಿಸಿರುವ ದೆಹಲಿ ಪಾಲಿಕೆ ಕೌನ್ಸಿಲರ್ ಒಬ್ಬರು ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಕಿಸಾನ್ ಮೋರ್ಚಾದ ರಾಜ್ಯ ಅಧ್ಯಕ್ಷರಾಗಿದ್ದ ದೆಹಲಿಯ ಗೊಂಡಾ ವಿಧಾನಸಭಾ ಕ್ಷೇತ್ರದ, ಬ್ರಹ್ಮಪುರಿ ವಾರ್ಡ್‌ನ ಕೌನ್ಸಿಲರ್ ರಾಜ್ ಕುಮಾರ್ ಬಲ್ಲಾನ್ ಅವರು ಬಿಜೆಪಿಯ ಆಡಳಿತ ಧೋರಣೆಯನ್ನು ಖಂಡಿಸಿ ಪಕ್ಷ ತೊರೆದಿದ್ದಾರೆ. ದೆಹಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಲವೇ ತಿಂಗಳುಗಳ ಅಂತರದಲ್ಲಿ ಅವರು ಎಎಪಿಗೆ ಸೇರ್ಪಡೆಯಾಗಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
“ಬಿಜೆಪಿಯು ನಡೆಸುತ್ತಿರುವ ರಾಜಕಾರಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಅವರ ರಾಜಕೀಯದ ಹಾದಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಅವರು ಕೇವಲ ಸೇಡು ತೀರಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯಗಳು ಸರ್ವಾಧಿಕಾರದತ್ತ ಸಾಗುತ್ತಿವೆ. ಆದ್ದರಿಂದ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ” ಎಂದು ರಾಜ್‌ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ತಪ್ಪು ಮಾಡಿದ್ದೇವೆಂದು ತಲೆ ಬೋಳಿಸಿಕೊಂಡು, ಬಿಜೆಪಿ ತೊರೆದು ಟಿಎಂಸಿ ಸೇರಿದ 200 ಕಾರ್ಯಕರ್ತರು!
ಬಿಜೆಪಿ ತೊರೆದು ಎಎಪಿ ಸೇರಿದ ರಾಜ್‌ಕುಮಾರ್ ಅವರ ವಿಚಾರದ ಬಗ್ಗೆ ಮಾತನಾಡಿರುವ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, “ಬಿಜೆಪಿ ಮತ್ತು ಕಾಂಗ್ರೆಸ್‌ನ ಇನ್ನೂ ಹಲವು ಮಂದಿ ಎಎಪಿಗೆ ಸೇರಲಿದ್ದಾರೆ” ಎಂದು ಹೇಳಿದ್ದಾರೆ.
“ನಾವೆಲ್ಲರೂ ಒಂದೇ ಗುರಿ ಹೊಂದಿದ್ದೇವೆ. ದಿಲ್ಲಿ ಸರಕಾರದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ನಮ್ಮ ಕೆಲಸದ ವೇಗವೂ ಹೆಚ್ಚಾಯಿತು. ನಾಗರಿಕ ಇಲಾಖೆಗಳಲ್ಲೂ ಬದಲಾವಣೆಗಳಾಗಬೇಕು” ಎಂದು ಅವರು ಹೇಳಿದರು.
ಮೂರು ಕಾರ್ಪೊರೇಷನ್ ಗಳ ಪೌರ ಇಲಾಖೆಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: OBCಗಳಿಗೆ ರಾಜಕೀಯ ಮೀಸಲಾತಿ ತರುವಲ್ಲಿ ಬಿಜೆಪಿ ವಿಫಲವಾದರೆ ರಾಜಕೀಯದಿಂದ ನಿವೃತ್ತಿ: ದೇವೇಂದ್ರ ಫಡ್ನವಿಸ್

