ತಪ್ಪು ಮಾಡಿದ್ದೇವೆಂದು ತಲೆ ಬೋಳಿಸಿಕೊಂಡು, ಬಿಜೆಪಿ ತೊರೆದು ಟಿಎಂಸಿ ಸೇರಿದ 200 ಕಾರ್ಯಕರ್ತರು!

ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಹೂಗ್ಲಿ ಜಿಲ್ಲೆಯ ಸುಮಾರು 200 ಕಾರ್ಯಕರ್ತರು, ಚುನಾವಣೆಯ ನಂತರ ಮತ್ತೆ ಬಿಜೆಪಿಗೆ ಕೈಕೊಟ್ಟು ಟಿಎಂಸಿಗೆ ಹಿಂದಿರುಗಿದ್ದಾರೆ. ತಾವು ಬಿಜೆಪಿ ಸೇರಿ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಟ್ಟಿರುವ ಕಾರ್ಯಕರ್ತರು, ತಮ್ಮ ತಲೆ ಬೋಳಿಸಿಕೊಂಡು, ಗಂಗಾಜಲವನ್ನು ಸಿಂಪಡಿಕೊಂಡಿ ತಮ್ಮನ್ನು ತಾವು ಶುದ್ದೀಕರಿಸಿಕೊಂಡು ಟಿಎಂಸಿಗೆ ಸೇರಿದ್ದಾರೆ.

ಅರಂಬಾಗ್‌ನಲ್ಲಿರುವ ಬಡವರಿಗೆ ಉಚಿತ ಆಹಾರವನ್ನು ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ, ಅರಂಬಾಗ್ ಸಂಸದ ಅಪರೂಪಾ ಪೋದ್ದಾರ್ ಅವರ ಸಮ್ಮುಖದಲ್ಲಿ ಹೂಗ್ಲಿಯ ಬಿಜೆಪಿ ಕಾರ್ಯಕರ್ತರು ಟಿಎಂಸಿ ಧ್ವಜವನ್ನು ಹಿಡಿದು ಪಕ್ಷಕ್ಕೆ ಸೇರಿದ್ದಾರೆ.

ಟಿಎಂಸಿ ಸೇರಿದ ಬಳಿಕ ಮಾತನಾಡಿರುವ ಕೆಲವು ದಲಿತ ಸಮುದಾಯದ ಕಾರ್ಯಕರ್ತರು, ತಾವು ಬಿಜೆಪಿಗೆ ಸೇರಿ ತಪ್ಪು ಮಾಡಿದ್ದೇವೆ. ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು, ನಂತರ ಮತ್ತೆ ಟಿಎಂಸಿಗೆ ಮರಳಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಜಯಗಳಿಸಿದಾಗಿನಿಂದ, ಪಶ್ಚಿಮ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ನೂರಾರು ಕಾರ್ಯಕರ್ತರು ಪಕ್ಷಕ್ಕೆ ಮರಳುತ್ತಿದ್ದಾರೆ ಎಂದು ಅಪರೂಪಾ ಪೋದ್ದಾರ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಪಶ್ಚಿಮ ಬಂಗಾಳದ ಬಿರ್ಭಂನಲ್ಲಿ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ತಮ್ಮನ್ನು ಟಿಎಂಸಿಗೆ ಸೇರಿಸಿಕೊಳ್ಳಬೇಕು ಎಂದು ಪಕ್ಷದ ಕಚೇರಿಯ ಹೊರಗೆ ಧರಣಿ ನಡೆಸಿದ್ದರು. ನಂತರ ಅವರನ್ನು ಟಿಎಂಸಿಗೆ ಸೇರಿಸಿಕೊಳ್ಳಲಾಯಿತು. ಈ ಕಾರ್ಯಕರ್ತರು ತಾವು ಪಕ್ಷ ಬದಲಾಯಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.

ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ ಪಕ್ಷದ ಕಾರ್ಯಕರ್ತರು ಟಿಎಂಸಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಬಣ್ಣಿಸಿದೆ. ಈ ಕಾರ್ಯಕರ್ತರು ತಮ್ಮ ಮತ್ತು ತಮ್ಮ ಕುಟುಂಬದ ಭಯಕ್ಕಾಗಿ ಮತ್ತೆ ಆಡಳಿತ ಪಕ್ಷಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಅದು ಹೇಳಿದೆ.

ಇದನ್ನೂ ಓದಿ: 2022ರ ಯುಪಿ ಚುನಾವಣೆ: ‘ಹಿಂದೂತ್ವ ಐಕಾನ್’ ಯಾರು – ಮೋದಿ ಅಥವಾ ಯೋಗಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights