ಒಂದು ತೆಂಗಿನಕಾಯಿಯಿಂದ 20ಕ್ಕೂ ಹೆಚ್ಚು ಸಸಿಗಳ ಬೆಳೆ: ತಮಿಳುನಾಡು ಕೃಷಿ ವಿವಿ ಆವಿಷ್ಕಾರ

ತೆಂಗಿನಕಾಯಿಗಳ ಉತ್ಪಾದನೆ ಹೆಚ್ಚಿಸುವ ಮತ್ತು ಹೊಸ ತಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದ ತಮಿಳುನಾಡಿನ ಕೃಷಿ ವಿಶ್ವವಿದ್ಯಾನಿಲಯವು, ಒಂದೇ ತೆಂಗಿನಕಾಯಿಯಿಂದ ಕನಿಷ್ಠ 20 ತೆಂಗಿನ ಸಸಿಗಳನ್ನು ಬೆಳೆಸುವ ಅಂಗಾಂಶ ಕಸಿ ಮಾದರಿಯನ್ನು ಅಭಿವೃದ್ಧಿ ಪಡಿಸಿದೆ.

ಇದೂವರೆಗೂ ಒಂದು ತೆಂಗಿನ ಕಾಯಿಯಿಂದ ಒಂದೇ ತೆಂಗಿನ ಸಸಿ ಬೆಳೆಸಲು ಸಾಧ್ಯವಾಗುತ್ತಿತ್ತು. ಇದರಿಂದಾಗಿ ಸಸಿಗಳನ್ನು ಬೆಳೆಸುವುದಕ್ಕಾಗಿ ಸಾಕಷ್ಟು ಪ್ರಮಾಣ ತೆಂಗಿನಕಾಯಿಗಳು ಬಳಕೆಯಾಗುತ್ತಿವೆ. ಅಲ್ಲದೆ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಸಸಿಗಳನ್ನು ಪೂರೈಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ತೆಂಗಿನ ಅಂಗಾಂಶ ಕಸಿ ಪ್ರಯೋಗಕ್ಕೆ ಮುಂದಾಗಿದ್ದು, ಯಶಸ್ವಿಯಾಗಿದೆ ಎಂದು ವಿವಿಯ ಸಂಶೋಧಕರು ಹೇಳಿದ್ದಾರೆ.

ಬೀಜದ ಉದ್ದೇಶಕ್ಕಾಗಿಯೇ ಶೇ.30ರಷ್ಟು ತೆಂಗಿನಕಾಯಿಗಳ ಪೂರೈಕೆಯಾಗುತ್ತಿವೆ. ಆದರೂ, ಒಂದು ಕೋಟಿ ಸಸಿಗಳಿಗೆ ಬೇಡಿಕೆ ಇದ್ದರೆ, ಸುಮಾರು 30 ಲಕ್ಷ ಸಸಿಗಳಷ್ಟೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಅಲ್ಲದೆ, ಕಳೆದ ಒಂದು ದಶಕದಲ್ಲಿ ತೆಂಗಿನಕಾಯಿಯ ಬೇಡಿಕೆ 500 ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ಬೇಡಿಕೆ ಹಾಗೂ ಪೂರೈಕೆ ನಡುವೆ ಬೃಹತ್‌ ಅಂತರ ಸೃಷ್ಟಿಯಾಗಿದೆ. ಬೇಡಿಕೆಗೆ ತಕ್ಕ ಹಾಗೆ ತೆಂಗಿನಕಾಯಿಗಳನ್ನು ಬೆಳೆಯಬೇಕಿದ್ದರೆ ವೈಜ್ಞಾನಿಕ ನೆರವು ಅತ್ಯಗತ್ಯವಾಗಿತ್ತು. ಅದು ಅಂಗಾಂಶ ಕಸಿಯಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ಒಂದು ತೆಂಗಿನಕಾಯಿಯಿಂದ ಸುಮಾರು 20 ಸಸಿಗಳನ್ನು ಬೆಳಸಬಹುದಾದ ಈ ಆವಿಷ್ಕಾರಕ್ಕೆ ತಮಿಳುನಾಡು ಸರ್ಕಾರದ ಯೋಜನಾ ಆಯೋಗದ ಬೆಂಬಲ ನೀಡಿದ್ದು, ಅದರ ಬೆಂಬಲದೊಂದಿಗೆ ಯಶಸ್ವಿ ಆವಿಷ್ಕಾರ ಸಾಧ್ಯವಾಗಿದೆ ಎಂದು ವಿವಿಯ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಬಂಡಾಯ ನಾಯಕರನ್ನು ಹಣಿಯುತ್ತಿದೆಯೇ ಕಾಂಗ್ರೆಸ್‌? ಯುಪಿ ಚುನಾವಣಾ ಸಮಿತಿಗಳಲ್ಲಿ ಪತ್ರ ಬರೆದವರಿಗಿಲ್ಲ ಸ್ಥಾನ

Spread the love

Leave a Reply

Your email address will not be published. Required fields are marked *