FaceBook-BJP ನಂಟು: FB ಜಾಹಿರಾತಿಗಾಗಿ ಮೋದಿ ಸರ್ಕಾರ ಸುರಿಯುತ್ತಿರುವ ಹಣವೆಷ್ಟು ಗೊತ್ತಾ?

ಸಾಮಾಜಿಕ ಜಾಲತಾಣ FaceBook‌ ಭಾರತದಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪಗಳ ನಡುವೆ ಫೇಸ್‌ಬುಕ್‌ಗೆ ಬಿಜೆಪಿಯೇ ಅತಿದೊಡ್ಡ ಜಾಹೀರಾತುದಾರ ಎಂಬ ವರದಿ ಹೊರಬಿದ್ದಿದ್ದು, ಒಟ್ಟು ಜಾಹಿರಾತುಗಳಲ್ಲಿ ಮೋದಿ ಪಕ್ಷವೇ ಶೇ.70ರಷ್ಟು ಜಾಹೀರಾತುಗಳನ್ನು ನೀಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಫೇಸ್‌ಬುಕ್‌ನಲ್ಲಿ ಜಾಹೀರಾತಿಗಾಗಿ ಬಿಜೆಪಿ ಖರ್ಚು ಮಾಡುವ ಹಣದ ಮೌಲ್ಯ ನಿಜಕ್ಕೂ ಜನ ಸಾಮಾನ್ಯರನ್ನು ದಂಗುಬಡಿಸುತ್ತದೆ. ಕಳೆದ 18 ತಿಂಗಳಲ್ಲಿ ಆಡಳಿತ ಪಕ್ಷ ಬಿಜೆಪಿ ಸಾಮಾಜಿಕ, ರಾಜಕೀಯ ಮತ್ತು ಚುನಾವಣಾ ವಿಚಾರಗಳ ಜಾಹೀರಾತುಗಾಗಿ ಫೇಸ್‌ಬುಕ್‌ಗೆ ಸುರಿದ ಹಣ 4.61 ಕೋಟಿ ರೂಪಾಯಿ ಅಂದರೆ ನೀವು ನಂಬಲೇಬೇಕು. ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲು ಸಾಮಾಜಿಕ ಜಾಲತಾಣಗಳು ವಹಿಸಿದ ಪಾತ್ರವನ್ನು ಯಾರೂ ಅಲ್ಲಗೆಳೆಯಲಾರರು.

ಇದನ್ನೂ ಓದಿFacebook-BJP ನಂಟು: ಫೇಸ್‌ಬುಕ್‌ನ ಭಾರತದ ನಿರ್ದೇಶಕಿ ಅಂಖಿದಾಸ್‌ ವಿರುದ್ಧ ಎಫ್‌ಐಆರ್‌!

ಪ್ರಪಂಚದಲ್ಲಿ ಫೇಸ್‌ಬುಕ್ ಅನ್ನು ಅತಿ ಹೆಚ್ಚು ಬಳಸುವವರು ಭಾರತೀಯರೇ. ಜಾಹೀರಾತುಗಳಿಗೆ ಖರ್ಚು ಮಾಡುವ ಹಣದ ಡೇಟಾ ಟ್ರ್ಯಾಕಿಂಗ್ ಮಾಹಿತಿ ಪ್ರಕಾರ, ಬಿಜೆಪಿ ಪಕ್ಷ ಕಾರ್ಪೊರೇಟ್ ಕಂಪನಿಗಳಿಗಿಂತ ಹೆಚ್ಚಾಗಿ ಜಾಹೀರಾತಿಗೆ ಹಣ ವ್ಯಯಿಸುತ್ತದೆ. ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನದಲ್ಲಿದೆ.

ಟಾಪ್ 10 ಜಾಹೀರಾತುದಾರರಲ್ಲಿ ಬಿಜೆಪಿಯೊಂದಿಗೆ ಸಂಬಂಧದಲ್ಲಿರುವ, ಬಿಜೆಪಿಯ ಸಿದ್ಧಾಂತ, ಅಭಿಪ್ರಾಯಗಳನ್ನು ಉತ್ತೇಜಿಸುವ ನಾಲ್ಕು ಪೇಜ್‌ಗಳು ಮತ್ತು ವೆಬ್‌ಸೈಟ್‌ಗಳು ಸಹ ಸೇರಿವೆ.

ಮುಖ್ಯವಾಗಿ ‘ಮೇರಾ ಪೆಹ್ಲಾ ವೋಟ್ ಮೋದಿ ಕೋ’(ನನ್ನ ಮೊದಲ ಮತ ಮೋದಿಯವರಿಗೆ) ಮತ್ತು ‘ಭಾರತ್ ಕಿ ಮನ್ ಕೀ ಬಾತ್’ (ಭಾರತದ ಮನದ ಮಾತು) ಎಂಬ ಫೇಸ್‌ಬುಕ್‌ ಪೇಜ್‌ಗಳು ಪ್ರಮುಖ ಜಾಹೀರಾತುದಾರರಾಗಿದ್ದಾರೆ. ಮೇರಾ ಪೆಹ್ಲಾ ವೋಟ್ ಮೋದಿ ಕೋ ಪೇಜ್ ಜಾಹೀರಾತುಗಳಿಗೆ 1.39 ಕೋಟಿ ರೂಪಾಯಿ ವ್ಯಯಿಸಿದರೆ, ಎರಡನೇ ಪೇಜ್ ಭಾರತ್ ಕಿ ಮನ್ ಕೀ ಬಾತ್ ಸುಮಾರು 2.24 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಇವುಗಳ ಜೊತೆಗೆ ಸುದ್ದಿ ಮತ್ತು ಮಾಧ್ಯಮ ವೆಬ್‌ಸೈಟ್ ಎಂದು ವಿಭಾಗಿಸಲಾಗಿರುವ ‘ನೇಷನ್ ವಿತ್ ನಮೋ’ ಎಂಬ ಪೇಜ್ ಕೂಡ 1.28 ಕೋಟಿ ರೂಪಾಯಿ ಜಾಹೀರಾತು ನೀಡಿದೆ.

ವೆಬ್‌ಸೈಟ್, ಫೇಸ್‌ಬುಕ್ ಪೇಜ್‌ಗಳ ಕಥೆ ಇಷ್ಟಾದರೆ, ಬಿಜೆಪಿಯ ನಾಯಕರುಗಳು ಸಹ ನಾವೇನು ಕಡಿಮೆ ಇಲ್ಲ ಎನ್ನುವಂತೆ ಫೇಸ್‌ಬುಕ್‌ಗೆ ಜಾಹೀರಾತು ನೀಡಿದ್ದಾರೆ. ಬಿಜೆಪಿ ಮುಖಂಡ, ಮಾಜಿ ಸಂಸದ ಆರ್.ಕೆ.ಸಿನ್ಹಾ ಜಾಹೀರಾತೀಗಾಗಿ 65 ಲಕ್ಷ ರೂಪಾಯಿ ನೀಡಿದ್ದಾರೆ. ಒಟ್ಟಾರೆ ಎಲ್ಲಾ ಮೂಲಗಳು ಸೇರಿ ಸರಿಸುಮಾರು 10.17 ಕೋಟಿ ರೂಪಾಯಿಗಳು ಫೇಸ್‌ಬುಕ್‌ಗೆ ಸಂದಿವೆ. ಫೇಸ್‌ಬುಕ್‌ಗೆ ಬರುವ ಜಾಹೀರಾತುಗಳಲ್ಲಿ ಶೇ.70ರಷ್ಟು ಆಡಳಿತ ಪಕ್ಷ ಬಿಜೆಪಿಯಿಂದ ಫೇಸ್‌ಬುಕ್‌ಗೆ ಸಂದಿದೆ.

ಈ ಡೇಟಾ ಗಮನಿಸಿದರೇ ಆಡಳಿತ ಪಕ್ಷ ಬಿಜೆಪಿ ಅಧಿಕಾರಕ್ಕೆ ಬರಲು ಸಾಮಾಜಿಕ ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದೆ ಎಂಬುದು ತಿಳಿಯುತ್ತದೆ. ಹೀಗಾಗಿ ಫೇಸ್ ಬುಕ್ ವಿರುದ್ಧ ಕೆಲ ಪ್ರಜ್ಞಾವಂತ ನಾಗರಿಕರು ಮಾಡುತ್ತಿರುವ ಆರೋಪವನ್ನು ತಳ್ಳಿಹಾಕುವಂತಿಲ್ಲ.


ಇದನ್ನೂ ಓದಿಫೇಸ್‌ಬುಕ್‌ಅನ್ನು ಬಿಜೆಪಿ ನಿಯಂತ್ರಿಸುತ್ತಿದೆ; RSSನ ದ್ವೇಷದ ಪೋಸ್ಟ್‌ಗಳಿಗೆ FB ನೆರವಾಗಿದೆ: ವರದಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights