ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ 18 ಮಂದಿ BJPಗೆ ಸೇರ್ಪಡೆ!
ಕೇರಳದ ಮಾಜಿ ಹೈಕೋರ್ಟ್ ನ್ಯಾಯಾಧೀಶರಾದ ಪಿ ಎನ್ ರವೀಂದ್ರನ್ ಮತ್ತು ವಿ ಚೀತಂಬರೇಶ್ ಹಾಗೂ ಹಲವಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ 18 ಮಂದಿ ಭಾನುವಾರ ಬಿಜೆಪಿಗೆ ಸೇರಿದ್ದಾರೆ.
ಕೇರಳದ ತ್ರಿಪುಣಿಥುರದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ‘ವಿಜಯ ಯಾತ್ರೆ’ಯ ಸಮಾರಂಭದಲ್ಲಿ 18 ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
‘ಲವ್ ಜಿಹಾದ್’ ಕಾನೂನನ್ನು ಬೆಂಬಲಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ್ದ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ ಚೀತಂಬರೇಶ್ ಇದೀಗ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಅವರು ಪಾಲಕ್ಕಾಡ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಎಬಿವಿಪಿ ಕಾರ್ಯಕರ್ತನಾಗಿದ್ದೆ ಎಂದು ಅವರು ಹೇಳಿದ್ದಾರೆ.
“ನಾನು ಬಿಜೆಪಿಯ ಸಹ ಪ್ರಯಾಣಿಕನಾಗಿದ್ದೆ. ಈಗ ನಾನು ಅಧಿಕೃತವಾಗಿ ಪಕ್ಷವನ್ನು ಸೇರಿಕೊಳ್ಳುತ್ತಿದ್ದೇನೆ. ನಾನು ದೆಹಲಿಯಲ್ಲಿರುವುದರಿಂದಾಗಿ ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ”ಎಂದು ಚಿತಂಬರೇಶ್ ಟಿಎನ್‌ಐಇಗೆ ತಿಳಿಸಿದರು.
ಇವರಲ್ಲದೆ, ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿ ಆರ್ ಮೆನನ್ ಮತ್ತು ಬಿಪಿಸಿಎಲ್ ಮಾಜಿ ಜನರಲ್ ಮ್ಯಾನೇಜರ್ ಸೋಮಚುದ್ದನ್ ಅವರು ಬಿಜೆಪಿ ಸೇರಿದ್ದಾರೆ. “ಮಾಜಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಶಿಜಿ ರಾಯ್ ಮತ್ತು ಇತರ 12 ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿಗೆ ಸೇರಿದ್ದಾರೆ” ಎಂದು ಬಿಜೆಪಿ ವಕ್ತಾರರು ಇಲ್ಲಿ ತಿಳಿಸಿದ್ದಾರೆ.
Read Also: ಪ್ರಧಾನಿ ಹುದ್ದೆಗೆ ರಾಹುಲ್‌ಗಾಂಧಿ ಬೆಸ್ಟ್; ಕಾಂಗ್ರೆಸ್‌ಗೆ ಚುನಾವಣಾ ಕಣದಲ್ಲಿರುವ 2 ರಾಜ್ಯಗಳ ಬೆಂಬಲ!