ಮಾಸ್ಕ್ ಹಾಕುವುದು ಮುಖಕ್ಕೋ – ಕಾಲಿಗೋ?; ಬಿಜೆಪಿ ಸಚಿವರ ಫೋಟೋ ವೈರಲ್!
ಕೊರೊನಾದಿಂದಾಗಿ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವುದು ದೇಶದಲ್ಲಿ ಕಡ್ಡಾಯವಾಗಿದೆ. ಆದರೆ, ಉತ್ತರಾಖಂಡದ ಸಚಿವರೊಬ್ಬರು ಮಾಸ್ಕ್ಅನ್ನು ತಮ್ಮ ಕಾಲಿಗೆ ಹಾಕಿಕೊಂಡು ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು, ಮಾಸ್ಕ್ ಹಾಕಿಕೊಳ್ಳುವುದು ಕಾಲಿಗೋ-ಮುಖಕ್ಕೂ ಎಂದು ನೆಟ್ಟಿಗರು ಚೇಡಿಸಿದ್ದಾರೆ.
ಉತ್ತರಾಖಂಡದ ಸಚಿವ ಸ್ವಾಮಿ ಯತೀಶ್ವರಾನಂದ ಅವರು ಕಾಲಿನ ಬೆರಳಿಗೆ ಮಾಸ್ಕ್ ಸಿಕ್ಕಿಸಿಕೊಂಡು ಕುಳಿತಿರುವ ಫೋಟೋ ವೈರಲ್ ಆಗಿದೆ. ಅದೇ ಪೋಟೋದಲ್ಲಿ ಇತರ ಉಳಿದ ನಾಲ್ವರು ಮಾಸ್ಕ್ ಹಾಕದೇ ಕುಳಿತಿರುವುದನ್ನೂ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಫೋಟೋವನ್ನು ಹಂಚಿಕೊಂಡು ಕಿಡಿಕಾರಿರುವ ಉತ್ತರಾಖಂಡದ ಕಾಂಗ್ರೆಸ್ ವಕ್ತಾರೆ ಗರೀಮಾ ಮೆಹ್ರಾ ದಸೌನಿ, ‘ಆಡಳಿತ ಪಕ್ಷದ ನಿಷ್ಠೆ ಇದಾಗಿದ್ದು, ಬಳಿಕ ಮಾಸ್ಕ್ ಧರಿಸದ್ದಕ್ಕೆ ಬಡವರನ್ನು ಶಿಕ್ಷಿಸುತ್ತಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಾಗ ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹಾಗಿರುವಾಗ ಜನರಿಗೆ ಮಾದರಿಯಾಗಬೇಕಾಗಿರುವ ಸಚಿವರೇ ನಿಯಮ ಉಲ್ಲಂಘಿಸಿ, ನಿರ್ಲಕ್ಷ್ಯ ವಹಿಸುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
Read Also: 2024ರ ಚುನಾವಣೆಗೆ ತಂತ್ರ: ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷ ನಾಯಕರ ಭೇಟಿಗೆ ಮಮತಾ ಸಜ್ಜು!