ಮೊಬೈಲ್ ಕಳ್ಳತನದ ಆರೋಪ : 5 ಮಕ್ಕಳಿಗೆ ವಿದ್ಯುತ್ ಶಾಕ್ ಕೊಟ್ಟು ಥಳಿಸಿದ ಡೈರಿ ಮಾಲೀಕ!
ತನ್ನ ಮೊಬೈಲ್ ಫೋನ್ ಕದಿಯುತ್ತಿದ್ದನೆಂದು ಆರೋಪಿಸಿದ ಡೈರಿ ಮಾಲೀಕ, ಹಲವಾರು ಗಂಟೆಗಳ ಕಾಲ ಕಟ್ಟಿಹಾಕಿ, ಥಳಿಸಿ, ವಿದ್ಯುತ್ ಆಘಾತ ನೀಡಿದ್ದ ಐದು ಮಕ್ಕಳನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ರಕ್ಷಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಆರೋಪಿ ಅವ್ನೇಶ್ ಕುಮಾರ್ ಯಾದವ್ ಗುರುತಿಸಲಾಗಿದೆ. ಈತ ಬಾರದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರ ಪ್ರದೇಶದಲ್ಲಿ ಡೈರಿ ನಡೆಸುತ್ತಿದ್ದನು. ಇತ್ತೀಚೆಗೆ ಅವ್ನೇಶ್ 30,000 ರೂ ಮೌಲ್ಯದ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ನೆರೆಹೊರೆಯಲ್ಲಿ ವಾಸಿಸುವ ಮಕ್ಕಳು ಆತನ ಸ್ಮಾರ್ಟ್ ಫೋನ್ ಕದ್ದಿದ್ದಾರೆ ಎಂದು ಅವ್ನೇಶ್ ಶಂಕಿಸಿದ್ದನು.
ಬುಧವಾರ ಡೈರಿ ಮಾಲೀಕ ಅವ್ನೇಶ್ ಐದು ಮಕ್ಕಳನ್ನು ಎತ್ತಿಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಾನೆ. ಐದು ಮಕ್ಕಳನ್ನು ಕಟ್ಟಿಹಾಕಿ ಹೊಡೆದು, ಇತರರ ಸಹಾಯದಿಂದ ಲೈವ್ ತಂತಿಯೊಂದಿಗೆ ವಿದ್ಯುತ್ ಸಹ ಕೊಟ್ಟಿದ್ದಾನೆ.
ಈ ವೇಳೆ ಐದು ಮಕ್ಕಳ ಕುಟುಂಬಸ್ಥರು ಡೈರಿಗೆ ನುಗ್ಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಕೆಟ್ಟ ಸ್ಥಿತಿಯಲ್ಲಿದ್ದ ಮಕ್ಕಳನ್ನು ಪ್ರಥಮ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕಳುಹಿಸಿದ್ದಾರೆ.
ಅಪ್ರಾಪ್ತ ಬಾಲಕ ಕೊಟ್ಟ ಮಾಹಿತಿ ಮೇಲೆ ಪೊಲೀಸರು ಡೈರಿ ಮಾಲೀಕರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ರವೀಂದರ್ ಕುಮಾರ್ ತಿಳಿಸಿದ್ದಾರೆ.