“ಸೋರಿಕೆಯಾದ ಪತ್ರ ನನ್ನದಲ್ಲ, ಆದರೆ ಆರೋಗ್ಯದ ಬಗ್ಗೆ ಮಾಹಿತಿ ನಿಜ”: ರಜಿನಿಕಾಂತ್

ಸೂಪರ್ ಸ್ಟಾರ್ ರಜಿನಿಕಾಂತ್ ಅವರು ರಾಜಕೀಯ ಸೇರುತ್ತಾರೆಂಬ ಮಾತುಗಳು ತುಂಬಾ ವರ್ಷಗಳಿಂದ ಕೇಳಿ ಬರುತ್ತಿವೆ. ಈ ವೇಳೆ ರಜಿನಿಕಾಂತ್ ಬರೆದಿದ್ದಾರೆ ಎನ್ನಲಾದ ಪತ್ರವೊಂದರಿಂದ ರಜಿನಿಕಾಂತ್ ರಾಜಕೀಯ ಸೇರುತ್ತಿದ್ದಾರೆನ್ನುವ ಸುದ್ದಿ ದಟ್ಟವಾಗಿ ಹರಿದಾಡುತ್ತಿತ್ತು. ಈ ಊಹಾಪೋಹಗಳಿಗೆ ರಜಿನಿಕಾಂತ್ ತೆರೆ ಎಳೆದಿದ್ದಾರೆ.

ಸ್ವತಃ ರಜನಿಕಾಂತ್ ಅವರೇ ಬರೆದಿದ್ದಾರೆನ್ನುವ ವಿಷಯವೊಂದರಿಂದ ಈ ಅನುಮಾನ ತಮಿಳು ನಾಡಿನ ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಆದರೆ ಈ ಪತ್ರದ ಬಗ್ಗೆ ಮಾಹಿತಿ ನೀಡಿದ ರಜಿನಿಕಾಂತ್ “ಪತ್ರ ನನ್ನದಲ್ಲ ಆದರೆ ನನ್ನ ಆರೋಗ್ಯ ಮತ್ತು ವೈದ್ಯರ ಸಲಹೆಯ ಮಾಹಿತಿಯು ನಿಜ” ಎಂದಿದ್ದಾರೆ. ನಟನಿಗೆ ಮೂತ್ರಪಿಂಡದ ಸಮಸ್ಯೆ ಇರುವುದರಿಂದ ಅವರ ಚಲನೆಯನ್ನು ನಿರ್ಬಂಧಿಸುವಂತೆ ವೈದ್ಯರಿಂದ ಸಲಹೆ ನೀಡಲಾಗಿದೆ ಎಂದು ಪತ್ರ ಸೂಚಿಸುತ್ತದೆ.

1990ರ ದಶಕದಿಂದ ರಾಜಕೀಯಕ್ಕೆ ಸೇರುವ ಇಂಗಿತವನ್ನು ರಜನಿಕಾಂತ್ ಅವರು ವ್ಯಕ್ತಪಡಿಸುತ್ತಲೇ ಇದ್ದರು. ಅದನ್ನು 2017ರ ಡಿಸೆಂಬರ್ 31ರಂದು ಅಧಿಕೃತವಾಗಿ ಘೋಷಿಸಿದರು. ತಮಿಳು ನಾಡಿನಲ್ಲಿ ರಾಜಕೀಯ ವ್ಯವಸ್ಥೆ ಕುಸಿದಿರುವಾಗ ತಾವು ಪಕ್ಷವನ್ನು ಆರಂಭಿಸಿ ರಾಜಕೀಯಕ್ಕೆ ಸೇರಿ ಜನರ ಸೇವೆ ಮಾಡುತ್ತೇನೆ ಎಂದು ರಜನಿಕಾಂತ್ ಹೇಳಿದ್ದರು.

ಸೂಪರ್ ಸ್ಟಾರ್ ಅವರ ಅಭಿಮಾನಿಗಳು ಅವರನ್ನು ಉತ್ತೇಜಿಸುವ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಅವರು 2019 ರ ಸಂಸತ್ ಚುನಾವಣೆಗೆ ಅಥವಾ ಕಳೆದ ಡಿಸೆಂಬರ್‌ನಲ್ಲಿ ನಡೆದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಮಯಕ್ಕೆ ಧುಮುಕಲಿಲ್ಲ. ಮುಂಬರುವ ವರ್ಷದ ತಮಿಳು ನಾಡು ವಿಧಾನಸಭೆ ಚುನಾವಣೆಯತ್ತ ತಮ್ಮ ಗಮನ ಎಂದು ಇಷ್ಟು ದಿನ ಹೇಳಿಕೊಂಡು ಬರುತ್ತಿದ್ದರು.ಆದರೆ ಮತದಾನಕ್ಕೆ ಕೆಲವೇ ತಿಂಗಳುಗಳಿರುವಾಗ, ಅವರ ಅನುಯಾಯಿಗಳು ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಈಗ ರಜನಿಕಾಂತ್ ಅವರು ಬರೆದ ಪತ್ರ ಎಂದುಕೊಂಡಿದ್ದು ಅನಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಇದರ ಬಗ್ಗೆ ರಜಿನಿಕಾಂತ್ ನಿಖರವಾದ ಮಾಹಿತಿ ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.