ಜೂನ್‌ 01ರಿಂದ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್; ಇಂದಿನಿಂದ ಟಿಕೆಟ್‌ ಬುಕಿಂಗ್ ಆರಂಭ

ರೈಲ್ವೆ ಇಲಾಖೆಯು ಜೂನ್‌ 1 ರಿಂದ ಸಂಚರಿಸುವ ರೈಲುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದಿನಿಂದ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್‌ ಮಾಡಬಹುದಾಗಿದೆ. ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ರೈಲು ಇ-ಟಿಕೆಟ್‌ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ಆದರೆ ಯಾವುದೇ ರೈಲು ನಿಲ್ದಾಣದ ಕೌಂಟರ್‌ಗಳಲ್ಲಿ ಟಿಕೆಟ್‌ಗಳು ಲಭ್ಯವಿರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.‌ ಗರಿಷ್ಠ 30 ದಿನಗಳ ವರೆಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದ್ದು, ನೋಂದಣಿ ಮಾಡಿಕೊಂಡ ಟಿಕೆಟ್‌ ರದ್ದುಪಡಿಸುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಲಾಗುವುದು. ಅಲ್ಲದೆ ವೆಯ್ಟಿಂಗ್‌ ಲಿಸ್ಟ್‌ ಟಿಕೆಟ್‌ ಇರುವವರು ಪ್ರಯಾಣಿಸಲು ಅವಕಾಶ ಇರುವುದಿಲ್ಲ ಎಂದು ಇಲಾಖೆ ಹೇಳಿದೆ.

ಎಲ್ಲವೂ ಕಾಯ್ದಿರಿಸಿದ ಟಿಕೆಟ್‌ಗಳೇ ಆಗಿದ್ದು, ಸ್ಥಳದಲ್ಲಿ ಟಿಕೆಟ್‌ ನೀಡುವುದು ಅಥವಾ ತತ್ಕಾಲ್‌ ಬುಕಿಂಗ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಜೂನ್‌ 1ರಿಂದ ಸಂಚರಿಸಲಿರುವ 100 ರೈಲುಗಳ ಪಟ್ಟಿಯನ್ನು ರೈಲ್ವೆ ಇಲಾಖೆ ಬುಧವಾರ ಪ್ರಕಟಿಸಿದೆ. ಈ ರೈಲುಗಳಲ್ಲಿ ಎ.ಸಿ ಹಾಗೂ ಎ.ಸಿ ರಹಿತ ಕೋಚ್‌ಗಳು ಇರಲಿವೆ ಎಂದು ಇಲಾಖೆ ತಿಳಸಿದೆ.

ಯಾವ ರೈಲುಗಳು ಸಂಚರಿಸಲಿವೆ:

ಮುಂಬೈ-ಕೆಎಸ್ಆರ್ ಬೆಂಗಳೂರು ಉದ್ಯಾನ್ ಎಕ್ಸಪ್ರೆಸ್‌, ಮುಂಬೈ-ಗದಗ ಎಕ್ಸ್‌ಪ್ರೆಸ್‌, ದಾನಪುರ-ಕೆಎಸ್ಆರ್ ಬೆಂಗಳೂರು ಸಂಘಮಿತ್ರ ಎಕ್ಸ್‌ಪ್ರೆಸ್‌, ವಾರಕ್ಕೆ ಎರಡು ಬಾರಿ ಸಂಚರಿಸುವ ನವದೆಹಲಿ-ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್, ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್‌, ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್‌ ಮತ್ತು ಹೌರಾ- ಯಶವಂತಪುರ ಹೌರಾ ದುರಂತೊ ಎಕ್ಸ್‌ಪ್ರೆಸ್‌ ರೈಲುಗಳು ಜೂನ್ 1ರಿಂದ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೇ ತಿಳಿಸಿದೆ.

ರೈಲ್ವೆ ಸಚಿವ ಪಿಯೂಶ್‌ ಗೋಯಲ್, ಜೂನ್‌ 1 ರಿಂದ ದೇಶದಾದ್ಯಂತ ಸುಮಾರು 200 ಎಸಿ ಅಲ್ಲದ ದ್ವಿತೀಯ ದರ್ಜೆಯ ರೈಲುಗಳ ಸಂಚಾರ ಆರಂಭಿಸಲಾಗುವುದು ಎಂದು ಈ ಹಿಂದೆಯೇ ತಿಳಿಸಿದ್ದರು. ಹೀಗಾಗಿ ರಾಜ್ಯದಲ್ಲೂ ಜೂನ್‌ 01 ರಿಂದ ರೈಲ್ವೆ ಸೇವೆ ಆರಂಭವಾಗಲಿದೆ.

ಕೊರೊನಾದಿಂದಾಗಿ ರಾಷ್ಟ್ರದಾದ್ಯಂತ ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ ಘೋಷಿಸಲಾಗಿದ್ದು, ರೈಲು ಸಂಚಾರವನ್ನೂ ಸ್ಥಗಿತ ಮಾಡಲಾಗಿತ್ತು. ಇದರಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ದೂರದ ರಾಜ್ಯಗಳಿಗೆ ಹೋಗಲಾಗದೇ ಕಾಲ್ನಡಿಗೆಯನ್ನು ಪ್ರಾರಂಭಿಸಿದ್ದರು. ಈ ಮಹಾನಡಿಗೆಯಲ್ಲಿ ಹಲವಾರು ವಲಸೆ ಕಾರ್ಮಿಕರು ರಸ್ತೆ ಅಫಘಾತ, ಬಳಲಿಕೆಯಿಂದ ಪ್ರಾಣ ಕಳೆದು ಕೊಂಡಿದ್ದರು. ಇದರ ನಂತರ ಎಚ್ಚೆತ್ತ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತಲುಪಲು ಶ್ರಮಿಕ್‌ ರೈಲುಗಳನ್ನು ಆರಂಭಿಸಿತ್ತು.

ಶ್ರಮಿಕ ರೈಲುಗಳಲ್ಲದೆ 15 ಜೋಡಿ ವಿಶೇಷ ರೈಲು ಸೇವೆಗೂ ಲಾಕ್ ಡೌನ್ ಸಮಯದಲ್ಲಿ ಗ್ರೀನ್‌ ಸಿಗ್ನಲ್ ನೀಡಿತ್ತು. ಆದರೆ ಈಗ ರೈಲ್ವೆ ಇಲಾಖೆ ಹಂತ ಹಂತವಾಗಿ ಪೂರ್ಣ ಪ್ರಮಾಣ ಸೇವೆ ಆರಂಭಿಸುವ ಪ್ರಯತ್ನದಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights