ಮಲಗಲು ಮನೆಯಿಲ್ಲ- ಕಾಯಲು ನೆರಳಿಲ್ಲ; ಮಾರುಕಟ್ಟೆಯಲ್ಲಿಯೇ ಬದುಕು

46 ವರ್ಷದ ಬ್ರಿಜ್‌ಮೋಹನ್ ದಾಸ್ ಎಂಬಾತ ಕಳೆದ ಏಳು ದಿನಗಳಿಂದ ವರ್ತೂರು ಪೊಲೀಸ್ ಠಾಣೆಯ ಪಕ್ಕದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಬಡಗಿ ಕೆಲಸ ಮಾಡುತ್ತಿರುವ ಈತ ಮೂಲತಃ ಬಿಹಾರದವರು. ತಮ್ಮೂರಿಗೆ ಹೋಗಲು ರೈಲ್ವೇಯಲ್ಲಿ ಟಿಕೆಟ್‌ ಪಡೆಯಲು ಪ್ರಯತ್ನಿಸಿ ಹತಾಶರಾಗಿದ್ದಾರೆ. ಸಧ್ಯ ವಾಸಿಸಲು ಬೇರೆಲ್ಲೂ ಜಾಗವಿಲ್ಲದೆ ಮಾರುಕಟ್ಟೆಯಲ್ಲಿ ಮಲಗುತ್ತಿದ್ದಾರೆ.

“ತಾನು ಕೆಲಸ ಮಾಡುತ್ತಿದ್ದ ಗುತ್ತಿಗೆದಾರನೂ ಸದ್ಯ ಸಹಾಯ ಮಾಡುತ್ತಿಲ್ಲ, ಆತ ಕೊಡುತ್ತಿದ್ದ ಆಹಾರ ಧಾನ್ಯಗಳನ್ನು ನಿಲ್ಲಿಸಿದ್ದಾನೆ. ನಾವು ಉಳಿದುಕೊಳ್ಳುತ್ತಿದ್ದ ಮನೆ ಮಾಲೀಕ ಕೊಠಡಿ ಖಾಲಿ ಮಾಡುವಂತೆ ಹೇಳಿದರು. ನನಗೆ ಉಳಿಯಲು ಮನೆಯೂ ಇಲ್ಲದಂತಾಗಿದ್ದರಿಂದ ಊರಿಗೆ ಹೋಗಲು ಸಾಮಾನುಗಳೊಂದಿಗೆ ಪೊಲೀಸ್‌ ಠಾಣೆಗೆ ಬಂದೆ. ಆದರೆ, ಒಂದು ವಾರಗಳಾದರೂ ಇಲ್ಲಿಯೇ ಕಾಯುತ್ತಿದ್ದೇನೆ” ಎಂದು ಅವರು ಹೇಳಿದರು.

ರೈಲು ಟಿಕೆಟ್‌ಗಾಗಿ ಪ್ರಯತ್ನಿಸಿ ಹತಾಶರಾಗಿರುವ ನೂರಾರು ವಲಸೆ ಕಾರ್ಮಿಕರು ವೈಟ್‌ಫೀಲ್ಡ್‌ನ ಪೊಲೀಸ್ ಠಾಣೆಗಳ ಹೊರಗೆ ಕಾದುಕುಳಿದ್ದಾರೆ. ಮನೆಗೆ ಹೋಗಲು ಬಯಸುವ ವಲಸಿಗರಿಗೆ ರೈಲು ಟಿಕೆಟ್ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಠಾಣೆಗಳು ಈಗ ನೋಡಲ್ ಏಜೆನ್ಸಿಗಳಂತೆ ಕಾರ್ಯನಿರ್ವಹಿಸುತ್ತಿವೆ.

ಬೆಂಗಳೂರು ನಗರದಲ್ಲಿಯೇ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಪ್ರದೇಶ ವೈಟ್‌ಫೀಲ್ಡ್‌.  ಕೆಲವು ದಿನಗಳ ಹಿಂದೆ, ನೂರಾರು ವಲಸೆ ಕಾರ್ಮಿಕರು ವೈಟ್‌ಫೀಲ್ಡ್‌ನ ಪೊಲೀಸ್ ಠಾಣೆಗಳ ಹೊರಗೆ ಸೇರಿದ್ದರು. ಆದರೆ ಪೊಲೀಸರ ಪ್ರಕಾರ, ಕಳೆದ ಕೆಲವು ದಿನಗಳಿಂದ ವೈಟ್‌ಫೀಲ್ಡ್‌ನಲ್ಲಿದ್ದ 26,000 ಕ್ಕೂ ಹೆಚ್ಚು ಜನರನ್ನು ರೈಲು ವ್ಯವಸ್ಥೆಮಾಡಿ ಕಳಿಸಲಾಗಿದ್ದು, ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. “ಮುಂದಿನ ಕೆಲವು ದಿನಗಳಲ್ಲಿ ಎಲ್ಲರಿಗೂ ರೈಲು ವ್ಯವಸ್ಥೆ ಮಾಡಲಾಗುವುದು” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಗ್ಯದ ಸಮಸ್ಯೆ, ಗುಂಪುಗೂಡುವ ಜನಸಂದಣಿ ನಿಯಂತ್ರಣ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದಕ್ಕಾಗಿ ಪೊಲೀಸರು ಕಾರ್ಮಿಕರನ್ನು ಮನೆಗಳಿಗೆ ಹಿಂದಿರುಗಿ ಹೋಗುವಂತೆ ಒತ್ತಾಯಿಸಿದ್ದಾರೆ. ಆದರೆ, ತಾವು ಮನೆಗಳಿಗೆ ಹೋದರೆ ರೈಲ್ವೇ ಟಿಕೆಟ್ ಸಿಗದೇ ಹೋಗಬಹುದು ಎಂಬ ಭಯದಿಂದ ಯಾರೂ ಮನೆಗಳಿಗೆ ಹಿಂದುರುತ್ತಿಲ್ಲ. ಅದಾಗಿಯೂ ಕೆಲವರಿಗೆ ಉಳಿಯಲು ಮನೆಗಳೇ ಇಲ್ಲ.

ಬಿಹಾರ ಮೂಲದ ಕಟ್ಟಡ ಕಾರ್ಮಿಕರಾದ ಉಮೇಶ್ ಜಾಧವ್ (38) ಐದು ದಿನಗಳಿಂದ ಮಾರುಕಟ್ಟೆಯಲ್ಲಿಯೇ ಉಳಿದಿದ್ದಾರೆ. “ಇತ್ತೀಚೆಗೆ ಭಾರೀ ಮಳೆಯಾದಾಗ, ನಾವು ರಾತ್ರಿಯಿಡೀ ಹತ್ತಿರದ ಶಾಲೆ ಜಗಲಿ ಕಟ್ಟೆ ಮೇಲೆ ಕೂತು ಬೆಳಗಾಗುವರೆಗೂ ಕಾಯಬೇಕಾಯಿತು” ಎಂದು ಅವರು ಹೇಳಿದರು.

ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವವರಿಗೆ ರೈಲುಗಳನ್ನು ನಿಗದಿಪಡಿಸಲಾಗಿದೆ ಮತ್ತು ರೈಲ್ವೆ ನಿಲ್ದಾಣಕ್ಕೆ ವರದಿ ಮಾಡಬೇಕಾದಾಗ ಅವರ ಫೋನ್‌ಗಳಿಗೆ ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಆದರೆ, ಎಲ್ಲರಿಗೂ ತಂತ್ರಜ್ಞಾನದ ಬಗ್ಗೆ ಗೊತ್ತಿಲ್ಲದೇ ಇರುವುದರಿಂದಾಗಿ ನೊಂದಾಯಿಸಿಕೊಳ್ಳಲು ಮಧ್ಯಮರ್ತಿಗಳಿಗೆ 200/300 ರೂಗಳನ್ನು ಕೊಡುತ್ತಿದ್ದಾರೆ. ಆದಾಗ್ಯೂ, ಎಸ್‌ಎಂಎಸ್‌ ಕೂಡ ಓದಲು ಬಾರದ ಕಾರ್ಮಿಕರು ತಮ್ಮನ್ನು ನೋಂದಾಯಿಸಿಕೊಂಡ ಮೇಲೂ ರೈಲು ಸಿಗದೇ ಹೋಗಬಹುದು ಎಂಬ ಭಯದಿಂದ ತಮ್ಮ ವಸ್ತುಗಳನ್ನು ಪ್ಯಾಕ್‌ ಮಾಡಿಕೊಂಡು ಪೊಲೀಸ್‌ ಠಾಣೆಗಳ ಮುಂದು ಕಾಯುತ್ತಿದ್ದಾರೆ.

 

ಮೂಲ: ದಿ ಹಿಂದೂ

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights