FACT CHECK | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹಣ ದೋಚಿ ಮುಸ್ಲಿಮರಿಗೆ ನೀಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡರೆ?

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತದೆ ಎಂದು ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸತ್ಯವನ್ನು ಹೇಖಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನು ಮಾಡುತ್ತದೆ ಎಂದು ಅದರ ಅಧ್ಯಕ್ಷ ಖರ್ಗೆ ಯವರ ಬಾಯಿ ಇಂದಲೇ ಕೇಳಿ. ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಬೀರುಗಳ ಬಾಗಿಲು ತೆರೆದು ಅಲ್ಲಿರುವ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುತ್ತದೆ. ಹಿಂದೂಗಳಿಗೆ ಕಡಿಮೆ ಮಕ್ಕಳಿದ್ದರೆ ಕಾಂಗ್ರೆಸ್ ಏನು ಮಾಡಲಿಕ್ಕೆ ಆಗುತ್ತದೆ!? ಅರ್ಥ ಆಯಿತಾ ಹಿಂದೂಗಳೇ!! ಇನ್ನೂ ಸ್ಪಷ್ಟವಾಗಿ ಹೇಳಬೇಕಾ? ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನ ಪೋಸ್ಟ್‌ ಮೂಲಕ ವಿಡಿಯೋವನ್ನು ಹರಿಯಬಿಡಲಾಗಿದೆ.

ಹಲವು ಫೇಸ್‌ಬುಕ್ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಇದೇ ಸಂದೇಶದೊಂದಿಗೆ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡಲಾಗಿದ್ದು, ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಗೆ ವಿನಂತಿಸಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋದ ಸತ್ಯಾಸತ್ಯೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  4 ಮೇ 2024 ರಂದು ಗುಜರಾತಿನ ಅಹಮದಾಬಾದ್‌ ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತಿನಾಡಿರುವ ಮೂಲ ವಿಡಿಯೋ ಲಭ್ಯವಾಗಿದೆ.

04 ಮೇ 2024 ರಂದು ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾಡಿದ ಭಾಷಣದ ಮೂಲ ವಿಡಿಯೋದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಪ್ರಧಾನಿ ಮೋದಿ ಜನರಿಗೆ ಸುಳ್ಳು ಹೇಳುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ “ಯಾವ ಸಮುದಾಯದಲ್ಲಿ ಎಷ್ಟು ಜನ ವಿದ್ಯಾವಂತರಿದ್ದಾರೆ, ಎಷ್ಟು ಜನ ಪದವಿ ಪಡೆದವರಿದ್ದಾರೆ. ಅವರ ವಾರ್ಷಿಕ ಆದಾಯ ಎಷ್ಟು? ತಲಾ ಆದಾಯ ಎಷ್ಟು? ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ನಾವು ಜಾತಿಗಣತಿ ಮಾಡಲು ನಿರ್ಧರಿಸಿದ್ದೇವೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷ ನಿಮ್ಮ ಮನೆಗೆ ನುಗ್ಗಿ, ತಿಜೋರಿ ಒಡೆದು ಹಣ ದೋಚಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಮುಂದುವರೆದು “ನಾವು ನಮ್ಮ ಪ್ರಣಾಳಿಕೆಯಲ್ಲಿ ಎಲ್ಲಿಯೂ ಮುಸ್ಲಿಮರಿಗೆ ಮಾತ್ರ ಎಂದು ಹೇಳಿಲ್ಲ. ಇದು ಬಡವರು, ಹಿಂದುಳಿದವರಿಗೂ ಸೇರಿದಂತೆ ಭಾರತದ 180 ಕೋಟಿ ಜನರಿಗಾಗಿ ನಾವು ನ್ಯಾಯ ಪ್ರಣಾಳಿಕೆಯನ್ನು ತಯಾರಿಸಿದ್ದೇವೆ. ಈ ರೀತಿ ಮೋದಿಯವರು ಸುಳ್ಳು ಹಬ್ಬಿಸುವುದು ಪ್ರಧಾನಿ ಆಗಿ ಅವರಿಗೆ ಕ್ಷೋಭೆಯಲ್ಲ, ಜೊತೆಗೆ ದೇಶಕ್ಕೆ ಮತ್ತು ನಮಗೂ ಕ್ಷೋಭೆಯಲ್ಲ” ಎಂದಿದ್ದಾರೆ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಮನೆಗಳ ಸಂಪತ್ತನ್ನು ಲೂಟಿ ಹೊಡೆದು ಹೆಚ್ಚು ಮಕ್ಕಳಿರುವ ಮುಸ್ಲಿಮ್ಮರಿಗೆ ನೀಡುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿರುವಂತೆ ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾಡಿದ ಭಾಷಣದ ಮೂಲ ವಿಡಿಯೋವನ್ನು ತಿರುಚಿ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸುಳ್ಳು : ಕಾಂಗ್ರೆಸ್ ಹಿಂದೂಗಳ ಮನೆಗೆ ನುಗ್ಗಿ, ಅಲ್ಲಿರುವ ಬೀರುಗಳ ಬಾಗಿಲು ತೆರೆದು ಅಲ್ಲಿರುವ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಮುಸಲ್ಮಾನರಿಗೆ ಹಂಚುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ಸತ್ಯ : ಕಾಂಗ್ರೆಸ್ ಪಕ್ಷವು ನಿಮ್ಮ ಮನೆಗೆ ನುಗ್ಗಿ, ತಿಜೋರಿ ಒಡೆದು ಹಣ ದೋಚಿ, ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಪ್ರಣಾಳಿಕೆ ವಿರುದ್ದ ಅಪಪ್ರಚಾರ ಮಾಡುತ್ತಿರುವುದನ್ನು ಉಲ್ಲೇಖಿಸಿ  ಮಲ್ಲಿಕಾರ್ಜುನ ಖರ್ಗೆ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಫೋಸ್ಟ್‌ : ಫೇಸ್‌ಬುಕ್ ಮತ್ತು ವಾಟ್ಸಾಪ್

ಆಧಾರ : ಯೂಟ್ಯೂಬ್


ಇದನ್ನು ಓದಿರಿ: FACT CHECK | ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಖಾಲಿ ಖುರ್ಚಿಗಳು, ಇದು ಗುಜರಾತಿನ ಕಾರ್ಯಕ್ರಮವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights