ಧರ್ಮಾತೀತವಾಗಿ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ವಯಸ್ಕರಿಗಿದೆ: ಅಲಹಬಾದ್ ಹೈಕೋರ್ಟ್
ವಯಸ್ಕರು ಧರ್ಮಾತೀತವಾಗಿ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಅಂತರ್ಧರ್ಮೀಯ ದಂಪತಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಅಲಹಬಾದ್ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಗುಪ್ತಾ ಹಾಗೂ ದೀಪಕ್ ವರ್ಮಾ ಅವರಿದ್ದ ವಿಭಾಗೀಯ ಪೀಠವು, ಅಂತರ್-ಧರ್ಮದ ದಂಪತಿಗಳಿಗೆ ರಕ್ಷಣೆ ನೀಡಿದ್ದು, ಅವರ ಸಂಬಂಧವನ್ನು ಅವರ ಪೋಷಕರು ಕೂಡ ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ barandbench.com ವರದಿ ಮಾಡಿದೆ.
ಶಿಫಾ ಹಸನ್ ಹಾಗೂ ಆಕೆಯ ಸಂಗಾತಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಹಾಗೂ ತಮ್ಮ ಸ್ವಂತ ಇಚ್ಛೆಯಂತೆ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ವಾದಿಸಿದ್ದಾರೆ.
ಹುಡುಗನ ತಂದೆ ಮದುವೆಗೆ ಒಪ್ಪಿಗೆ ನೀಡಿಲ್ಲ. ಆದರೆ ಆತನ ತಾಯಿ ಸಮ್ಮತಿ ನೀಡಿದ್ದಾರೆ. ಹಸನ್ ಪೋಷಕರಿಬ್ಬರೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಂಪತಿಗಳು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಅವರ ಮನವಿಯನ್ನು ಆಲಿಸಿದ ಕೋರ್ಟ್, ಅರ್ಜಿದಾರರು ಯಾವುದೇ ಕಿರುಕುಳಕ್ಕೆ ಒಳಗಾಗದಂತೆ, ಅವರಿಗೆ ರಕ್ಷಣೆ ನೀಡಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಇದನ್ನೂ ಓದಿ: ಸ್ವಯಂ ನಿವೃತ್ತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ ಎಡಿಜಿಪಿ ಭಾಸ್ಕರ್ ರಾವ್; ಕಾಂಗ್ರೆಸ್ ಅಥವಾ ಎಎಪಿ ಸೇರುವ ಸಾಧ್ಯತೆ?

