ಹತ್ರಾಸ್ ಪ್ರಕರಣ: ರೈತನ ಹತ್ಯೆಗೈದ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ!
ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಕ್ಕಾಗಿ ಹತ್ರಾಸ್ನ ರೈತನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪಿ ಗೌರವ್ ಸೊಂಗ್ರಾ ತಲೆಗೆ ಉತ್ತರ ಪ್ರದೇಶ ಪೊಲೀಸರು ಒಂದು ಲಕ್ಷ ರೂ ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಸಾಸ್ನಿ ಪ್ರದೇಶದಲ್ಲಿರುವ ನೊಜಲ್ಪುರ ಗ್ರಾಮದ ಪ್ರಮುಖ ಆರೋಪಿ ಗೌರವ್ ಸೊಂಗ್ರಾ ಎಂಬಾತನ ಸುಳಿವು ನೀಡಿದರೆ ಒಂದು ಲಕ್ಷ ರೂ ಬಹುಮಾನ ಘೋಷಿಸಲಾಗಿದ್ದು, ಇತರ ಇಬ್ಬರು ಆರೋಪಿಗಗಳ ಸುಳಿವಿಗೆ ತಲಾ 25 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿಯನ್ನು ಸಾಸ್ನಿಗೇಟ್ ಪೊಲೀಸರು ಬಂಧಿಸಿದ್ದಾರೆ.
ರೈತನ ಹತ್ಯೆಯ ಹಿಂದಿನ ಕಾರಣವೇ ಹಳೆಯ ದ್ವೇಷ ಎಂದು ಹೇಳಲಾಗಿದೆ. ಹತ್ಯೆಗೀಡಾದ ರೈತ ಆರೋಪಿಯ ವಿರುದ್ಧ 2018 ರಲ್ಲಿ ಎಫ್ಐಆರ್ ದಾಖಲಿಸಿದ್ದರು. ಆರೋಪಿ ಗೌರವ್ನನ್ನು ಬಂಧಿಸಲಾಗಿತ್ತು. 15 ದಿನಗಳ ನಂತರ ಆತ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. ಅಲ್ಲದೆ, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹಾಕುತ್ತಿದ್ದ ಎಂದು ತಿಳಿದು ಬಂದಿದೆ.
ಸೋಮವಾರ, ಆರೋಪಿಯು ತನ್ನ ಐವರು ಸ್ನೇಹಿತರನ್ನು ಕರೆದುಕೊಂಡು ಹೋಗಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಗುಂಡಿಕ್ಕಿ ಹತ್ಯೆ ಎಸಗಿದ್ದ. ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಎನ್ಎಸ್ಎ ಅಡಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ನಲ್ಲಿ ಮಗಳಿಗೆ ಕಿರುಕುಳ : ದೂರು ನೀಡಿದ ತಂದೆಗೆ ಗುಂಡು ಹಾರಿಸಿದ ಪಾಪಿ!

