ಫ್ಯಾಕ್ಟ್‌ಚೆಕ್: ಶಾಲೆಗಳಲ್ಲಿ ಅಡುಗೆ ಸಿಬ್ಬಂದಿ ಕೈಬಳೆ ತೊಡಬಾರದು ಎಂಬ ಮಾರ್ಗಸೂಚಿ ತಂದಿದ್ದು ಕೇಂದ್ರ ಸರ್ಕಾರ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳು ಕೈಗೆ ಬಳೆತೊಡದಂತೆ ಶಿಕ್ಷಣ ಇಲಾಖೆ ಹೊಸ ಹೊಸ ಆದೇಶ ಹೊರಡಿಸಿದೆ  ಎಂದು ಹಲವು ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿ ಬಿತ್ತರಿಸಿವೆ.

ರಾಜ್ಯ ಸರ್ಕಾರದ ಈ ಸುತ್ತೋಲೆ ಹಿಂದೂ ವಿರೋಧಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಕಳೆದ 10 ವರ್ಷದಿಂದ ಅಕ್ಷರ ದಾಸೋಹ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿ ಸಿಬ್ಬಂದಿಗಳು ಕೈಬಳೆ ತೊಡುವುದು ಮತ್ತು ಬಿಂದಿ ಇಡುವುದನ್ನು ನಿಷೇಧಿಸಿ ಆದೇಶ ಹೊರಡಿಸುವ ಹಿಂದಿನ ಉದ್ದೇಶ ಏನು?  ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಹಿಂದೂಗಳ ವಿರುದ್ಧ ಸದಾ ವಿಷಕಾರುವ ಕಾಂಗ್ರೆಸ್‌ ಸರ್ಕಾರದಿಂದ ಮತ್ತೊಂದು ದ್ವೇಷದ ಆದೇಶ ಹೊರಬಿದ್ದಿದೆ. ʼಬಿಸಿಯೂಟ ಅಡುಗೆದಾರರುʼ ಕೈಗೆ ಬಳೆ ಧರಿಸಬಾರದು ಎಂದಿರುವ ಕಾಂಗ್ರೆಸಿಗರು ಆ ಬಳೆಗಳನ್ನು ತಾವು ಧರಿಸಿಕೊಳ್ಳಬೇಕೆಂದಿದ್ದಾರೆಯೇ?  ಹಿಂದೂ ಆಚರಣೆಗಳನ್ನು ಹತ್ತಿಕ್ಕಬೇಕೆಂಬ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್‌ ಮಾಡಿದ್ದರು.

ಮಧ್ಯಾಹ್ನದ ಬಿಸಿಯೂಟ ತಯಾರಿಕೆಯಲ್ಲಿನ ಗುಣಮಟ್ಟ ಸುರಕ್ಷತೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಪಾಲಿಸಬೇಕಾದ ನಿಯಮಗಳು ಕುರಿತಂತೆ ನೂತನ ಮಾರ್ಗಸೂಚಿಯಲ್ಲಿ ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವವೇ ಬೇರೆ ಇದ್ದು ವಿರೊಧ ಪಕ್ಷದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಬಿಸಿಯೂಟದ ಸಿಬ್ಬಂಧಿ ಬಳೆ ತೊಡಬಾರದು ಎಂಬ ಮಾರ್ಗಸೂಚಿ 2020ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದು

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆ ತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂಬ ಸುದ್ದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಗಳೆದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ ಎನ್ನುವ ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಮುಂದುವರಿದು, “ವಾಸ್ತವದಲ್ಲಿ ಕೇಂದ್ರ ಸರ್ಕಾರ ಪೋಷಣ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿ, ಬಿಸಿಯೂಟದ ಕಾರ್ಯಕರ್ತೆಯರು ಬಳೆ ತೊಡುವುದನ್ನು ನಿಷೇಧಿಸಿದೆ” ಎಂದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ತಯಾರಿಕೆ ಸಿಬ್ಬಂದಿ ಕೈಗೆ ಬಳೆತೊಡದಂತೆ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ ಎಂದು ಹಲವು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದರಿಂದಾಗಿ ಬಿಸಿಯೂಟ ತಯಾರು ಮಾಡುವ ಅಡುಗೆ ಸಿಬ್ಬಂದಿ, ಮಹಿಳಾ ಹೋರಾಟಗಾರ್ತಿಯರು ಸೇರಿದಂತೆ ಹಿಂದು ಸಂಘಟನೆಗಳಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ

“ತಮ್ಮದೇ ಸರ್ಕಾರ ರೂಪಿಸುವ ನೀತಿ ನಿಯಮಗಳ ಬಗ್ಗೆ ಅರಿವಿಲ್ಲದ ನಳಿನ್ ಕುಮಾರ್ ಅವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಬಿಸಿಯೂಟದ ಕಾರ್ಯಕರ್ತೆಯರು ಅಡುಗೆ ಮಾಡುವ ಸಂದರ್ಭದಲ್ಲಿ ಕೈಗೆ ಉಗುರುಬಣ್ಣ ಹಚ್ಚಬಾರದು, ಬಳೆ ತೊಟ್ಟಿರಬಾರದು ಎಂದು ಕೇಂದ್ರ ಸರ್ಕಾರ 2020ರಲ್ಲೇ ಆದೇಶ ಹೊರಡಿಸಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರೇ, ಆ ಬಳೆಯನ್ನು ತಾವು ಧರಿಸಿಕೊಳ್ಳಲೆಂದು ಮೋದಿಯವರು ಈ ಆದೇಶ ಹೊರಡಿಸಿದ್ದೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಂಡರೇ? ಕಟೀಲ್ ಕೈಗೆ ಬಳೆ ತೊಟ್ಟು ಇದನ್ನು ಪ್ರತಿಭಟಿಸಲಿ” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಕಾಲೆಳೆದಿದೆ.

ಇನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು, ನಳಿನ್ ಕುಮಾರ್ ಕಟೀಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು,  ಸುಳ್ಳು ಸುದ್ದಿಯನ್ನು ಹೆಚ್ಚೆಚ್ಚು ಹರಡುವ ಬಿಜೆಪಿಯ ಐಟಿ ಸೆಲ್ ಗೆ ಕೇಂದ್ರದಲ್ಲಿರುವ ತಮ್ಮದೇ ಸರ್ಕಾರ 2020ರಲ್ಲಿ ಹೊರಡಿಸಿರುವ ಮಾರ್ಗಸೂಚಿ ಬಗ್ಗೆ ಮಾಹಿತಿ ಇಲ್ಲದೆ, ರಾಜ್ಯ ಸರ್ಕರವನ್ನು ಟೀಕಿಸುತ್ತಿರುವುದು ನೋಡುತ್ತಿದ್ದರೆ ಇವರ ಜ್ಞಾನ ಯಾವ ಮಟ್ಟಕ್ಕೆ ಇಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಈಗ ತಾವೇ ಹಿಂದೂ ವಿರೋಧಿಗಳು ಎಂದು ಒಪ್ಪಿಕೊಂಡಿದ್ದಾರೆ ಎಂದು BJP ಯನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರಲ್ಲಿ ಕೇಂದ್ರ ಸರ್ಕಾರ ಬಿಸಿಯೂಟ ಸಿಬ್ಬಂದ್ದಿಗೆ ದೇಶದೆಲ್ಲಡೆ ಜಾರಿಗೆ ಬರುವಂತೆ ಹೊರಡಿಸಿದ ಮಾರ್ಗಸೂಚಿಯನ್ನು ಪಾಲಿಸುವಂತೆ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚಿಸಿದೆ. ಇದರ ಮಾಹಿತಿ ಪಡೆಯದ ಬಿಜೆಪಿ ರಾಜ್ಯ ಸರ್ಕಾರ ಇದನ್ನು ಜಾರಿ ಮಾಡುವ ಮೂಲಕ ಹಿಂದೂ ವಿರೋಧಿ ನಡೆಯನ್ನು ಅನುಸರಿಸಿದೆ ಎಂದು ಹೇಳಿ  ಮುಖಬಂಗ ಅನುಭವಿಸಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಪ್ರಾನ್ಸ್‌ನಲ್ಲಿ ಜಿಹಾದಿಗಳಿಂದ ದಾಳಿ ಎಂದು ಸಿನಿಮಾ ದೃಶ್ಯಗಳ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights