ಶುಕ್ರವಾರ ಭಾರತ್ ಬಂದ್: ಕೃಷಿ ಕಾಯ್ದೆಗಳ ವಿರುದ್ಧ ರೈತರ ಮತ್ತೊಂದು ಕಹಳೆ!
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ ಮಾರ್ಚ್ 26ಕ್ಕೆ ನಾಲ್ಕನೇ ತಿಂಗಳಿಗೆ ಕಾಲಿಡಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಭಾರತ್ ಬಂದ್ ಪ್ರತಿಭಟನೆ ನಡೆಸಲು ದೆಹಲಿ ಗಡಿಯಲ್ಲಿರುವ ಹೋರಾಟನಿರತ ರೈತರು ಕರೆಕೊಟ್ಟಿದ್ದಾರೆ.
ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚ ಒಕ್ಕೂಟವು ಭಾರತ್ ಬಂದ್‌ಗೆ ಕರೆ ನೀಡಿದ್ದು, ದೇಶಾದ್ಯಂತ ಹಲವಾರು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಕರ್ನಾಟಕದಲ್ಲಿಯೂ ನಾನಾ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಿಲಿವೆ. ಶುಕ್ರವಾರ ಬೆಳಗ್ಗೆ 06 ಗಂಟೆಯಿಂದ ಸಂಜೆ 06 ಗಂಟೆಯ ವರೆಗೆ ಭಾರತ್ ಬಂದ್ ನಡೆಯಲಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.
ರೈತರನ್ನು ಗೌರವಿಸುವ ಪ್ರತಿಯೊಬ್ಬರೂ ಭಾರತ್ ಬಂದ್ ಯಶಸ್ವಿಗೊಳಿಸಲು ಬೆಂಬಲ ನೀಡಬೇಕು ಎಂದು ಕಿಸಾನ್ ಮೋರ್ಚಾದ ನಾಯಕ ದರ್ಶನ್ ಪಾಲ್ ಅವರು ದೇಶದ ಜನರಿಗೆ ಕರೆಕೊಟ್ಟಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಾನಾ ಭಾಗಗಳಲ್ಲಿ ಶುಕ್ರವಾರ ರೈಲು, ರಸ್ತೆ ಸಾರಿಗೆ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿನ ಆಡಳಿತಾರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಬಂದ್‌ಗೆ ಬೆಂಬಲ ನೀಡಿದ್ದು, ರಾಜ್ಯ ಸಾರಿಗೆಗಳು ಸ್ಥಗಿತಗೊಳಿಸಲು ಮುಂದಾಗಿದೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದ್‌ನಲ್ಲಿ ಭಾಗಯಾಗಲು ಆಂಧ್ರ ಸರ್ಕಾರ ಮನವಿ ಮಾಡಿದೆ. ಅಲ್ಲದೆ, ಮಧ್ಯಾಹ್ನದ ವರೆಗೂ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು, ಸರ್ಕಾರಿ ಕಚೇರಿಗಳು ಮಧ್ಯಾಹ್ನದ ನಂತರ ಆರಂಭವಾಗಲಿವೆ ಎಂದು ಹೇಳಿದೆ.