ನಾಲ್ವಡಿ ಕೃಷ್ಣರಾಜ್ ಒಡೆಯರ್ ಜನ್ಮದಿನ ಸಂದರ್ಭದಲ್ಲಿ ಗರಿಗೆದರಿದ ಸರ್ ಎಂ ವಿ ಪ್ರತಿಮೆ ವಿವಾದ
ಕನ್ನಂಬಾಡಿ ಕಟ್ಟೆ ಅಥವ ಕೃಷ್ಣರಾಜ ರಾಜ ಸಾಗರ ಅಣೆಕಟ್ಟು ಎಷ್ಟೋ ರೈತರಿಗೆ ಜೀವಜಲವನ್ನು ಒದಗಿಸುತ್ತಿದೆ. ಕೆ ಆರ್ ಎಸ್ ಕಲ್ಪನೆಯನಲ್ಲಿ ಮತ್ತು ಅದನ್ನು ನಿರ್ಮಿಸಿದವರಲ್ಲಿ ಹಲವರ ಕೊಡುಗೆ ಇದೆ. ಆದರೆ ಕೆ ಆರ್ ಎಸ್ ಎಂದಾಕ್ಷಣ ಹೆಚ್ಚು ಜನಕ್ಕೆ, ಅಂದು ಮೈಸೂರಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರು ತಟ್ಟನೆ ನೆನಪಿಗೆ ಬರುತ್ತದೆ. ಕೆ ಆರ್ ಎಸ್ ಜೊತೆಗೆ ಸರ್ ಎಂ ವಿ ಅವರ ಹೆಸರು ಹೆಚ್ಚು ತಳುಕಿ ಹಾಕಿಕೊಂಡಿದ್ದರೂ, ಕೆ ಆರ್ ಎಸ್ ಅಣೆಕಟ್ಟಿನ ಶ್ರೇಯಸ್ಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲಬೇಕು ಎಂಬುದು ಒಂದು ಬಣದ ಕೂಗು. ತಮ್ಮ ತಾಯಿಯ ಆಭರಣಗಳನ್ನು ಮಾರಿ ಕೆ ಆರ್ ಎಸ್ ಕಟ್ಟಲು ಅವರು ಹೆಚ್ಚು ಶ್ರಮಿಸಿದ್ದರು ಎನ್ನಲಾಗುತ್ತದೆ.
ಮೈಸೂರು ರಾಜಪರಂಪರೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ವಿನೂತನವಾದದ್ದು. ಆಧುನಿಕ ಮೈಸೂರಿನ ಜನಕ ಎಂದೇ ಅವರು ಪ್ರಖ್ಯಾತ. ಸಾಮಾಜಿಕ ಅಸಮಾನತೆಯ ಬಗ್ಗೆಯೂ ಕಾಳಜಿ ವಹಿಸಿದ್ದ ನಾಲ್ವಡಿಯವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸಲು 1919ರಲ್ಲೇ ಚಿಂತನೆ ನಡೆಸಿ ಮಿಲ್ಲರ್ ಕಮಿಶನ್ ರಚಿಸಿದ್ದರು. ಮೀಸಲಾತಿಯ ಬಗ್ಗೆ ಭಿನ್ನಾಭಿಪ್ರಾಯ ತಳೆದಿದ್ದ ಅಂದಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟೇ ಅಲ್ಲದೆ ಐ ಐ ಎಸ್ ಸಿ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ವಿಶ್ವವಿದ್ಯಾಲಯ ಇಂತಹ ಮಹತ್ವದ ಸಂಸ್ಥೆಗಳ ಹುಟ್ಟಿಗೆ ಕಾರಣವಾಗಿದ್ದವರು ನಾಲ್ವಡಿ. ಅಂದಿನ ಕಲಾಪೋಷಣೆಯಲ್ಲೂ ನಾಲ್ವಡಿಯವರನ್ನು ಬಹಳ ಗೌರವದಿಂದ ನೆನಪಿಸಿಕೊಳ್ಳಲಾಗುತ್ತಿದೆ. ಸರ್ ಎಂ ವಿ ಕೂಡ ಬಹಳ ತೀಕ್ಷ್ಣಮತಿಯ ಎಂಜಿನಿಯರ್ ಮತ್ತು ಆಡಳಿತಕಾರರಾಗಿದ್ದರು ಎಂಬುದು ಕೂಡ ಜನಜನಿತ.
ಜಲಸಂಪನ್ಮೂಲ ಇಲಾಖೆ ಈಗ ಜಲಾಶಯದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯನವರ ಪ್ರತಿಮೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಈ ವಿಷಯ ಈಗ ನಾಲ್ವಡಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನಾಲ್ವಡಿ ಪ್ರತಿಮೆಯ ಸಮಕ್ಕೆ ವಿಶ್ವೇಶ್ವರಯ್ಯನವರ ಪ್ರತಿಮೆಯನ್ನು ನಿಲ್ಲಿಸುವುದುದಕ್ಕೆ ಇತಿಹಾಸಕಾರ ಪ್ರೊ. ನಂಜರಾಜೇ ಅರಸ್ ಬೇಸರ ವ್ಯಕ್ತಪಡಿಸಿ ವಿರೋಧಿಸಿದ್ದಾರೆ. ವಿಶ್ವೇಶ್ವರಯ್ಯನವರ ವಿರೋಧಿಗಳು ನಾವಲ್ಲ ಆದರೆ ಕನ್ನಂಬಾಡಿ ಕಟ್ಟೆಗೆ ನಾಲ್ವಡಿ ಅರಸರ ಕೊಡುಗೆ ಅಪಾರವಾದದ್ದು. ಆದುದರಿಂದ ಅವರ ಪ್ರತಿಮೆಗೆ ಹೆಚ್ಚು ಮಹತ್ವ ಕೊಡಬೇಕು ಎಂಬುದು ನಂಜರಾಜೇ ಅರಸ್ ಅವರ ಆಗ್ರಹ.
ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಈ ವರ್ಷದ ಕೊನೆಗೆ ಪ್ರತಿಮೆಗಳು ಉದ್ಘಾಟನೆಯಾಗಬೇಕಿತ್ತು. ಆದರೆ ಈ ವಿಷಯದಲ್ಲಿ ಜನಾಭ್ರಿಪಾಯ ಸಂಗ್ರಹಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನೂ ಭೇಟಿ ಮಾಡಿ ತಮ್ಮ ಆಕ್ಷೇಪವನ್ನು ಸಲ್ಲಿಸುವುದಾಗಿ ನಂಜರಾಜೇ ಅರಸ್ ಹೇಳಿದ್ದಾರೆ.

