ಫಾರುಕ್ ಅಬ್ದುಲ್ಲ ಅವರ ಏಳು ತಿಂಗಳ ಗೃಹಬಂಧನ ಅಂತ್ಯ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ ಅವರ ಬಂಧನವನ್ನು ತೆರವುಗೊಳಿಸಿ ಜಮ್ಮು ಕಾಶ್ಮೀರ ಆಡಳಿತ ಆದೇಶ ಹೊರಡಿಸಿದೆ. ಅವರ ಮಗ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಇತರ ಮುಖಂಡರು ಆಗಸ್ಟ್ 5ರಿಂದ ಗೃಹಬಂಧನದಲ್ಲಿ ಇರಿಸಲಾಗಿತ್ತು.
ತಮ್ಮ ಬಿಡುಗಡೆಯ ಆದೇಶ ಹೊರಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಫಾರುಕ್ “ನನಗೆ ಏನು ಮಾತನಾಡಬೇಕೋ ಗೊತ್ತಿಲ್ಲ. ಇಂದು ನಾನು ಮುಕ್ತನಾಗಿದ್ದೇನೆ. ನಾನು ಈಗ ದೆಹಲಿಗೆ ಹೋಗಿ ಲೋಕಸಭೆಯಲ್ಲಿ ನಿಮ್ಮೆಲ್ಲರ ಪರವಾಗಿ ಮಾತನಾಡಲು ಸಾಧ್ಯವಾಗಿದೆ” ಎಂದು ಅವರ ಮನೆಯಲ್ಲಿ ನೆರೆದಿದ್ದ ಪತ್ರಕರ್ತರಿಗೆ ತಿಳಿಸಿದ್ದಾರೆ.
ನಮ್ಮ ಸ್ವಾತಂತ್ರ್ಯಕ್ಕೆ ಧ್ವನಿಯೆತ್ತಿದ್ದ ದೇಶದ ಎಲ್ಲ ಮುಖಂಡರಿಗೂ ಮತ್ತು ಜಮ್ಮು ಕಾಶ್ಮೀರದ ನಾಗರಿಕರಿಗೆ ಧನ್ಯವಾದ ತಿಳಿಸಿದ ಅಬ್ದುಲ್ಲಾಅವರು “ಎಲ್ಲ ಬಂಧಿತ ನಾಯಕರನ್ನು ಬಿಡುಗಡೆಗೊಳಿಸಿದ ಮೇಲೆ ಈ ಸ್ವಾತಂತ್ರ್ಯ ಸಂಪೂರ್ಣವಾಗಲಿದೆ” ಎಂದಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನಿಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಮೇಲೆ ಶ್ರೀನಗರ ಸಂಸದ ಫಾರುಕ್ ಅಬ್ದುಲ್ಲ ಅವರನು ಸಾರ್ವಜನಿಕ ಸುರಕ್ಷಾ ಕಾಯ್ದೆ (ಪಿ ಎಸ್ ಎ) ಅಡಿ ಆಗಸ್ಟ್ 5 ರಿಂದ ಗೃಹಬಂಧನದಲ್ಲಿ ಇರಿಸಲಾಗಿತ್ತು.
ಪಿ ಎಸ್ ಎ ಅಡಿ ಯಾವುದೇ ವ್ಯಕಿಯನ್ನು ಯಾವುದೇ ಅಧಿಕೃತ ಆರೋಪವಿಲ್ಲದೆ, ಯಾವುದೇ ವಿಚಾರಣೆ ನಡೆಸದೆ ಬಂಧಿಸಿಡುವ ಅವಕಾಶ ಇದೆ.

