ಹಣ ಮಾಡಲು ಐಟಿ ಅಧಿಕಾರಿ ಸೋಗಿನಲ್ಲಿ ಕಿಡ್ನ್ಯಾಪ್ – ನಿರ್ಮಾಪಕ ಸೇರಿ ನಾಲ್ವರ ಬಂಧನ!
ಸಿನಿಮಾ ಮಾಡಲು ಸಾಲಮಾಡಿ ಬಡ್ಡಿ ಚಕ್ರಬಡ್ಡಿಗೆ ಬೇಸತ್ತಿದ್ದ ಸಿನಿಮಾ ನಿರ್ಮಾಪಕನೊಬ್ಬ ಐಟಿ ಅಧಿಕಾರಿಗಳ ಸೋಗಿನಲ್ಲಿ ಕಿಡ್ನ್ಯಾಪ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ನಿರ್ಮಾಪಕ ಶಶಿಕುಮಾರ್ ಹಾಗೂ ನಾಲ್ವರನ್ನು ಪೊಲೀಸರು ಬಂಧಿಸಿದ್ಧಾರೆ. 2015ರಲ್ಲಿ ಹಾಫ್ ಮೆಂಟಲ್ ಎಂಬ ಸಿನಿಮಾವನ್ನು ನಿರ್ಮಿಸಿದ್ದ ಶಶಿಕುಮಾರ್ ನಷ್ಟ ಅನುಭವಿಸಿದ್ದರು. ಸಾಲ ಮಾಡಿದ್ದ ಹಣವನ್ನು ತೀರಿಸಲಾಗದೆ ಸಾಲಗಾರರ ಕಾಟಕ್ಕೆ ಬೇಸತ್ತು ಸಿನಿಮಾ ಸ್ಟೈಲ್ ನಲ್ಲೇ ಸ್ಕೆಚ್ ಹಾಕಿ ಕಿಡ್ನ್ಯಾಪ್ ಮಾಡಿದ್ದಾರೆ. ಕಿಡ್ನ್ಯಾಪ್ ಮಾಡಿದ್ರೆ ಯಾರನ್ನು ಮಾಡಬೇಕು? ಕಿಡ್ನ್ಯಾಪ್ ಸ್ಟ್ಐಲ್ ಹೇಗಿರಬೇಕು? ಈ ಬಗ್ಗೆ ಪ್ಲ್ಯಾನ್ ಮಾಡಲಾಗಿದೆ.
ಈ ವೇಳೆ ಹಣವುಳ್ಳವರ ಲಿಸ್ಟ್ ಮಾಡಿಕೊಂಡಿದೆ. ಇದರಲ್ಲಿ ಬಸವೇಶ್ವರ ನಗರ ನಿವಾಸಿ ಈರುಳ್ಳಿ ವ್ಯವಹಾರ ಮಾಡುತ್ತಿದ್ದ ಉದ್ಯಮಿ ಶ್ರೀನಿವಾಸನ್ ಬಳಿ ಕೋಟ್ಯಾಂತರ ಹಣ ಇದೆ ಎಂಬ ಮಾಹಿತಿ ಪಡೆದು ಕಿಡ್ನ್ಯಾಪ್ ಗೆ ಸ್ಕೆಚ್ ಹಾಕಿದ್ದಾರೆ. ಪ್ಲ್ಯಾನ್ ಪ್ರಕಾರ ಸೆಪ್ಟೆಂಬರ್ 30 ರಂದು ಐಟಿ ಅಧಿಕಾರಿಗಳ ಸೋಗಿನಲ್ಲಿ ಶ್ರೀನಿವಾಸನ್ ಕಾರಿಗೆ ಅಡ್ಡ ಹಾಕಿ ನಿಮ್ಮ ಮೇಲೆ ವಂಚನೆ ದೂರುಗಳಿವೆ ಎಂದು ತಿಳಿಸಿದ್ದಾರೆ.
ಟ್ಯಾಕ್ಸ್ ವಂಚನೆ ಮಾಡಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದು ಹೆದರಿಸಿ 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಇದ್ದರೆ ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ. ನಂತರ 20 ಲಕ್ಷಕ್ಕೆ ಡೀಲ್ ಮಾಡಿಕೋಮಡಿದ್ದಾರೆ. ಶ್ರೀನಿವಾಸನ್ ಗೆ ನಾಳೆ ಹಣ ತಂದು ಕೊಡುವಂತೆ ಹೇಳಿ ಬಿಟ್ಟು ಕಳುಹಿಸಿದ್ದಾರೆ.
ಅನುಮಾನ ಬಂದ ಶ್ರೀನಿವಾಸನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಪೊಲೀಸರು ‘ಹಾಫ್ ಮೆಂಟಲ್’ ನಿರ್ಮಾಪಕ ಶಶಿಕುಮಾರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.