ಬಿಜೆಪಿಗರನ್ನೇ ದಿಗ್ಭ್ರಮೆಗೊಳಿಸಿದ ಆ ಮೂವರು ರಾಜ್ಯಸಭಾ ಅಭ್ಯರ್ಥಿಗಳು ಯಾರು; ಡಿಟೈಲ್ಸ್
ಮುಂಬರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅಭ್ಯಋfತಿ ಪಟ್ಟಿಯಲ್ಲಿದ್ದ ಮೂರು ಹೆಸರುಗಳು ಪಕ್ಷದೊಳಗಿರುವ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿವೆ. ಒಬ್ಬರು 2002 ರ ಗೋದ್ರಾ ಹತ್ಯಾಕಾಂಡದಲ್ಲಿ ಆರೋಪಿಗಳ ಪರ ರಕ್ಷಣಾ ವಕೀಲರಾಗಿದ್ದ ಅಭಯ್ ಭಾರಧ್ವಜ್, ಎರಡನೆಯವರು ಸುಮೇರ್ ಸಿಂಗ್ ಸೋಲಂಕಿ ಮತ್ತು ಮೂರನೆಯದು 2017 ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತ ಪಿಎಂ ನರೇಂದ್ರ ಮೋದಿಯವರ ಸ್ನೇಹಿತೆ ಇಂದೂ ಗೋಸ್ವಾಮಿ. ಈ ಮೂವರು ಕ್ರಮವಾಗಿ ಗುಜರಾತ್, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಮಾರ್ಚ್ 26 ರ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಅಭಯ್ ಭಾರಧ್ವಜ್:
ಭಾರಧ್ವಜ್ ಅವರು ರಾಜ್ಕೋಟ್ ಮೂಲದ ವಕೀಲರಾಗಿದ್ದು, 2002 ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಗೋದ್ರಾ ಹತ್ಯಾಕಾಂಡದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 70 ಮುಸ್ಲಿಂಮರನ್ನು ಹತ್ಯೆಗೈದಿದ್ದ ಆರೋಪಿಗಳಲ್ಲಿ 24 ಜನರನ್ನು ಅಪರಾಧಿಗಳೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯವು 36 ಜನರನ್ನು 2016ರಲ್ಲಿ ಖುಲಾಸೆ ಗೊಳಿಸಿತ್ತು. ಈ 50 ಅಪರಾಧಿಗಳು ಮತ್ತು ಆರೋಪಿಗಳ ಪರವಾಗಿ ಭಾರಧ್ವಜ್ ವಾದ ಮಂಡಿಸಿದ್ದರು.
ಮೂಲಗಳ ಪ್ರಕಾರ, ಭರದ್ವಾಜ್ ತನ್ನ ಶೈಕ್ಷಣಿಕ ದಿನಗಳಲ್ಲಿ ಆರೆಸ್ಸೆಸ್ನ ವಿದ್ಯಾರ್ಥಿ ವಿಭಾಗವಾದ ಅಖಿಲ್ ಭಾರತೀಯ ವಿದ್ಯಾ ಪರಿಷತ್ ಜೊತೆ ಒಡನಾಟ ಹೊಂದಿದ್ದರು. ಆದರೆ 1990ರ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದೆ ಭ್ರಮನಿರಸಗೊಂಡಿದ್ದರು. ಅವರು 1995ರ ಚುನಾವಣೆಯಲ್ಲಿ ರಾಜ್ಕೋಟ್ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಬಿಜೆಪಿ (ಪ್ರಸ್ತುತ ಕರ್ನಾಟಕ ಗವರ್ನರ್ ವಾಜುಭಾಯ್ ವಾಲಾ) ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಂತರದ ಮೂರನೇ ಸ್ಥಾನ ಪಡೆದರು. ತರುವಾಯ ಅವರು ಬಿಜೆಪಿಗೆ ಸೇರಿದ್ದರು. ಆದರೆ, ಬಿಜೆಪಿ ಅವರನ್ನು ‘ಸೈಡ್ಲೈನ್’ ಮಾಡಿತ್ತು ಎಂದು ಮೂಲಗಳು ಹೇಳುತ್ತವೆ.
2016ರಲ್ಲಿ ಮೋದಿ ಸರ್ಕಾರ ಅವರನ್ನು ಕಾನೂನು ಆಯೋಗಕ್ಕೆ ಅರೆಕಾಲಿಕ ಸದಸ್ಯರಾಗಿ ನೇಮಿಸಿತ್ತು. ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಮಂಡಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ಸರ್ಕಾರವು ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿಯೂ ನೇಮಿಸಿತ್ತು. ಮಾಜಿ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರು ರಾಜ್ಕೋಟ್ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಶರ್ಮಾ ವಿರುದ್ಧ ಗುಜರಾತ್ ಸರ್ಕಾರಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸಿದರು.
ರಾಜ್ಯಸಭಾ ಸ್ಥಾನವನ್ನು ಪಡೆಯುವಷ್ಟು ದೊಡ್ಡ ನಾಯಕರಲ್ಲದ ಭರದ್ವಾಜ್ ಅವರ ಆಯ್ಕೆ ಬಿಜೆಪಿಗರಿಗೆ ಆಶ್ಚರ್ಯಕರವಾಗಿದೆ. ಆದರೆ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಕಾರಣದಿಂದಾಗಿ ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯ್ ರೂಪಾನಿ ಮತ್ತು ಅಭಯ್ ಭರದ್ವಾಜ್ ಅವರು ತಮ್ಮ ಎಬಿವಿಪಿ ದಿನಗಳಿಂದ ಸ್ನೇಹಿತರು. ರೂಪಾನಿ 2016ರಲ್ಲಿ ಗುಜರಾತ್ ಮುಖ್ಯಮಂತ್ರಿ ಆದಮೇಲೆ ಭಾರಧ್ವಜ್ಗೆ ಅದೃಷ್ಟ ಖುಲಾಯಿಸಿದೆ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ.
ಸುಮೇರ್ ಸಿಂಗ್ ಸೋಲಂಕಿ”
ಸೋಲಂಕಿ ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಸೋಲಂಕಿ ಮತ್ತು ಇತ್ತೀಚೆಗೆ ಬಿಜೆಪಿ ಸೇರಿದ ಜ್ಯೋತಿರದಿತ್ಯ ಸಿಂಧಿಯಾ ಅವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವ ಮೂಲಕ ಹಿರಿಯ ನಾಯಕರಾದ ಸತ್ಯನಾರಾಯಣ್ ಜತಿಯಾ ಮತ್ತು ಎರಡು ಅವಧಿಯ ರಾಜ್ಯಸಭಾ ಸದಸ್ಯ ಪ್ರಭಾತ್ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸುತ್ತಿದೆ.
ಸೋಲಂಕಿ, ಆಕಾಂಕ್ಷಿ ಅಲ್ಲ. ಅವರು ಟಿಕೆಟ್ ಕೋರಿರಲಿಲ್ಲ ಎಂದು ಹೇಳಲಾಗುತ್ತಿದೆ. “ನನ್ನನ್ನು ಆಯ್ಕೆ ಮಾಡಿರುವುದಾಗಿ ತಿಳಿದುಬಂದಾಗಿ ನಾನು ಕಾಲೇಜಿನಲ್ಲಿ ತರಗತಿಯಲ್ಲಿದ್ದೆ. ನಾಮಪತ್ರ ಸಲ್ಲಿಸಲು ಪಕ್ಷದ ಕಚೇರಿಗೆ ಬರಲು ನನಗೆ ತಿಳಿಸಲಾಯಿತು” ಎಂದು ಅವರು ಹೇಳಿದ್ದಾರೆ.
ಸೋಲಂಕಿ ಅವರ ನಾಮನಿರ್ದೇಶನವು ಮಧ್ಯಪ್ರದೇಶದ ಬಿಜೆಪಿ ನಾಯಕರಿಗೆ ಆಶ್ಚರ್ಯವನ್ನುಂಟು ಮಾಡಿದ್ದು, ಪಕ್ಷದ ಭೋಪಾಲ್ ಘಟಕದವರನ್ನು ಸಂಪರ್ಕಿಸಿದಾಗ, “ಬಿಜೆಪಿಯಲ್ಲಿ ಅಂತಹ ಯಾವುದೇ ವ್ಯಕ್ತಿಯ ಬಗ್ಗೆ ನಮಗೆ ತಿಳಿದಿಲ್ಲ… ಅವರು ಅಂಗಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆಯೇ ಎಂದು ನಾವು ಆರ್ಎಸ್ಎಸ್ನೊಂದಿಗೆ ಪರಿಶೀಲಿಸಬೇಕಾಗಿದೆ.” ಎಂದಿದ್ದಾರೆ.
ಸೋಲಂಕಿ ಆರ್ಎಸ್ಎಸ್ನೊಂದಿಗೆ ಸಂಬಂಧ ನಿರಂತರ ಒಡನಾಟ ಹೊಂದಿದ್ದು, ಸ್ವಚ್ ಭಾರತ್ ಮಿಷನ್ನಡಿಯಲ್ಲಿ 600 ಹಳ್ಳಿಗಳಲ್ಲಿ ಸ್ವಚ್ಛತೆ ಪಾಯಿಂಟ್ ಪರ್ಸನ್ ಆಗಿ ಸೇವೆ ಸಲ್ಲಿಸಿದರು. ಈ ಕಾರಣಕ್ಕೆ ಅವರನ್ನು ಗೌರವಿಸಲು “ಆರೆಸ್ಸೆಸ್ ಕೋಟಾ”ದಿಂದ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂದೂ ಗೋಸ್ವಾಮಿ:
ಹಿಮಾಚಲ ಪ್ರದೇಶದ ಬಿಜೆಪಿಯ ಮಹಿಳಾ ಮೋರ್ಚಾ (ಮಹಿಳಾ ವಿಭಾಗ) ಮಾಜಿ ಮುಖ್ಯಸ್ಥ ಇಂದೂ ಗೋಸ್ವಾಮಿ. ಅವರು ಪಾಲಂಪೂರ್ ಕ್ಷೇತ್ರದಿಂದ 2017ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.
ಮೂಲಗಳ ಪ್ರಕಾರ, ಬಿಜೆಪಿಯ ಹಿರಿಯ ನಾಯಕ ಮಹೇಂದ್ರ ನಾಥ್ ಪಾಂಡೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಹಪಾಠಿ ಮತ್ತು ಪಕ್ಷದ ಕಚೇರಿ ಉಸ್ತುವಾರಿ, ಮಾಜಿ ರಾಜ್ಯ ಅಧ್ಯಕ್ಷ ಸತ್ಪಾಲ್ ಸಟ್ಟಿ ಮತ್ತು ಮಾಜಿ ಸಂಸದ ವೀರೇಂದ್ರ ಕಶ್ಯಪ್ ಅವರಂತಹ ಹಿರಿಯ ನಾಯಕರ ಪ್ರಭಾವದಿಂದ ಇಂದೂ ಗೋಸ್ವಾಮಿಯವರನ್ನು ಆಯ್ಕೆ ಮಾಡಲಾಗಿದೆ.
“ಗೋಸ್ವಾಮಿ ಅವರು ರಾಜ್ಯದ ಪ್ರಭಾರಿಯಾಗಿದ್ದ ದಿನಗಳಿಂದಲೂ ನರೇಂದ್ರ ಮೋದಿಯವರಿಗೆ ಸ್ನೇಹಿತರಾಗಿದ್ದರು. ಗೋಸ್ವಾಮಿಗೆ ಟಿಕೆಟ್ ನೀಡುವಂತೆ ಪ್ರಧಾನ ಮಂತ್ರಿ ಕಚೇರಿಯಿಂದ (ಪಿಎಂಒ) ನೇರವಾಗಿ ಬೇಡಿಕೆ ಬಂದಿದೆ” ಎಂದು ಮೂಲಗಳು ತಿಳಿಸಿವೆ.
ಈ ಮೂವರು ಮಾರ್ಚ್ 26ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

