ಲಾಕ್ಡೌನ್ ಕತೆ; ಬೀದಿ ಬದಿ ವ್ಯಾಪಾರಿಗಳ ವ್ಯಥೆ
“ನಾನು ಓದಿರೋದು ಕಡಿಮೆ ನಾನು ಕೆಲಸಕ್ಕೆ ಹೋದರೆ ದಿನಕ್ಕೆ 300-400 ರೂ ಸಿಗುತ್ತಿತ್ತು ಹಾಗಾಗಿ ನಾವೇ ಒಂದು ತಳ್ಳು ಗಾಡಿಯಲ್ಲಿ ಟಿಫನ್ ಸೆಂಟರ್ ಹಾಕಿಕೊಂಡು ಕಳೆದ ಎರಡು ವರ್ಷದಿಂದ ಜೀವನ ನಡೆಸುತ್ತಿದ್ದೇವು. ಆದರೆ ಕೊರೊನಾ ವೈರಸ್ ಭೀತಿಯಿಂದ ಬಿಬಿಎಂಪಿ ಎಲ್ಲಾ ಬೀದಿ ಬದಿಯ ಅಂಗಡಿಗಳನ್ನು ಎತ್ತಂಗಡಿ ಮಾಡಿರುವುದರಿಂದ ಮತ್ತೆ ನಮ್ಮ ಜೀವನ ಮೊದಲಿನ ಸ್ಥಿತಿ ತಲುಪಿದೆ. ಜೊತೆಗೆ ಈಗಾಗಲೇ ಲಾಕ್ಡೌನ್ ಮಾಡಿ 24 ದಿನಗಳು ಕಳೆದಿದ್ದು ಕೈಯಲ್ಲಿ ಕೆಲಸನೂ ಇಲ್ಲ, ಜೇಬಲ್ಲಿ ಕಾಸೂ ಇಲ್ಲದೆ ದಿನ ಕಳೆಯುವಂತೆ ಆಗಿದೆ.” ಇದು ಬೀದಿಬದಿ ವ್ಯಾಪಾರಿ ತಿಮ್ಮಪ್ಪನ ಅಂತರಾಳದ ಮಾತು.
ಇದು ಒಬ್ಬ ಬೀದಿ ವ್ಯಾಪಾರಿಯ ವ್ಯತೆಯಷ್ಟೇ ಅಲ್ಲಾ, ದಿನಗೂಲಿ ನೌಕರರು, ಬೀದಿ ವ್ಯಾಪಾರಿಗಳಾದ ಬಜ್ಜಿ, ತಿಂಡಿ ಮನೆ, ಚಾಟ್ಸ್ ಅಂಗಡಿಗಳಾದ ಗೋಬಿ ಮಂಚೂರಿ, ಪಾನಿ ಪುರಿ, ಗೋಲ್ಗೊಪ್ಪ, ಎಗ್ರೈಸ್ ಅಂಗಡಿಗಳು, ಗೊರಿಲ್ಲಾ ಗ್ಲಾಸ್ ಮಾರಾಟಗಾರರು, ಅಲಂಕಾರಿಕ ವಸ್ತುಗಳ ಮಾರಾಟಗಾರರು, ಹೂವು ಮಾರಾಟಗಾರರು ಹೀಗೆ ಅನೇಕ ಮಂದಿ ವ್ಯಾಪಾರಿಗಳ ಒಡಲಾಳದ ಮಾತಾಗಿದೆ.
ಕೊರೊನಾ ವೈರಸ್ನಿಂದ ಜನರ ಆರೋಗ್ಯದ ದೃಷ್ಟಿಯಿಂದ ಈ ದೇಶವೇ ಸ್ತಬ್ಭವಾಗಿದ್ದು, ಇದು ಅನೇಕ ಮಂದಿಗೆ ಹೆಚ್ಚು ಹೊಡೆತ ಬಿದ್ದಿದೆ. ಈಗಾಗಲೇ ಒಂದು ಹಂತದ ಲಾಕ್ಡೌನ್ ಮುಗಿದಿದ್ದು, ಇಲ್ಲಿಯವರೆಗೆ ಅಲ್ಪ ಸ್ವಲ್ಪ ಕೂಡಿಟ್ಟಿದ್ದ ಹಣದಿಂದ ಜೀವನ ನಿರ್ವಹಣೆ ಮಾಡುತ್ತಿದ್ದು, ಈಗ ಎರಡನೇ ಹಂತದ ಲಾಕ್ಡೌನ್ ಕಳೆಯಲು ಜನರು ತುಂಬಾ ಒದ್ದಾಡುತ್ತಿದ್ದಾರೆ.
ಸರ್ಕಾರ ಬಡವರ ಹೊಟ್ಟೆ ತುಂಬಿಸಲು ಎರಡು ತಿಂಗಳ ದಿನಸಿಯನ್ನು ಪಡಿತರ ಚೀಟಿ ಇಲ್ಲದವರಿಗೂ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಇದು ಇನ್ನೂ ಹಲವಾರು ಮಂದಿಗೆ ಸಿಕ್ಕಿಲ್ಲ. ಏಕೆಂದರೆ ಮೊದಲು ಪಡಿತರ ಚೀಟಿ ಹೊಂದಿರುವ ಎಲ್ಲಾ ಗ್ರಾಹಕರಿಗೆ ನೀಡಿದ ಮೇಲೆ ಪಡಿತರ ಚೀಟಿ ಇಲ್ಲದವರಿಗೆ ನೀಡುತ್ತೇವೆ ಎಂದು ಪಡಿತರ ವಿತರಕರು ತಿಳಿಸುತ್ತಿದ್ದಾರೆ. ಇನ್ನೂ ಉಚಿತವಾಗಿ ಹಾಲು ವಿತರಿಸುತ್ತಿದ್ದರೆ ಇದೂ ಸಹ ಉಳ್ಳವರ ಪಾಲಾಗಿ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬತಾಗಿದೆ.
ಕೇವಲ ಬೆಂಗಳೂರು ನಗರದಲ್ಲೇ ಈ ಲಾಕ್ಡೌನ್ ಹಿನ್ನಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬೀದಿಬದಿ ವ್ಯಾಪಾರಿಗಳು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಾರೆ. ಇನ್ನೂ ನಿರ್ಗತಿಕರು ಮತ್ತು ಬೀಕ್ಷೆ ಬೇಡುವವರ ಕಥೆಯಂತೂ ಹೇಳತೀರದು. ಮನೆಯಿಲ್ಲದ ನಿರ್ಗತಿಕರೂ ರಸ್ತೆಬದಿಯಲ್ಲೋ, ಮರದ ಕೆಳಗೋ, ಬಸ್ಸ್ಪಾಪ್ಗಳಲ್ಲಿಯೋ ಮಲಗಿ ಜೀವನ ನಡೆಸುತ್ತಿದ್ದಾರೆ. ಯಾರೋ ಯಾವಾಗೋ ಕೊಟ್ಟಿದ್ದನ್ನು ತಿಂದು ಬದುಕುತ್ತಿದ್ದಾರೆ. ಇನ್ನೂ ಎಲ್ಲಾ ಬೀದಿ ಬದಿ ಅಂಗಡಿಗಳನ್ನು ಮುಚ್ಚಿದ್ದು, ದೊಡ್ಡ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಮಾತ್ರ ತೆರೆದಿವೆ. ಇಲ್ಲಿನ ಬೆಲೆಗೆ ಊಟವನ್ನು ಖರೀದಿಸಲು ಶಕ್ತರಲ್ಲದೆ ಮೂರೊತ್ತಿನ ಊಟದಲ್ಲಿ ಒಂದು ಹೊತ್ತು ತಿಂದು ದಿನಕಳೆಯುತ್ತಿರುವ ಜನರನ್ನು ಕಾಣಬಹುದಾದ ಜನರೇ ನಗರದಲ್ಲಿ ಹಲವರು.
“ನಾವು ದಿನ ಬೆಳಗ್ಗೆ ಮನೆಯಿಂದ ಮನೆಗೆ ಹೂ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೇವೆ. ಆದರೆ ಕೊರೊನಾ ವೈರಸ್ ಭೀತಿಯಿಂದ ಹೂವಿನ ಮಾರಾಟಕ್ಕೂ ಅವಕಾಶವಿಲ್ಲದೆ ಮನೆಯಲ್ಲಿಯೇ ಇದ್ದೇವೆ. ಕೂತು ತಿನ್ನುವವರಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಮನೆಯಲ್ಲಿ ನಾಲ್ಕೈದು ಮಂದಿ ಎಲ್ಲರೂ ಮನೆಯಲ್ಲಿಯೆ ಇದ್ದೇವೆ. ಇಷ್ಟು ದಿನ ಇದ್ದ ಹಣವನ್ನು ಖರ್ಚು ಮಾಡಿ ದಿನಸಿ ತಂದಿದ್ದೇವೆ. ಈಗ ನಮ್ಮ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ.” – ವೆಂಕಟಪ್ಪ, ಹೂವಿನ ವ್ಯಾಪಾರಿ
“ನಾನು ಬೀದಿ ಬದಿಯಲ್ಲಿ ಗೋಲ್ಗೊಪ್ಪ ವ್ಯಾಪಾರ ಮಾಡಿ ನನ್ನ ಕುಟುಂಬವನ್ನು ಸಾಕುತ್ತಿದ್ದೆ. ಈಗ ಲಾಕ್ಡೌನ್ ಹಿನ್ನಲೆ ಕೆಲಸನೂ ಇಲ್ಲದೆ ನನ್ನ ಮಗಳು ಚಾಕ್ಲೇಟ್ ಕೇಳಿದರೂ ಕೊಡಿಸಲು ಆಗದಂತಹ ಸ್ಥಿತಿಯಲ್ಲಿದ್ದೇನೆ.” – ಪುನೀತ್, ಗೋಲ್ಗೊಪ್ಪ ವ್ಯಾಪಾರಿ
|ವರದಿ – ಚೈತ್ರಾ |

