ಕೇರಳ: ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕನ ಮೇಲೆ ಪೊಲೀಸರಿಂದ ಹಲ್ಲೆ
ಕೇರಳದ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ರಾತ್ರಿ ಮಾವೇಲಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಕರೊಬ್ಬರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿತ ಪೊಲೀಸ್ ಅಧಿಕಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಪ್ರಮೋದ್ ಎಂದು ಗುರುತಿಸಲಾಗಿದ್ದು, ಅವರು ಪ್ರಯಾಣಿಕರೊಬ್ಬರಿಗೆ ಕಪಾಳಕ್ಕೆ ಹೊಡೆದು, ಒದ್ದು ಪ್ರಯಾಣಿಕನನ್ನು ಕೆಳಗೆ ಬೀಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲಿನಲ್ಲಿ ಪೊಲೀಸ್ ಅಧಿಕಾರಿಯೂ ಪ್ರಯಾಣಿಕನೊಂದಿಗೆ ಟಿಕೆಟ್ ಬಗ್ಗೆ ಪ್ರಶ್ನಿಸುತ್ತಾರೆ. ಈ ವೇಳೆ ಅವರು ಅದನ್ನು ಹುಡುಕುತ್ತಿರುವ ವೇಳೆ ಅಧಿಕಾರಿಯೂ ಅವರಿಗೆ ಕಪಾಳಕ್ಕೆ ಹೊಡೆಯುತ್ತಾರೆ. ಇದರ ನಂತರ ಪ್ರಯಾಣಿಕ ಕೆಳಗೆ ಕುಸಿಯುತ್ತಾರೆ, ಇಷ್ಟಕ್ಕೆ ಬಿಡದ ಅಧಿಕಾರಿ ಅವರನ್ನು ಕಾಲಿನಿಂದಲೂ ಒದೆಯುತ್ತಾರೆ.
ಸಹ ಪ್ರಯಾಣಿಕರ ಆಕ್ಷೇಪದ ನಡುವೆಯೂ ಅಧಿಕಾರಿಯೂ ಪ್ರಯಾಣಿಕರಿಗೆ ಥಳಿಸುತ್ತಲೇ ಇದ್ದರು. ಆದರೆ ಅಧಿಕಾರಿಯು ಪ್ರಯಾಣಿಕನಿಗೆ ಥಳಿಸುವಂತಹ ತಪ್ಪನ್ನು ಏನೂ ಮಾಡಿಲ್ಲ ಎಂದು ಸಹ ಪ್ರಯಾಣಿಕರು ಹೇಳಿದ್ದಾರೆ ಎಂದು ಮಾಧ್ಯಮಂ ವರದಿ ಮಾಡಿದೆ. ಇದರ ನಂತರ ಅಧಿಕಾರಿಯು ಪ್ರಯಾಣಿಕನನ್ನು ರೈಲಿನಿಂದ ಹೊರಕ್ಕೆ ಕಳುಹಿಸಿದ್ದಾರೆ.
ತನ್ನ ಕೃತ್ಯವನ್ನು ಪೊಲೀಸ್ ಅಧಿಕಾರಿ ಪ್ರಮೋದ್ ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ರೀತಿ ವರ್ತಿಸದಿದ್ದರೆ ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ. ಕೇರಳದ ಕಣ್ಣೂರಿನ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಪ್ರಸ್ತುತ ಘಟನೆಗಳ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಪಿಣರಾಯಿ ವಿಜಯನ್ ಗೃಹ ಸಚಿವರಾಗಿದ್ದರೂ, ಪೊಲೀಸ್ ಪಡೆಯನ್ನು ಈಗ ಸಿಪಿಐಎಂ ನಿಯಂತ್ರಿಸುತ್ತಿದೆ ಎಂದು ಪ್ರತಿಪಕ್ಷದ ನಾಯಕ ವಿಡಿ ಸತೀಶನ್ ಘಟನೆಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
“8 ವರ್ಷದ ಬಾಲಕಿಯೊಂದಿಗೆ ಮಹಿಳಾ ಪೊಲೀಸ್ ಅಧಿಕಾರಿ ಹೇಗೆ ಅನುಚಿತವಾಗಿ ವರ್ತಿಸಿದ್ದಾರೆಂದು ನಾವೆಲ್ಲರೂ ನೋಡುತ್ತಿದ್ದೇವೆ. ಪೊಲೀಸರಿಗೆ ಜನರ ಮೇಲೆ ಹಿಡಿತ ಸಾಧಿಸುವ ಹಕ್ಕಿಲ್ಲ. ಕಾನೂನು ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಬಹುದು, ಆದರೆ ಈ ರೀತಿಯಲ್ಲಿ ಒದೆಯುವುದರ ಮೂಲಕ ಅಲ್ಲ” ಎಂದು ಸತೀಶನ್ ಹೇಳಿದ್ದಾರೆ.