ವಿಧಾನಸೌಧ ಸ್ಯಾನಿಟೈಸೇ‍ಷನ್‌ನಲ್ಲೂ ನಡೆದಿದೆಯಾ ಅವ್ಯವಹಾರ; ಗುತ್ತಿಗೆ ದರದ ಮಾಹಿತಿ ನೀಡದ ಸಚಿವಾಲಯ

ವಿಧಾನಸಭೆ ಸಚಿವಾಲಯದ ವ್ಯಾಪ್ತಿಯಲ್ಲಿರುವ ವಿಧಾನಸೌಧದ ಕೊಠಡಿಗಳನ್ನು ಸ್ಯಾನಿಟೈಸೇಷನ್ ಮಾಡಿಸಲಿ ಸಚಿವಾಲಯ ವು ಕೆಸಿಐಸಿ ಕಂಪನಿಗೆ ಕಾರ್ಯಾದೇಶ ನೀಡಿದೆ. ಆದರೆ, ಸ್ಮಾನಿಟೈಸೇಷನ್ ಮಾಡಲು ನಿಗದಿಪಡಿಸಿರುವ ದರದ ಮಾಹಿತಿಯನ್ನು ಗೌಪ್ಯವಾಗಿರಿಸಿದೆ.

ಸ್ಯಾನಿಟೈಸ್ ಮಾಡಲು ಆದೇಶ ನೀಡಲಾಗಿರುವ ಕಂಪನಿ ಹೆಸರನ್ನು ಮಾತ್ರ ಬಹಿರಂಗ ಪಡಿಸಿದ್ದು, ಕೆಸಿಐಸಿ ಪ್ರೈವೇಟ್ ಲಿಮಿಟೆಡ್‌ಗೆ ಯಾವ ಮೊತ್ತಕ್ಕೆ ಕಾರ್ಯಾದೇಶ ಮಾಡಲಾಗಿದೆ ಎಂಬುದನ್ನು ಒಳಗೊಂಡಂತೆ ಉಳಿದ ಯಾವ ವಿವರಗಳನ್ನೂ ಬಹಿರಂಗಪಡಿಸದೇ ಇರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಕೋವಿಡ್ -19 ರ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ವಿಧಾನಸೌಧ ಕೊಠಡಿಗಳನ್ನು ಸಾನಿಟೈಸೇಷನ್ ಮಾಡಲು ಕೆಸಿಐಸಿ ಪ್ರೈವೇಟ್ ಲಿಮಿಟೆಡ್ಗೆ ಕಾರ್ಯಾದೇಶ ನೀಡಿದ್ದು , ಈ ಸಂಬಂಧದಲ್ಲಿ ಕಡತವು ಚಾಲ್ತಿಯಲ್ಲಿರುತ್ತದೆ ಎಂದು ವಿಧಾನಸಭೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಜಯಲಕ್ಷಮ್ಮ ಅವರು 2020 ರ ಆಗಸ್ಟ್ 8 ರಂದು ಮಾಹಿತಿ ನೀಡಿ ಕೈತೊಳೆದುಕೊಂಡಿದ್ದಾರೆ. ಕಾರ್ಯಾದೇಶದ ಪ್ರತಿಯನೂ ಒದಗಿಸದ ವಿಧಾನಸಭೆ ಸಚಿವಾಲಯದ ನಡೆ ಅನುಮಾನಗಳನ್ನು ಮತ್ತಷ್ಟು ಪುಷ್ಠೀಕರಿಸಿದೆ.

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್ ಮಾಡಿಸುವುದಕ್ಕೆ ಸಂಬಂಧಿಸಿದಂತೆ, ಮಾಹಿತಿ ಹಕ್ಕಿನ ಅಡಿಯಲ್ಲಿ 2020 ರ ಜುಲೈ 9 ರಂದು ಮಾಹಿತಿ ಕೇಳಲಾಗಿದ್ದು, ಕೊಠಡಿವಾರು , ಚದುರ ಮೀಟರ್ ವಿಸ್ತೀರ್ಣವಾರು, ಕಂಪನಿ ನೀಡಿರುವ ದರ, ಸಚಿವಾಲಯ ನಿಗದಿಪಡಿಸಿರುವ ದರ ಮತ್ತು ಎಷ್ಟು ಮೊತ್ತ ಪಾವತಿಸಿದ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಕೇಳಿದರೂ ಸಚಿವಾಲಯ ಮಾಹಿತಿ ನೀಡಿಲ್ಲ ಎಂದು ದಿ ಫೈಲ್ ವರದಿ ಮಾಡಿದೆ.

ಪಾವತಿಗೆ ಸಂಬಂಧಿಸಿದಂತೆ ಸಲ್ಲಿಸಬೇಕಾದ ಬಿಲ್‌ಗಳ ವಿವರ ಕಾಮಗಾರಿ ನಿರ್ವಹಿಸಬೇಕಾದ ಕಾಲಮಿತಿ, ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿ ಸಂಬಂಧ ಬಿಲ್‌ಗಳ ಒದಗಿಸುವ ಮಾಹಿತಿ ಕಾರ್ಯಾದೇಶದಲ್ಲಿದೆ. ಆದರೆ ಈ ಯಾವ ವಿವರಗಳನ್ನೂ ಒದಗಿಸದಯೇ. ಕೇವಲ ಕಾರ್ಯಾದೇಶ ನೀಡಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿ,  ಉಳಿದ ಮಾಹಿತಿಗಳನ್ನೂ ನೀಡದಿರುವುದು ಸಂದೇಹಾಸ್ಪದವಾಗಿದ .

ವಿಧಾನಸೌಧದ ಕೊಠಡಿಗಳನ್ನು ಈ ಕಂಪನಿ ಈಗಾಗಲೇ ಸ್ಯಾನಿಟೈಸೇಷನ್ ಮಾಡಿದೆ. ಆದರೆ ಈ ಕಂಪನಿಗೆ ಕಾರ್ಯಾದೇಶ ನೀಡುವ ಮುನ್ನ ಯಾವುದೇ ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ ಮತ್ತು ಇತರೆ ಕಂಪನಿಗಳಿಂದ ದರಪಟ್ಟಿಯನ್ನೂ ಪಡೆದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೆ, ಇದೇ ಕಂಪನಿಗೆ ಶಾಸಕರ ಭವನದ ಕೊಠಡಿಗಳಿಗೆ ಸ್ಮಾನಿಟೈಸೇಷನ್ ಮಾಡಲು ತಿಂಗಳಿಗೆ 98.00 ಲಕ್ಷ ರೂ ಲೆಕ್ಕದಲ್ಲಿ, ಒಂದು ವರ್ಷಕ್ಕೆ 11.76 ಕೋಟಿ ರೂ. ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.

ಬೆಂಗಳೂರಿನ ಗಂಗಾ ನಗರದಲ್ಲಿರುವ ಕೆಸಿಐಸಿ ಕಂಪನಿಯೊಂದಕ್ಕೆ ಒಂದು ವರ್ಷದ ಗುತ್ತಿಗೆ ನೀಡಲು ಮುಂದಾಗಿರುವ ವಿಧಾನಸಭೆ ಸಚಿವಾಲಯ, ಈ ಸಂಬಂಧ ಆರ್ಥಿಕ ಇಲಾಖೆಯಿಂದ 4 ( ಜಿ ) ವಿನಾಯಿತಿಯನ್ನೂ ಪಡೆಯುವುದರಲ್ಲಿ ಸಫಲವಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೌಖಿಕ ಸೂಚನೆ ಮೇರೆಗೆ ಸ್ಯಾನಿಟೈಸೇಷನ್ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಪಾವಧಿ ಟೆಂಡರ್ ಕರೆಯಲು ಸಾಕಷ್ಟು ಅವಕಾಶಗಳು ಇದ್ದರೂ ಸಹ ಅದರ ಗೊಡವೆಗೆ ಹೋಗದ ವಿಧಾನಸಭೆ ಸಚಿವಾಲಯ ಆರ್ಥಿಕ ಇಲಾಖೆಯಿಂದ 4( ಜಿ ) ಪಡೆದಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಟೆಂಡರ್ ಕರೆಯಲಿಲ್ಲವೇಕೆ?

ಒಂದು ಲಕ್ಷ ರೂ. ಮೊತ್ತದ ಒಳಗಿನ ಕಾಮಗಾರಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಿದೆ. ಅದೇ ರೀತಿ ಐದು ಲಕ್ಷ ರೂ. ಮಿತಿಯೊಳಗೆ ಅನುಮೋದನೆ ನೀಡಲು ಸ್ಪೀಕರ್ ಕಾರ್ಯಾದೇಶ ಹೊರಡಿಸಬಹುದು. ಆದರೆ, ಸಾನಿಟೈಸೇಷನ್ ಮಾಡಿಸಲು ತಿಂಗಳಿಗೆ 98.00 ಲಕ್ಷ ರೂ. ವೆಚ್ಚ ಎಂದು ಅಂದಾಜಿಸಿರುವಾಗ ಟೆಂಡರ್ ಇಲ್ಲದಯೇ ನಿರ್ದಿಷ್ಟ ಕಂಪನಿಯೊಂದಕ್ಕೆ ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಲು ಹೊರಟಿದೆ ಎಂಬ ಆರೋಪ ಕೇಳಿ ಬಂದಿದೆ.

ಟೆಂಡರ್‌ ಕರೆಯಲು ಕಾಲಾವಕಾಶ ಇಲ್ಲದೇ ಇದ್ದ ಪಕ್ಷದಲ್ಲಿ ಕಂಪನಿಗಳಿಂದ ದರಪಟ್ಟಿ ಕರೆಯಬಹುದಿತ್ತು. ಆದರೆ, ಈ ಪ್ರಕ್ರಿಯೆಯೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಪಾವಧಿ ಟೆಂಡರ್, ದರ ಪಟ್ಟಿ ಪಡೆಯದೇ ಏಕಪಕ್ಷೀಯವಾಗಿ ನಿರ್ದಿಷ್ಟ ಕಂಪನಿಗೆ ನೀಡಿರುವುದರ ಹಿಂದೆ ಕಮಿಷನ್ ವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಒಟ್ಟು 5 ಸಮುಚ್ಚಯಗಳನ್ನು ಹೊಂದಿರುವ ಶಾಸಕರ ಭವನದಲ್ಲಿ ಅಂದಾಜು 400 ಕೊಠಡಿಗಳಿವೆ ಎನ್ನಲಾಗಿದೆ. ಈ ಪೈಕಿ ವಿಧಾನಸಭೆ ಸದಸ್ಯರಿಗೆ 300 ಕೊಠಡಿಗಳು ಮೀಸಲಾಗಿವೆ, ಇಷ್ಟು ಕೊಠಡಿಗಳಿಗೆ ಅಡಿ ಲೆಕ್ಕದಲ್ಲಿ ಪ್ರತಿ ದಿನವೂ ಸ್ನಾನಿಟೈಸೇಷನ್ ಮಾಡಿಸಲಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಉಚಿತವಾಗಿಯಾದರೂ ಶಾಸಕರ ಭವನದ ಕೊಠಡಿಗಳಿಗೆ ಸ್ಮಾನಿಟೈಸೇಷನ್ ಮಾಡಿಸಲು ಅವಕಾಶಗಳಿದ್ದವು. ಶಿವಾಜಿನಗರ ವಾರ್ಡ್ ವ್ಯಾಪ್ತಿಯಲ್ಲಿರುವ ಕಾರಣ ಅಲ್ಲಿನ ಕಾರ್ಪೊರೇಟರ್ ಮತ್ತು ಬಿಬಿಎಂಪಿ ಆಯುಕ್ತರ ನೆರವು ಪಡೆಯಲು ಅವಕಾಶವಿತ್ತು. ಆದರೆ ಇದಾವುದರ ಗೊಡವೆಗೆ ವಿಧಾನಸಭೆ ಸಚಿವಾಲಯ ಹೋಗಿಲ್ಲದಿರುವುದು ಸಹಜವಾಗಿ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.


ಇದನ್ನೂ ಓದಿ:  ಕೊರೊನಾಗೆ ಖರ್ಚು ಮಾಡಿರುವುದೇ 2,000 ಕೋಟಿ; ಇನ್ನು 2,000 ಕೋಟಿ ಅಕ್ರಮ ಎಲ್ಲಿಂದ ಮಾಡಬೇಕು: ಬೊಮ್ಮಾಯಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights