ಸರ್ಕಾರದ ವೈಫಲ್ಯ ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಎಫ್ಐಆರ್; ಜಲಸತ್ಯಾಗ್ರಹ ಪ್ರತಿಭಟನೆ ಮಾಡಿದ ಲೇಖಕರು
ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಜಿಲ್ಲೆಯಾದ ಫತೇಪುರದಲ್ಲಿ ಹತ್ತಾರು ಲೇಖಕರು ನದಿಯಲ್ಲಿ ನಿಂತು ಜಿಲ್ಲಾಡಳಿತ ವಿರುದ್ಧ ಜಲ ಸತ್ಯಾಗ್ರಹ ಪ್ರತಿಭಟನೆ ನಡೆಸಿದ್ದಾರೆ.
ಪತ್ರಕರ್ತರೊಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269, 270, 120-B, 385, 505 (2) ಮತ್ತು ಸಾಂಕ್ರಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 3 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿರುವ ಪತೇಪುರ್ ಜಿಲ್ಲಾಡಳಿತ ವಿರುದ್ಧ ಲೇಖಕರು ಯಮುನಾ ಮತ್ತು ಗಂಗಾ ನದಿ ತೀರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಆಡಳಿತ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಪತ್ರಕರ್ತರ ಮೇಲಿನ ಎಫ್ಐಆರ್ಗಳನ್ನು ಹಿಂಪಡೆಯಬೇಕು. ಫತೇಪುರ ಜಿಲ್ಲಾಧಿಕಾರಿ ಸಂಜೀವ್ ಸಿಂಗ್ ಅವರ ವಿರುದ್ಧ ವಿಚಾರಣೆ ನಡೆಸಬೇಕು ಮತ್ತು ಆತನನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
“ಈ ಜಿಲ್ಲಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕವಾಗಿ ಪತ್ರಕರ್ತರನ್ನು ಅವಮಾನಿಸುವುದು, ಆಡಳಿತದ ವೈಫಲ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವು ಅವರ ದುರ್ನಡತೆಯಾಗಿದೆ. ಮನಸ್ಸಿಗೆ ಬಂದದ್ದನ್ನು ಅವರು ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿಜೈಪುರ ಬ್ಲಾಕ್ನ ಅಂಧ ದಂಪತಿಗಳಿಗೆ ಆಹಾರ ಧಾನ್ಯ ಸಿಗದೇ ಇದ್ದುದರ ಬಗ್ಗೆ ಪತ್ರಕರ್ತ ಅಜಯ್ಸಿಂಗ್ ಬದೌರಿಯಾ ವರದಿ ಮಾಡಿದ್ದರು. ಆ ವರದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಜಿಲ್ಲಾಡಳಿತದ ವೈಫಲ್ಯವಾಗಿದ್ದರಿಂದ ಜಿಲ್ಲಾಧಿಕಾರಿಯನ್ನು ಕೆರಳಿಸಿತ್ತು. ಹಾಗಾಗಿ ಅವರು ಸದರ್ ಕೊಟ್ವಾಲಿ ಠಾಣೆಯಲ್ಲಿ ಬದೌರಿಯಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪ್ರತಿಭಟನಾ ನಿರತ ಲೇಖಕರು ಆರೋಪಿಸಿದ್ದಾರೆ.

ಈ ರೀತಿಯಾಗಿ ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವುದು ಇದೇ ಮೊದಲೇನೂ ಅಲ್ಲ. ದೈನಿಕ್ ಭಾಸ್ಕರ್ ಪತ್ರಿಕೆಯ ಪತ್ರಕರ್ತ ವಿವೇಕ್ ಮಿಶ್ರಾ ಅವರು, “ಗೋಶಾಲೆಗಳ ಬಗ್ಗೆ ವರದಿ ಮಾಡಿದ್ದರು. ವರದಿಯಲ್ಲಿ ಗೋಶಾಲೆಗಳಲ್ಲಿ ಪಾಲಕರು ಗೋವುಗಳಿಗೆ ಆಹಾರವನ್ನು ಸರಿಯಾಗಿ ನೀಡುವುದುದಿಲ್ಲ. ಅವುಗಳು ನಾಯಿಗಳಿಗೆ ಬಲಿಯಾಗುತ್ತಿವೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದರೆ ಬಹಳಷ್ಟು ಭ್ರಷ್ಟಾಚಾರಗಳು ಪತ್ತೆಯಾಗುತ್ತವೆ” ಎಂದು ಬರೆದಿದ್ದರು. ಆ ಕಾರಣಕ್ಕೆ ಮಿಶ್ರಾ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
ಅಲ್ಲದೆ, ಏಪ್ರಿಲ್ನಲ್ಲಿ ಮೌ ಜಿಲ್ಲೆಯಲ್ಲಿ ಸಿದ್ಧಾರ್ಥ್ ಮುರಿಯಾ ಸೇರಿದಂತೆ ಒಂಬತ್ತು ಪತ್ರಕರ್ತರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಮೌ ಜಿಲ್ಲೆಯ ಜಿಲ್ಲಾಧಿಕಾರಿ ಜ್ಞಾನ ಪ್ರಕಾಶ್ ತ್ರಿಪಾಠಿ ಕರೆದಿದ್ದ ಪತ್ರಿಕಾಗೋಷ್ಠಿಗೆ ಈ ಒಂಬತ್ತು ಪತ್ರಕರ್ತರು ಭಾಗವಹಿಸಿದ್ದರು. ಪತ್ರಿಕಾಗೋಷ್ಟಿ ಮುಗಿಸಿ ಮನೆಗೆ ಹೋಗುವುದರೊಳಗಾಗಿ ಅವರ ವಿರುದ್ಧ ಲಾಕ್ಡೌನ್ ಉಲ್ಲಂಘಿಸಿದ್ದಕ್ಕಾಗಿ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ಕರೆ ಮಾಡಿದ್ದರು.
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಕುರಿತು ಆರ್ಟಿಐ ಹಾಕಿದ್ದ ಪತ್ರಕರ್ತರಿಗೆ ಆಶ್ವರ್ಯ, ಅವರು ನೀಡಿದ್ದ ಉತ್ತರದಲ್ಲಿ ಒಂದೆಡೆ ಪತ್ರಕರ್ತರು ಪಾನ್ ಅಂಗಡಿಮುಂದೆ ನಿಂತಿದ್ದರು ಎಂದಿತ್ತು. ಮತ್ತೊಂದರಲ್ಲಿ ಜಿಲ್ಲಾಧಿಕಾರಿ ಎಫ್ಐಆರ್ ದಾಖಲಿಸುವಂತೆ ಮೌಖಿಕ ಆದೇಶ ನೀಡಿದ್ದಾರೆ ಎಂದು ಬರೆಯಲಾಗಿತ್ತು. ಇದರ ಉದ್ದೇಶ ಆಡಳಿತ ಅಥವಾ ಸರ್ಕಾರ ಪ್ರಶ್ನೆಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಅವರ ಹೊಣೆಗಾರಿಕೆಯನ್ನು ಪ್ರಶ್ನಿಸಿದಾಗ ಅಸಮಾಧಾನಗೊಳ್ಳುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
32 ವರ್ಷಗಳಿಂದ ಪತ್ರಕರ್ತರಾಗಿರುವ ಭದೌರಿಯಾ – “2020ರಲ್ಲಿ ಯಾವುದೇ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳೊಂದಿಗೆ ಸಂಬಂಧ ಹೊಂದಿಲ್ಲ.” ಅವರು ತಮ್ಮ ಟ್ವಿಟರ್ ಖಾತೆಯನ್ನು ಏಕಪಕ್ಷೀಯ ವದಂತಿಗಳನ್ನು ಟ್ವೀಟ್ ಮಾಡುವ ಮೂಲಕ ಆಡಳಿತವನ್ನು ಕೆಣಕಲು ಬಳಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಮ್ಯಾಜಿಷ್ಟ್ರೇಟ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರ ತಿಳಿಸಿದ್ದಾರೆ.

“ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಘಟನೆಯ ಬಗ್ಗೆ ಪರಿಶೀಲಿಸಿ, ಆರೋಪಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಆತನ ವಿರುದ್ಧ ವಿಚಾರಣೆ ನಡೆಸಬೇಕು. ಆತನಿಗೆ ಜಿಲ್ಲಾಧಿಕಾರಿ ಹುದ್ದೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ಪತ್ರಕರ್ತರೊಂದಿಗೆ ಅವರು ವ್ಯವಹರಿಸುವ ರೀತಿ ಖಂಡನೀಯ. ಜಿಲ್ಲಾಧಿಕಾರಿಗಳು ಆಹಾ ಜಿಲ್ಲೆಯ ಪತ್ರಕರ್ತರ ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿದ ಆರೋಪ ಹೊತ್ತಿರುವ 09 ಪತ್ರಕರ್ತರು, ತಮ್ಮ ವಿರುದ್ಧದ ಎಫ್ಐಆರ್ ಕಾರಣದಿಂದಾಗಿ ಸರಿಯಾಗಿ ಕೆಲಸ ಮಾಡಲು ಅಥವಾ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದ ಕಾರಣ ಮಾನಸಿಕವಾಗಿ ತೊಂದರೆಗೀಡಾಗಿದೆ ಎಂದು ಹೇಳಿದ್ದು, ಎಲ್ಲಾ ಪತ್ರಕರ್ತರು ಈ ವಿಷಯದಲ್ಲಿ ರಾಷ್ಟ್ರಪತಿಗಳು ಹಸ್ತಕ್ಷೇಪವನ್ನು ಕೋರಿ ಭಾರತದ ರಾಷ್ಟ್ರಪತಿಗೆ ಜಂಟಿ ಪತ್ರ ಬರೆದಿದ್ದಾರೆ.

