Lockdown: ಮನುಷ್ಯನ ಬಂಧನ; ವನ್ಯಜೀವಿಗಳು ವಿಹಂಗಮ ವಿಹಾರ!
ವಿಶ್ವ ಪ್ರಸಿದ್ದಿ ಪಡೆದಿರುವ ನಗರ ಹಂಪಿ. ನಗರದ ಪಕ್ಕದಲ್ಲೇ ಹರಿಯುವ ನದಿ ತುಂಗಭದ್ರ. ಉರಿಬಿಸಿಲಿನ ಬೇಗೆಯಲ್ಲೂ ಹೈದರಾಬಾದ್ ಕರ್ನಾಟಕ ಬಹುಭಾಗದ ಜನರಿಗೆ ನೀರುಣಿಸುವ ನದಿ ಇದು. ವಿಜಯನಗರ ಸಾಮ್ರಾಜ್ಯದ ಪರಂಪರೆಯ ಐತಿಹಾಸಿಕ ತಾಣವಾಗಿರುವ ಹಂಪಿ ಮತ್ತು ತುಂಗಾಭದ್ರ ನದಿಯು ವನ್ಯಜೀವಿಗಳ ವಾಸಸ್ಥಾನವೂ ಆಗಿತ್ತು. ನದಿಗಳಲ್ಲಿ ಹಾಗೂ ನದಿ ತಟಗಳಲ್ಲಿ ವಾಸಿಸುವ ಪ್ರಾಣಿಗಳು ನಾಗರಿಕ ಸಮಾಜದ ಅನಾಗರಿಕತೆಯಿಂದಾಗಿ ಕಣ್ಣಿಗೆ ಕಾಣದೆ ಅವಿತುಕೊಂಡಿದ್ದವು.
ಲಾಕ್‌ಡೌನ್‌ನ ಪರಿಣಾಮ (ಅ)ನಾಗರಿಕರನ್ನು ಮನೆಯಲ್ಲಿಯೇ ಬಂಧಿಸಿಟ್ಟಿದ್ದರಿಂದಾಗಿ ನೀರು ನಾಯಿಗಳಂತಹ ಪ್ರಾಣಿಗಳು ಸ್ವಚಂದವಾಗಿ ಓಡಾಡಿಕೊಂಡು ವಾಸಿಸಲಾರಂಭಿಸಿವೆ. ದೆಹಲಿಯ ವಾಯು ಮಾಲಿನ್ಯ ಶೇ.50 ಸುಧಾರಿಸಿತ್ತು. ಗಂಗಾನದಿ ನೀರು ಶುದ್ದವಾಗಿ ಕಾಣಿಸುತ್ತಿತ್ತು. ಹೀಗೆ ದೇಶದ ನಾನಾ ಭಾಗಗಳಲ್ಲಿ ನಾನಾ ರೀತಿಯ ಮಾಲಿನ್ಯ ಸುಧಾರಿಸಿತ್ತು.
ತುಂಗಾಭದ್ರ ನದಿಯ ತಟದಲ್ಲಿ ನೀರುನಾಯಿಗಳು ಈಗ ವಿಹರಿಸಲು ಶುರುಮಾಡಿವೆ. ಲಾಕ್‌ಡೌನ್‌ನಿಂದಾಗಿ ಪ್ರವಾಸಿಗರು ಹಂಪಿಗೆ ಹಾಗೂ ತುಂಗಭದ್ರ ನದಿಯ ಬಳಿಗೆ ಸುಳಿಯದೇ ಇರುವುದರಿಂದ ಜಲಚರಗಳಿಗೆ ಯಾವುದೇ ಭಯ, ತೊಂದರೆ, ಕಾಟ ಇತ್ಯಾದಿಯಾದ ಸಮಸ್ಯೆಗಳಿಲ್ಲದೆ ತಮ್ಮಿಚ್ಚೆಯಂತೆ ಬದುಕುತ್ತಿವೆ.
ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯ ವರೆಗೆ ಸುಮಾರು ಇಪ್ಪತ್ತು ಕಿಲೋಮಿಟರ್ ಸಂಚರಿಸುವ ನೀರುನಾಯಿಗಳು ನೀರಿನಲ್ಲಿ ಮೀನುಗಳನ್ನ ಬೇಟೆಯಾಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಅದಾದ ಬಳಿಕ ಮರಳು ಮತ್ತು ಕಲ್ಲು ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿ ಮತ್ತೆ ಸಂಜೆ ನಾಲ್ಕು ಗಂಟೆಯ ನಂತರ ತಮ್ಮ ಬೇಟೆಯನ್ನ ಪ್ರಾರಂಭಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಹೀಗಿದ್ದರೂ ಮನುಷ್ಯನ ಕಣ್ಣಿಗೆ ಈ ಜಲಚರ ಪ್ರಾಣಿ ಕಾಣಸಿಗುವುದು ತುಂಬಾ ಅಪರೂಪ.
ಇನ್ನು ಹೊಸಪೇಟೆ ಬಳಿಯ ತುಂಗಭದ್ರ ಜಲಾಶಯದಿಂದ ಕಂಪ್ಲಿಯ ವರೆಗೆ ಇರುವ ಸುಮಾರು ಇಪ್ಪತ್ತೈದು ಕಿಲೋಮಿಟರ್ ಪ್ರದೇಶದಲ್ಲಿ ಹರಿಯುವ ಈ ನದಿ, ವಿಶಿಷ್ಟ ಜೀವ ಸಂಕುಲಗಳ ತಾಣವಾಗಿದೆ. ನೀರುನಾಯಿ ಮತ್ತು ಮೊಸಳೆಗಳು ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಅಲ್ಲದೆ ಹಲವು ಜಾತಿಯ ಪಕ್ಷಿ ಪ್ರಬೇದಗಳು ಇಲ್ಲಿಗೆ ಬಂದು ಸಂತಾನ ಅಭಿವ್ರದ್ದಿ ಪಡಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಅದರ ಜೊತೆಗೆ ವಿಶಿಷ್ಟ ಜಾತಿಯ ಆಮೆ, ಮೀನು, ಹಾವು ಮತ್ತು ಚಿರತೆ, ಕರಡಿಗಳ ಆವಾಸ ತಾಣವಾಗಿರುವ ಈ ಪ್ರದೇಶವನ್ನ ನೀರುನಾಯಿ ಸಂರಕ್ಷಿತ ಪ್ರದೇಶ ಎಂದೇ ಇಲ್ಲಿನ ಅರಣ್ಯ ಇಲಾಖೆ ಘೋಷಣೆ ಕೂಡ ಮಾಡಿದೆ. ಅದಕ್ಕೆ ಕಾರಣ ತುಂಗಭದ್ರ ನದಿಯಲ್ಲಿ ಕಾಣಸಿಗುವ ಈ ಪ್ರಾಣಿ ಬೇರೆಡೆ ಕಾಣಸಿಗುವುದಿಲ್ಲ.
ಹೇಗೂ ಸಿಕ್ಕ ಈ ಎರಡು ತಿಂಗಳ ಕಡಿಮೆ ಅವಧಿಯಲ್ಲಿ ಸ್ವಚ್ಚಂಧವಾಗಿ ಬದುಕುತ್ತಿದ್ದ ಪ್ರಾಣಿ ಸಂಕುಲಕ್ಕೆ ಮತ್ತದೇ ಸಂಕಟ ಎದುರಾಗಿದೆ. ಪ್ರಧಾನಿ ಮೋದಿಯವರು ಕೊರೊನಾ ಜೊತೆಗೆ ಬದುಕೊಣ ಎಂದು ಲಾಕ್‌ಡೌನ್ ತೆರವುಗೊಳಿಸಿದ್ದಾರೆ. ಆದರೆ, ಈ ಜೀವಿಗಳು ಮನುಷ್ಯನೊಂದಿಗೆ ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿವೆ.

