ಫ್ಯಾಕ್ಟ್ಚೆಕ್ : BBC ಕಚೇರಿ ಮೇಲೆ ನಡದೆ ಐಟಿ ದಾಳಿಯನ್ನು ಖಂಡಿಸಿ ‘Resign Modi’ ಎಂಬ ಹೋರಾಟ ನಡೆದಿದ್ದು ನಿಜವೇ?
ತೆರಿಗೆ ವಂಚನೆ ಮಾಡಿದೆ ಎನ್ನುವ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ BBC ಕಚೇರಿ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿತ್ತು. ಈ ಐಟಿ ದಾಳಿಯನ್ನು ಖಂಡಿಸಿ ‘Resign Modi’ ಎಂಬ ಬ್ಯಾನರ್ ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪ್ರತಿಭಟನೆ ನಡೆಸಲಾಗಿದೆ ಎಂಬ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
Slogans raised in London,
Against incomtax raid on BBC office #BBCRaid #ResignModi #ModiHaiTohMumkinHai pic.twitter.com/uK6N9aIGaJ— Pyata Santosh Kotari (@PSKBRS__) February 16, 2023
2002ರ ಗುಜರಾತ್ ಗಲಭೆ ಮತ್ತು ಆಗ ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರದ ಕುರಿತ ಸಾಕ್ಷ್ಯಚಿತ್ರವನ್ನು BBC ಇತ್ತೀಚೆಗೆ ಪ್ರಸಾರ ಮಾಡಿತ್ತು. ಅದಾಗಿ ಕೆಲವೇ ವಾರಗಳಲ್ಲಿ ಐ.ಟಿ ಕಾರ್ಯಾಚರಣೆ ನಡೆದಿದೆ. ಹಾಗಿದ್ದರೆ ಈ ಘಟನೆಯನ್ನು ಖಂಡಿಸಿ ಪ್ರತಿಭಟನೆಗಳು ನಡೆದಿರುವುದು ನಿಜವೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್:
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿ ಹಂಚಿಕೊಳ್ಳಲಾಗಿರುವ ‘ಮೋದಿ ರಾಜೀನಾಮೆ ನೀಡಿ’ (Resign Modi) ಎಂಬ ಪಠ್ಯದೊಂದಿಗೆ ಬ್ಯಾನರ್ ಹಿಡಿದು ಸೇತುವೆಯ ಮೇಲೆ ನಿಂತು ಘೋಷಣೆಗಳನ್ನು ಕೂಗುವ ವೀಡಿಯೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಈಗ ವೈರಲ್ ಆಗಿರುವ ವೀಡಿಯೊದ ವಿಸ್ತೃತ ಆವೃತ್ತಿಯನ್ನು ಈ ಹಿಂದೆ 15 ಆಗಸ್ಟ್ 2021 ರಂದು ಯೂಟ್ಯೂಬ್ನಲ್ಲಿ ‘ದಕ್ಷಿಣ ಏಷ್ಯಾ ಸಾಲಿಡಾರಿಟಿ ಗ್ರೂಪ್’ ಮೂಲಕ ಪೋಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವೀಡಿಯೊ ವಿವರಣೆಯ ಪ್ರಕಾರ, ಡಯಾಸ್ಪೊರಾ ಸದಸ್ಯರು ಮತ್ತು ಭಾರತದ ಬೆಂಬಲಿಗರು ಲಂಡನ್ನ ವೆಸ್ಟ್ಮಿನಿಸ್ಟರ್ ಸೇತುವೆಯ ಮೇಲೆ 15 ಆಗಸ್ಟ್ 2021 ರಂದು ‘Resign Modi’ ಎಂಬ ದೊಡ್ಡ ಬ್ಯಾನರ್ ಅನ್ನು ಪ್ರದರ್ಶಿಸಿದರು. ಮಾನವ ಹಕ್ಕುಗಳ ಉಲ್ಲಂಘನೆ, ಕೋಮುವಾದ ಮತ್ತು ಸ್ವೀಕಾರಾರ್ಹವಲ್ಲದ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕಾಗಿ ಭಾರತದ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟಿಸಿದ್ದರು. ಇದಕ್ಕೂ ಮೊದಲು, ಅವರು ಭಾರತೀಯ ಹೈಕಮಿಷನರ್ ಕಚೇರಿ ಹೊರಗೆ ಮೇಣದಬತ್ತಿಯನ್ನ ಹಚ್ಚಿ ಪ್ರತಿಭಟನೆ ನಡೆಸಿದ್ದರು.
ಆ ಸಮಯದಲ್ಲಿ, ಹಲವಾರು ಸುದ್ದಿವಾಹಿನಿಗಳು ಈ ಘಟನೆಯನ್ನು ಪ್ರಸಾರ ಮಾಡಿದ್ದು ಅವುಗಳನ್ನು ಇಲ್ಲಿ, ಮತ್ತು ಇಲ್ಲಿ ಕಾಣಬಹುದು. ಆದಾಗ್ಯೂ, ಆದಾಯ ತೆರಿಗೆ ಇಲಾಖೆಯು ಫೆಬ್ರವರಿ 2023 ರಲ್ಲಿ ಭಾರತದಲ್ಲಿನ BBC ಯ ಕಚೇರಿಗಳ ಮೇಲೆ ಶೋಧ ಕಾರ್ಯ ನಡೆಸಿರುವ ವಿಚಾರಕ್ಕೂ ವೈರಲ್ ವಿಡಿಯೋಗೂ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 15 ಆಗಸ್ಟ್ 2021 ರಂದು, ಸಾಮ್ರಾಜ್ಯಶಾಹಿ ಮತ್ತು ವರ್ಣಭೇದ ನೀತಿಯನ್ನು ವಿರೋಧಿಸುವ ಯುಕೆ ಮೂಲದ ಸಂಘಟನೆಯಾದ ‘ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್’ ಸದಸ್ಯರು, ಮಾನವ ಹಕ್ಕುಗಳ ಉಲ್ಲಂಘನೆ, ಕೋಮುವಾದ ಮತ್ತು ಸ್ವೀಕಾರಾರ್ಹವಲ್ಲದ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವ ಕಾರಣಕ್ಕಾಗಿ ಭಾರತದ ಪ್ರಧಾನಿ ಮೋದಿ ವಿರುದ್ಧ ಪ್ರತಿಭಟಿಸಿದ್ದರು. ಲಂಡನ್ನ ವೆಸ್ಟ್ಮಿನಿಸ್ಟರ್ ಸೇತುವೆ ಮೇಲೆ ನಿಂತು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ‘Resign Modi’ ಎಂಬ ಬ್ಯಾನರ್ ಪ್ರದರ್ಶಿಸಿದರು.
ಆದರೆ ಭಾರತದಲ್ಲಿನ BBC ಕಚೇರಿಗಳ ಮೇಲೆ IT ದಾಳಿಯನ್ನು ಖಂಡಿಸಿ ಮೋದಿ ವಿರುದ್ದ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಕಾಂತಾರ ರಿಷಬ್ ಶೆಟ್ಟಿಗೆ ಸಿಕ್ಕಿದ್ದು ಅಸಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯಲ್ಲ, ಮತ್ತೆ?

