5ಜಿ ನೆಟ್‌ವರ್ಕ್‌ ಬೇಡ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ನಟಿ ಜೂಹಿ ಚಾವ್ಲಾಗೆ 20 ಲಕ್ಷ ದಂಡ!

5ಜಿ ನೆಟ್‌ವರ್ಕ್‌ನ್ನು ದೇಶದಲ್ಲಿ ಜಾರಿಗೊಳಿಸಬಾರದು. ಅದು ಪರಿಸರಕ್ಕೆ ಹಾನಿಕಾರರವಾಗಿದೆ. ಹೀಗಾಗಿ ಅದನ್ನು ದೇಶದಲ್ಲಿ ಜಾರಿಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.

ಅಲ್ಲದೇ ನ್ಯಾಯಾಲಯ ಜೂಹಿ ಚಾವ್ಲಾ ಅವರಿಗೆ ₹20 ಲಕ್ಷ ದಂಡ ವಿಧಿಸಿ ಆದೇಶಿಸಿದೆ.

‘ಈ ಅರ್ಜಿ ದೋಷಯುಕ್ತವಾಗಿದೆ ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ’ ಎಂದು ನ್ಯಾಯಮೂರ್ತಿ ಜೆಆರ್‌ ಮಿಧಾ ಅವರು ಹೇಳಿದ್ದಾರೆ.

‘ಈ ಅರ್ಜಿಯ ವಿಚಾರಣೆ ನಡೆಯುವ ವೇಳೆ ವಿಚಾರಣೆಯ ವಿಡಿಯೋ ಕಾನ್ಪರೆನ್ಸ್‌ನ ಲಿಂಕ್‌ನ್ನು ಜೂಹಿ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಹಿಂದಿ ಹಾಡುಗಳನ್ನು ಕೇಳಿಸಲಾಗಿದೆ. ಇದನ್ನೆಲ್ಲ ನೋಡಿದರೆ ಪ್ರಚಾರಕ್ಕೆ’ ಈ ಕೆಲಸ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಮಿಧಾ ಹೇಳಿದ್ದಾರೆ.

‘ಅರ್ಜಿದಾರರು ತಮ್ಮ ಹಕ್ಕುಗಳಿಗಾಗಿ ಮೊದಲು ಸರ್ಕಾರವನ್ನು ಸಂಪರ್ಕಿಸಬೇಕಿತ್ತು ಮತ್ತು ಒಂದು ವೇಳೆ ಸರ್ಕಾರ ನಿರಾಕರಿಸಿದರೆ ಮಾತ್ರ ಅವರು ನ್ಯಾಯಾಲಯಕ್ಕೆ ಬರಬೇಕಿತ್ತು’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೂಹಿ ಚಾವ್ಲಾ, ‘ದೆಹಲಿ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ತಡೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ.

ಜೂಹಿ ಚಾವ್ಲಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಮತ್ತು ಟಿನಾ ವಚಾನಿ ಸಲ್ಲಿಸಿದ್ದ ಅರ್ಜಿಯಲ್ಲಿ, 5 ಜಿ ತಂತ್ರಜ್ಞಾನವನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ಯೋಜನೆ ರೂಪಿಸಿದ್ದರೆ, ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಈ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಫ್‌ ವಿಕಿರಣದ ಮಟ್ಟವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights