ಫ್ಯಾಕ್ಟ್‌ಚೆಕ್ : ಮತ್ತೊಂದು ಸುಳ್ಳು ಹೇಳಿದ ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್

ಬೆಳಗಾವಿಯ ಸುವರ್ಣ ಸೌಧದ ಸಂಭಾಗಣದಲ್ಲಿರುವ ಸಾವರ್ಕರ್ ಫೋಟೊ ತೆಗೆಯಬೇಕೆಂದು ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ದಿ & ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಉಲ್ಲೇಖಿಸಿ,  ಏಷಿಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್ ನ ಆಂಕರ್ ಅಜಿತ್ ಹನುಮಕ್ಕನವರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಸಾವರ್ಕರ್ ಫೋಟೊ ತೆಗೆಯಲು ಚಿಂತನೆ ನಡೆಸುವ ನಿಮಗೆ ಭಾರತ ಸ್ವಾತಂತ್ರದ ಇತಿಹಾಸ ಅರಿವಿಲ್ಲ, ಹಿಂದುತ್ವದ ಕಾರಣಕ್ಕೆ ಸಾವರ್ಕರ್ ಫೋಟೊ ತೆಗೆಯಬೇಕು ಎಂದು ಹೇಳುವ ನೀವು, ಟಿಪ್ಪುವಿನ ಮೇಲೇಕೆ ಇಷ್ಟೋಂದು ಪ್ರೀತಿ? ಎಂದು ಪ್ರಶ್ನಿಸಿದ್ದಾರೆ.

ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ ಎಂದು ಬರೆದುಕೊಂಡಿದ್ದ ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಸರ್ಕಾರ ಆಚರಿಸಿದ್ದು ಏಕೆ? ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆಯಲಾಗಿತ್ತು. ಟಿಪ್ಪುವಿನ ಪರಮ ಆರಾಧಕರು ಸಹ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ಸುವರ್ಣ ನ್ಯೂಸ್ ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದ್ದಾರೆ. ಟಿಪ್ಪುವಿನ ಖಡ್ಗದ ಮೇಲೆ ನಿಜವಾಗಿಯೂ ಹಾಗೆ ಬರೆದಿದೆಯೇ? ಅಜಿತ್ ಹನುಮಕ್ಕನವ ಹೇಳಿರುವ ಹೇಳಿಕೆಯಲ್ಲಿ ನಿಜವೆಷ್ಟು ಎಂದು  ಪರಿಶೀಲಿಸೋಣ.

(ಈ ವಿಡಿಯೋದ 8 ನಿಮಿಷ 19 ನೇ ಸೆಕೆಂಡ್‌ನಲ್ಲಿ ಈ ಕುರಿತು ಮಾತನಾಡಿದ್ದಾರೆ. ಇನ್ನು ಕೆಲವರು ಇದೇ ಪ್ರತಿಪಾದನೆ ಮಾಡಿದ್ದಾರೆ. ಅವುಗಳ ವಿವರ ಈ ಕೆಳಗಿದೆ)

ಫ್ಯಾಕ್ಟ್ ಚೆಕ್

ಏಷಿಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್ ನ ಆಂಕರ್ ಅಜಿತ್ ಹನುಮಕ್ಕನವರ್ ಪ್ರತಿಕ್ರಿಯೆಯನ್ನು ಪರಿಶೀಲಿಸಿದಾಗ, ವಾಸ್ತವಾಗಿ ಟಿಪ್ಪು ಸುಲ್ತಾನ್ ಖಡ್ಗದ ಹಿಡಿಕೆಯಲ್ಲಿ ಅರೇಬಿಕ್ ಲಿಪಿಯಲ್ಲಿ “ಯಾ ನಸೀರ್ ಯಾ ಫತಾಹ್, ಯಾ ನಸೀರ್ ಯಾ ಮುಈನ್ ಯಾ ಝಹೀರುಲ್ಲಾಹ್… ಯಾ ಅಲ್ಲಾಹ್..‌ ಯಾ ಅಲ್ಲಾಹ್… ಎಂದು ಬರೆಯಲಾಗಿದೆ. ಇದರ ಅರ್ಥ ‘ಓ ಸಹಾಯ ನೀಡುವವನೇ, ಓ ಯಶಸ್ಸು ನೀಡುವವನೇ, ಓ ಬೆಳಕು ತೋರುವವನೇ, ಓ ಅಲ್ಲಾಹ್.. ಓ ಅಲ್ಲಾಹ್.. ಎಂಬುದಾಗಿದೆ.

ಟಿಪ್ಪುವಿನ ಖಡ್ಗದ ಮೇಲಿರುವ ಆ ಅರಬಿಕ್ ಪದಗಳು ಅಲ್ಲಾಹನ ತೊಂಬತ್ತೊಂಬತ್ತು ನಾಮ ವಿಶೇಷಣಗಳಲ್ಲಿ ಕೆಲವಾಗಿದೆ.
ಅವುಗಳ ಅರ್ಥ ಈ ರೀತಿಯಾಗಿದೆ.
ಯಾ ನಸೀರ್ = ಓ ಸಹಾಯ ನೀಡುವವನೇ…
ಯಾ ಫತಾಹ್ = ಓ ಯಶಸ್ಸು ನೀಡುವವನೇ…
ಯಾ ಝಹೀರುಲ್ಲಾಹ್ = ಓ ಬೆಳಕು ತೋರುವವನೇ…
ಓ ಅಲ್ಲಾಹ್…ಓ ಅಲ್ಲಾಹ್..

ಅದರಲ್ಲಿ ಎಲ್ಲೂ ಕಾಫಿರ್ ಎಂಬ ಅರಬಿಕ್‌ ಪದ ಬಳಸಲಾಗಿಲ್ಲ. ಮತ್ತು ಮುಸ್ಲಿಮರ ವಿಶ್ವಾಸದ ಪ್ರಕಾರ ತಂದೆ- ತಾಯಿಯನ್ನು ಯಾರೂ ದೈವತ್ವಕ್ಕೇರಿಸುವುದಿಲ್ಲ. ಹೈದರ್ ನನಗೆ ಸಹಾಯ ನೀಡುವವನು ಎಂದು ಬರೆಯಲಾಗಿದೆ ಎಂದೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವಾಗಿ ಅದರಲ್ಲೆಲ್ಲೂ ಹೈದರನ ಹೆಸರೇ ಇಲ್ಲ ಎಂದು ಯುವ ಬರಹಗಾರ ಇಸ್ಮತ್ ಪಜೀರ್ ಮಾಹಿತಿ ನೀಡಿದ್ದಾರೆ.

ಟಿಪ್ಪು ಸುಲ್ತಾನರ ಇನ್ನೂ ಕೆಲವು ಖಡ್ಗಗಳನ್ನು ವೀಕ್ಷಿಸಿ ಅವುಗಳಲ್ಲಿ ಬರೆದಿಡಲ್ಪಟ್ಟ ಕೆಲವು ಅರಬಿಕ್ ವಾಕ್ಯಗಳನ್ನು ಓದಿದ ಯೂ ಟ್ಯೂಬರ್ ಒಬ್ಬರು ಅವುಗಳ ಕುರಿತಂತೆ ಯೂ ಟ್ಯೂಬ್‌‌ನಲ್ಲಿ ಉರ್ದು ಭಾಷೆಯ ವೀಡಿಯೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಎರಡು ಬೇರೆ ಬೇರೆ ಖಡ್ಗಗಳಲ್ಲಿ ಖುರ್‌ಆನಿನ ವಾಕ್ಯಗಳನ್ನು ಬರೆದಿಡಲಾಗಿದೆ. ಅದರಲ್ಲಿ “ನಿಶ್ಚಯವಾಗಿಯೂ ಅಲ್ಲಾಹನು ಸರ್ವಶಕ್ತನು, ಅಲ್ಲಾಹನ ಸಹಾಯದಿಂದ ಯಶಸ್ಸು ಸನಿಹದಲ್ಲೇ ಇದೆ.. ಅಲ್ಲಾಹನ ಮೇಲೆ ಭರವಸೆ ಇಡುವವನಿಗೆ ಅಲ್ಲಾಹನೇ ಸಾಕು…” ಎಂಬ ಕುರಾನಿನ ವಾಕ್ಯಗಳನ್ನು ಬರೆಯಲಾಗಿದೆ. ಇದನ್ನು ಅರೇಬಿಕ್ ಮತ್ತು ಉರ್ದು ಓದಲು ಬಲ್ಲ ಯಾರು ಬೇಕಾದರೂ ಸುಲಭವಾಗಿ ಓದಬಹುದು. ಹಾಗಾಗಿ ಅಜಿತ್ ಹನುಮಕ್ಕರ್ ಹೇಳಿದ್ದು ಸುಳ್ಳು.

ಕೃಪೆ: ಕನ್ನಡ ಫ್ಯಾಕ್ಟ್‌ಚೆಕ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : BJP ಪಕ್ಷದ ಸಭೆಯ ವೇದಿಕೆಯಲ್ಲಿ ಪ್ರೊ. ಕೆ.ಎಸ್‌. ಭಗವಾನ್ ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights