ನಡುರಸ್ತೆಯಲ್ಲಿ ಬಸ್‌ನಿಂದ ಜನರನ್ನಿಳಿಸಿದ್ದ ಜಿಲ್ಲಾಧಿಕಾರಿ; ಸ್ವತಃ‌ ನಿಯಮ ಉಲ್ಲಂಘನೆ; ಅವರು ಹೇಳಿದ್ದೇನು?

ಕಳೆದ ಎರಡು ಮೂರು ದಿನಗಳ ಹಿಂದೆ ಉಡುಪಿಯಲ್ಲಿ ಖಾಸಗೀ ಬಸ್‌ವೊಂದು ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿದೆ ಎಂಬ ಕಾರಣಕ್ಕೆ ಬಸ್‌ಅನ್ನು ತಡೆದು ನಡುರಸ್ತೆಯಲ್ಲಿಯೇ ಪ್ರಯಾಣಿಕರನ್ನು ಕೆಳಗಿಸಿದ್ದ ಉಡುಪಿ ಜಿಲ್ಲಾಧಿಕಾರಿ, ಇದೀಗ ತಾವೇ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ಭಾರೀ ಟೀಕೆಗೆ ಒಳಗಾಗಿದ್ದಾರೆ.

ಹೆಚ್ಚು ಜನರನ್ನು ತುಂಬಿಕೊಂಡು ಹೋಗುವುದು ಕೋವಿಡ್‌ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಬಸ್‌ ಮಾಲೀಕರಿಗೆ ದಂಡವಿಧಿಸಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು, ಈಗ ರಾಜ್ಯದ್ಯಂತ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳು, ಸೆಮಿ ಲಾಕ್‌ಡೌನ್‌ ಜಾರಿಯಾಗಿರುವ ಸಂದರ್ಭದಲ್ಲಿ ಮಾಸ್ಕ್‌ ಧರಿಸದೇ ಮದುವೆಯಲ್ಲಿ ಭಾಹಿಯಾಗಿದ್ದಾರೆ. ಇದು ಉಡುಪಿ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಶುಕ್ರವಾರ ರಾತ್ರಿ ಉಡುಪಿಯ ಅಮೃತ್‌ ಗಾರ್ಡನ್‌‌ನಲ್ಲಿ ಹೆಚ್ಚುವರಿ ಎಸ್‌.ಪಿ. ಕುಮಾರಚಂದ್ರ ಅವರ ಮಗಳ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ವಿಡಿಯೊ ಹಾಗೂ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳೆದ್ದಿತ್ತು. ಮಾಸ್ಕ್‌, ಕೊರೊನಾ ಮಾರ್ಗಸೂಚಿ, ನೈಟ್‌ಕರ್ಫ್ಯೂ ಎಲ್ಲವೂ ಸಾಮಾನ್ಯರಿಗೆ ಮಾತ್ರವೆ, ಅದು ಜಿಲ್ಲಾಧಿಕಾರಿಗೆ ಅನ್ವಯಿಸುವುದಿಲ್ಲವೆ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದ ಪತ್ರಕರ್ತ ಶಶಿಧರ್‌ ಹೆಮ್ಮಾಡಿ, “ತಡರಾತ್ರಿ ಮನೆಗೆ ತಲುಪುತ್ತಿದ್ದ ಬಡಮನೆಗಳ ಹೆಣ್ಣು ಮಕ್ಕಳನ್ನು ಅವರು ಬಸ್‌ನಲ್ಲಿ ನಿಂತು ಪಯಣಿಸುತ್ತಾ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬೈದು ಬಸ್ಸಿನಿಂದ ಇಳಿಸಿದ್ದರು. ಇಂದು ನಾಳೆ, ನಾಡಿದ್ದು ನಡೆಯಬೇಕಾಗಿದ್ದ ನೂರಾರು ಮೆಹಂದಿ, ಮದುವೆ ಮನೆಗಳ ಸಂಭ್ರಮಕ್ಕೆ ಕಲ್ಲು ಹಾಕಿದ್ದಾರೆ. ಮದುವೆ ಮನೆಗೆ ಬರುವ ಅತಿಥಿಗಳ ಆಧಾರ್ ಕಾರ್ಡ್ ಅನ್ನು ಕೇಳುತ್ತಾರೆ.

ಆದರೆ ಶುಕ್ರವಾರ ಸಂಜೆ ನಡೆದ ಪೊಲೀಸ್ ಅಧಿಕಾರಿಯೋರ್ವರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರವೂ ಇಲ್ಲದೆ, ಮಾಸ್ಕ್ ಕೂಡ ಹಾಕದೆ ನಗುತ್ತಾ ನಿಂತಿದ್ದಾರೆ. ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೇ ಜಿಲ್ಲಾಧಿಕಾರಿಗಳೇ? ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರೇ ನಿಮಗೆ ನಾಚಿಕೆ ಆಗಬೇಕು. ಅಂದ ಹಾಗೆ ಈ ಮದುವೆಗೆ ಹೋಗುವ ಅತಿಥಿಗಳ ಆಧಾರ್ ಕಾರ್ಡ್ ನೀಡಿದ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿಗಳ ಹೆಸರು ಇತ್ತೆ? ಉತ್ತರಿಸಲೇಬೇಕು ಡಿಸಿ ಸಾಹೇಬರು” ಎಂದು ಹೇಳಿದ್ದರು.

ಸರ್ಕಾರದ ಕೊರೊನಾ ಮಾರ್ಗಸೂಚಿಯಂತೆ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗಷ್ಟೇ ಅವಕಾಶ. ಆದರೆ ಈ ಕಾರ್ಯಕ್ರಮದಲ್ಲಿ ಅದು ಪಾಲನೆ ಆಗಿದೆಯೆ ಎಂದು ಕೂಡಾ ಶಶಿಧರ್‌ ಹೆಮ್ಮಾಡಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಮಹೆಂದಿ ಕಾರ್ಯಕ್ರಮದ ವಿಡಿಯೊವನ್ನು ಫೇಸ್‌ಬುಕ್‌ಗೆ ಅಪ್ಲೋಡ್ ಮಾಡಿದ್ದಾರೆ.

ಅದರಲ್ಲಿ, “ಇದು ನಿನ್ನೆ ಉಡುಪಿ ಜಿಲ್ಲಾಧಿಕಾರಿಗಳು, ದೈಹಿಕ ಅಂತರ ಕಾಪಾಡದೇ ಮಾಸ್ಕ್ ಧರಿಸದೇ ಹಾಜರಾದ ASP ಅವರ ಮಗಳ ಮದುವೆಯ ಒಂದು ದೃಶ್ಯ. ಈ ಒಂದು ವಿಡಿಯೊದಲ್ಲೇ ನಾನು ಲೆಕ್ಕ ಹಾಕಿದ ಹಾಗೆ 24 ಜನರಿದ್ದಾರೆ. ಮಾಸ್ಕ್ ಧರಿಸಿದ್ದು ಒಬ್ಬ ಪುಣ್ಯಾತ್ಮ ಮಾತ್ರ. ಮತ್ತೆ ಯಾರಿಗೂ ಮಾಸ್ಕ್ ಇಲ್ಲ. ಸಾಮಾಜಿಕ ಅಂತರವಿಲ್ಲ. ಬಾಗಿಲಿಂದ ಒಳ ಬರುವ ಈ ವಿಡಿಯೋದಲ್ಲೇ 24 ಜನರಿದ್ದಾರೆ ಎಂದರೆ ಇನ್ನು ಒಳಗೆ ಎಷ್ಟು ಜನರಿರಬಹುದು ಎಂದು ಊಹಿಸಿ” ಎಂದು ಬರೆದಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌

“ನಮಗೆ ASP ಮಗಳ ಮದುವೆಯನ್ನು ಸಂಭ್ರಮದಿಂದ ಮಾಡಿದ್ದಾರೆ ಎಂಬ ಆಕ್ಷೇಪವಿಲ್ಲ. ಅವರ ಮಗಳ ಮದುವೆಯ ಬಗ್ಗೆ ಸಾವಿರಾರು ಕನಸು ಕಂಡಿರುತ್ತಾರೆ. ಅವರ ಮಗಳ ಮದುವೆ ಚೆನ್ನಾಗಿಯೇ ನಡೆಯಲಿ. ಆದರೆ ಕಾನೂನು ಮಾಡುವ, ಪಾಲಿಸದಿದ್ದರೆ ಶಿಕ್ಷೆ ಕೊಡುವ ಇವರುಗಳು ಕನಿಷ್ಟ ಪಕ್ಷ ದೈಹಿಕ ಅಂತರ, ಮಾಸ್ಕ್ ನಿಯಮ ಪಾಲಿಸಲಿ. ಜೊತೆಗೆ ಜನಸಾಮಾನ್ಯರ ಮನೆಯ ಮದುವೆಗಳನ್ನೂ ಒಂದಷ್ಟು ನಿಯಮಗಳೊಂದಿಗೆ, ಶಿಸ್ತುಬದ್ದವಾಗಿ ಸಂಭ್ರಮದಿಂದ ನಡೆಯಲು ಬಿಡಲಿ. ಪಾಸು, ಆಧಾರ್ ಕಾರ್ಡು, ಮಣ್ಣು ಮಸಿ ಎಂಬ ತುಘಲಕ್ ದರ್ಬಾರ್ ಅನ್ನು ಇಲಾಖೆಗಳು ನಿಲ್ಲಿಸಲಿ. ನಮಗೂ ನಮ್ಮನೆ ಮಕ್ಕಳ ಬಗ್ಗೆ ಕನಸುಗಳಿರುತ್ತವೆ ಸ್ವಾಮಿ. ತಿಂಗಳುಗಳಿಂದ ಸಿದ್ಧತೆ ನಡೆಸಿದ್ದೇವೆ. ಮದುವೆ ಮನೆ ಎಂದು ಸಂಭ್ರಮಪಟ್ಟಿದ್ದೇವೆ. ಖರ್ಚು ಮಾಡಿದ್ದೇವೆ. ನೆಮ್ಮದಿಯಿಂದ, ಖುಷಿಯಿಂದ ನಮ್ಮ ಸಮಾರಂಭಗಳು ನಡೆಯಲು ಬಿಡಿ. ಕೋವಿಡ್ ನಿಯಮ ಪಾಲಿಸುವ ಹೊಣೆ ನಿಮಗಿಂತ ಜಾಸ್ತಿ ನಮಗಿದೆ” ಎಂದು ಶಶಿಧರ್‌ ಹೆಮ್ಮಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಈ ಬಗ್ಗೆ ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಯ ನಡೆಯನ್ನು ಟೀಕಿಸಿದ್ದಾರೆ. ಈ ಘಟನೆಯ ಬಗ್ಗೆ ವಾತಾಭಾರತಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಜಿ. ಜಗದೀಶ್‌, “ಮದುವೆ ಕಾರ್ಯಕ್ರಮವು ಕೇವಲ ನಾಲ್ಕು ಕುಟುಂಬಗಳಿಗೆ ಸೀಮಿತಗೊಳಿಸಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಅವರ ಕುಟುಂಬದ ಆಪ್ತರಷ್ಟೇ ಸೇರಿದ್ದರು. ಅದು ಸಾರ್ವಜನಿಕ ಸ್ಥಳ ಅಲ್ಲ. ಆದುದರಿಂದ ಅಲ್ಲಿ ಮಾಸ್ಕ್ ಧರಿಸಬೇಕೆಂಬುದು ಕಡ್ಡಾಯ ಅಲ್ಲ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕಾಗಿರುವುದು ಸಾರ್ವಜನಿಕ ಸ್ಥಳದಲ್ಲಿ ಮಾತ್ರ. ಅಲ್ಲದೆ ಶುಕ್ರವಾರ ರಾತ್ರಿ 8.40 ಕ್ಕೆ ಆ ಕಾರ್ಯಕ್ರಮಕ್ಕೆ ಹೋಗಿ 8.50ಕ್ಕೆ ಕರ್ಫ್ಯೂಗಿಂತ ಮೊದಲೇ ಮನೆ ಸೇರಿದ್ದೇನೆ. ಮಧುಮಗಳ ಕೋರಿಕೆ ಮೇರೆಗೆ ಫೋಟೋಗಾಗಿ ಒಂದು ನಿಮಿಷ ಮಾತ್ರವೇ ಮಾಸ್ಕ್ ತೆಗೆದಿದ್ದೇನೆ’’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದು ಕರ್ಫ್ಯೂ ಮಾತ್ರವಲ್ಲ ಲಾಕ್‌ಡೌನ್‌; ವೀಕೆಂಡ್‌ನಲ್ಲಿ ಏನಿರತ್ತೆ-ಏನಿರಲ್ಲ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights