ಆಕ್ಸಿಜನ್ ಕೊರತೆ: ಪಂಜಾಬ್ ಆಸ್ಪತ್ರೆಯಲ್ಲಿ ಆರು ರೋಗಿಗಳು ಸಾವು!
ಪಂಜಾಬ್ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಆರು ರೋಗಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಐವರು ಕೊರೊನಾ ರೋಗಿಗಳು ಎಂದು ತಿಳಿದು ಬಂದಿದೆ.
ಅಮೃತಸರದ ನೀಲಕಂಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ಆರು ಜನರು ಗಂಭೀರ ರೋಗಿಗಳಾದ್ದರು. ಆರು ಜನರಲ್ಲಿ ಮೂವರು ಅಮೃತಸರದವರು, ಇಬ್ಬರು ಗುರುದಾಸ್ಪುರದವರು ಮತ್ತು ಒಬ್ಬರು ತರಣ್ ತಾರ್ನ್ಗೆ ಸೇರಿದವರಾಗಿದ್ದಾರೆ. ಅವರೆಲ್ಲರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಗುರುವಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಆಮ್ಲಜನಕದ ಕೊರತೆ ಇದೆ, ರೋಗಿಗಳ ಕುಟುಂಬಸ್ಥರೆ ಅದರ ವ್ಯವಸ್ಥೆ ಮಾಡಬೇಕು ಎಂದು ಎಂದು ಆಸ್ಪತ್ರೆಯ ಸಿಬ್ಬಂದಿ ನಿನ್ನೆ ರಾತ್ರಿ ತಿಳಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆಮ್ಲಜನಕ ಸಿಲಿಂಡರ್ಗಳ ಕೊರತೆಯ ಬಗ್ಗೆ ನಿನ್ನೆಯೆ ಅಮೃತಸರ ಜಿಲ್ಲಾಡಳಿತಕ್ಕೆ ತಿಳಿಸಿದ್ದು, ಆದರೆ ಯಾರೂ ತಮ್ಮ ಮಾತನ್ನು ಆಲಿಸಲಿಲ್ಲ ಎಂದು ಆಸ್ಪತ್ರೆಯು ಜಿಲ್ಲಾಡಳಿತವನ್ನು ದೂಷಿಸಿದೆ.
ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳನ್ನು ಭರ್ತಿ ಮಾಡುವುದನ್ನು ವಿಳಂಬ ಮಾಡದಂತೆ ಅವರು ಜಿಲ್ಲಾಡಳಿತವನ್ನು ಪದೇ ಪದೇ ಕೋರಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ ಆಮ್ಲಜನಕವನ್ನು ಪೂರೈಸುವ ಆದ್ಯತೆಯು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ, ಅದರ ನಂತರವೇ ಖಾಸಗಿ ಆಸ್ಪತ್ರೆಗಳ ಬೇಡಿಕೆ ಈಡೇರುತ್ತದೆ ಎಂದು ಅವರಿಗೆ ತಿಳಿಸಲಾಗಿದೆ ಎಂದು TNIE ವರದಿ ಮಾಡಿದೆ.
ನೀಲಕಂಠ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ದೇವಗನ್ ಮಾತನಾಡಿ, “ಆಮ್ಲಜನಕದ ಕೊರತೆಯ ಬಗ್ಗೆ ಹೇಳಿ ರೋಗಿಗಳ ಕುಟುಂಬಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನಾವು ವಿನಂತಿಸಿದ್ದೇವೆ ಆದರೆ ಕುಟುಂಬಗಳು ಒಪ್ಪಲಿಲ್ಲ. ಜಿಲ್ಲಾಡಳಿತವು ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯನ್ನು ಮಾಡುತ್ತಿದೆ, ಇದು ಖಾಸಗಿ ಆಸ್ಪತ್ರೆಗಳಲ್ಲಿನ ಕೊರತೆಗೆ ಕಾರಣವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Fact Check: ಆನ್ಲೈನ್ ಡೆತ್ ಸರ್ಟಿಫಿಕೇಟ್ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಇರುವುದು ಸುಳ್ಳು!