ದೆಹಲಿ: ಆಸ್ಪತ್ರೆಯ ಬಾಗಿಲಲ್ಲಿಯೇ ಸಾವನ್ನಪ್ಪುತ್ತಿದ್ದಾರೆ ಕೊರೊನಾ ಸೋಂಕಿತರು!

ದೇಶಾದ್ಯಂತ ಕೊರೊನಾ ಸೋಂಕು ಭೀಕರವಾಗಿ ವ್ಯಾಪಿಸುತ್ತಿದೆ. ಅಲ್ಲದೆ, ಹಲವು ರಾಜ್ಯಗಳು ಆಕ್ಸಿಜನ್‌ ಕೊರತೆಯನ್ನು ಎದುರಿಸುತ್ತಿದ್ದು, ಆಕ್ಸಿಜನ್‌ಗಾಗಿ ಪರದಾಡುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಆಕ್ಸಿಜನ್‌ ಸಿಗದ ಸೋಂಕಿಗೆ ಒಳಗಾದಸಾಕಷ್ಟ ಮಂದಿ ಸಾವನ್ನಪ್ಪುತ್ತಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಆಸ್ಪತ್ರೆಗಳ ಬಾಗಿಲಿನಲ್ಲಿಯೇ ರೋಗಿಗಳು ಮರಣಹೊಂದಿರುವ ದೃಶ್ಯಗಳು ಮನಕಲಕುತ್ತಿವೆ.

ಶುಕ್ರವಾರ ದೆಹಲಿಯ ಗಂಗಾರಾಮ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದೊರೆಯದೇ ಸುಮಾರು 25ಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಇದೀಗ, ಅಂತದ್ದೇ ಪರಿಸ್ಥಿತಿಯನ್ನು ಗುರು ತೇಜ್ ಬಹದ್ದೂರ್ ಆಸ್ಪತ್ರೆಯೂ ಎದುರಿಸುತ್ತಿದೆ.

ಕೊರೊನಾ ಸೋಂಕಿಗೆ ಒಳಗಾಗಿ ಶುಕ್ರವಾರ ಸಂಜೆಗೆ ಬಂದ ಶ್ಯಾಮ್ ನಾರಾಯಣ್ ಎಂಬುವರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಆಸ್ಪತ್ರೆಯ ಮುಂದೆ ಟ್ರಾಲಿಯಲ್ಲೇ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗ್ಗೆ 6 ಗಂಟೆಗೆ ನನ್ನ ಸಹೋದರನನ್ನು ಆಸ್ಪತ್ರೆಗೆ ಕರೆತಂದಿದ್ದೆವು. ಆದರೆ, ಮನೆಯಲ್ಲೇ ಸುಧಾರಿಸಿಕೊಳ್ಳಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರಿಂದಾಗಿ ವಾಪಸ್ ಕರೆದುಕೊಂಡು ಹೋದೆವು. ಇದಾದ ಹತ್ತು ಗಂಟೆಗಳ ನಂತರ, ಅವರ ಸ್ಥಿತಿ ತೀವ್ರ ಹದಗೆಟ್ಟಿತ್ತು. ಹಾಗಾಗಿ, ಮತ್ತೆ ಆಸ್ಪತ್ರೆಗೆ ಕರೆತಂದೆವು. ಅಷ್ಟೊತ್ತಿಗೆ ಕೈಮೀರಿತ್ತು. ಅಡ್ಮಿಶನ್‌ಗೂ ಮುನ್ನವೇ ನಾರಾಯಣ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಘೋಷಿಸಿದರು’ ಎಂದು ನಾರಾಯಣ್‌ ಅವರ ಸಹೋದರ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಶ್ಯಾಮ್‌ ನಾರಾಯಣ್‌ ಮಾತ್ರವಲ್ಲದೆ, ಇನ್ನೂ ಹಲವರು ಇದೇ ರೀತಿಯಲ್ಲಿ ಬೆಡ್‌ ಸಿಗದೇ, ಆಕ್ಸಿಜನ್‌ ಸಿಗದೆ ಆಸ್ಪತ್ರೆಗಳ ಬಾಗಿಲಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಸೋಂಕಿನ ಹೆಚ್ಚಳದಿಂದಾಗ ದೆಹಲಿಯ ಆಸ್ಪತ್ರೆಗಳು ತತ್ತರಿಸಿ ಹೋಗಿವೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಿಂದಾಗಿ, ಎಲ್ಲಾ ಆಸ್ಪತ್ರೆಗಳಿಗೆ ಹೆಚ್ಚಿನ ಹೊರೆಯಾಗಿದೆ ಎಂದು ದೆಹಲಿ ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.

‘ಜಿಟಿಬಿ ಆಸ್ಪತ್ರೆಯಲ್ಲಿ ಹಾಸಿಗೆಗಳು ಲಭ್ಯವಿಲ್ಲದಿದ್ದರೂ ರೋಗಿಗಳು ಆಂಬುಲೆನ್ಸ್ ಮೂಲಕ ಆಗಮಿಸುತ್ತಿದ್ದಾರೆ. ಇದರ ಹೊರತಾಗಿಯೂ, ಎಲ್ಲಾ ರೋಗಿಗಳಿಗೆ ಬೇರೆ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲು ಸರ್ಕಾರ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ‘ ಎಂದು ದೆಹಲಿ ಸರ್ಕಾರದ ವಕ್ತಾರ ತುಷಾರ್ ಮೌರ್ಯ ಹೇಳಿದ್ದಾರೆ.

ಆಕ್ಸಿಜನ್‌ ಕೊರತೆ ಮತ್ತು ಕೇಂದ್ರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಮಾತನಾಡಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಬಿಜೆಪಿ ಆಡಳಿತವಿರುವ ರಾಜ್ಯಗಳು ದೆಹಲಿಗೆ ಬರಬೇಕಾದ ಆಕ್ಸಿಜನ್‌ ಟ್ಯಾಂಕರ್‌ಗಳನ್ನು ತಡೆಯುತ್ತಿವೆ. ಇದರಿಂದಾಗಿ ದೆಹಲಿಗೆ ಆಕ್ಸಿಜನ್‌ ಪೂರೈಕೆಯಾಗದೇ ರೋಗಿಗಳು ಸಾವನ್ನಪ್ಪುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯ ಸರ್ಕಾರಿ ಆಸ್ಪತ್ರೆಗಳ 400 ಕೋವಿಡ್ ಐಸಿಯು ಹಾಸಿಗೆಗಳು ಭರ್ತಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ದೇಶದಲ್ಲಿ ಒಂದೇ ದಿನ ವಿಶ್ವದ ಯಾವುದೇ ದೇಶದಲ್ಲಿ ದಾಖಲಾಗದಷ್ಟು 3,32,730 ಹೊಸ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Fact Check: ಆನ್‌ಲೈನ್ ಡೆತ್ ಸರ್ಟಿಫಿಕೇಟ್‌ನಲ್ಲಿ ಪ್ರಧಾನಿ ಮೋದಿಯವರ ಫೋಟೋ ಇರುವುದು ಸುಳ್ಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights