FACT CHECK | ಸುಧೀರ್ ಕುಮಾರ್ ಮುರೋಳಿರವರ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಹಂಚಿಕೊಂಡ BJP

ಕಾಂಗ್ರೆಸ್‌ ನಾಯಕ ಸುಧೀರ್ ಕುಮಾರ್ ಮುರೋಳಿಯವರು ಕಾರ್ಕಾಳದ ಕಾಂಗ್ರೆಸ್ ಸಮಾವೇಶದಲ್ಲಿ ಹೇಳಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಈಗ, “ನಾವು ಕಾರ್ಕಳದ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿರುವಂತಹ ನಾವು ನಿಮಗೆ ಹೇಳ್ತೇವೆ ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ. ಜಿಸಸ್, ಏಸು ಇವರೆಲ್ಲರೂ ಸೇರಿ ಆಶೀರ್ವಾದವನ್ನು ಕಾಂಗ್ರೆಸ್ಸಿಗರ ಮೇಲೆ ಮಾಡಿರುವಂತಹ ಚುನಾವಣೆ” ಎಂದು
ಸುಧೀರ್ ಕುಮಾರ್ ಮುರೋಳಿಯವರು ಹೇಳುತ್ತಿರುವುದನ್ನು ಕೇಳಬಹುದು. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸಿದಾಗ ಇದು ಎಡಿಟ್ ಮಾಡಲಾದ ವಿಡಿಯೋ ದೃಶ್ಯಗಳು ಎಂದು ತಿಳಿದುಬಂದಿದೆ.

ಮೂಲ ವಿಡಿಯೋದಲ್ಲಿ ಕಾಂಗ್ರೆಸ್‌ ನಾಯಕ ಸುಧೀರ್ ಕುಮಾರ್ ಮುರೋಳಿಯವರು ತಮ್ಮ ಭಾಷಣದಲ್ಲಿ ಹೇಳಿರುವುದು ಇಲ್ಲಿ ಕೇಳಬಹುದು.

“ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಮೆಸ್ಕಾಂಗೆ ಕೆಲವು ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರಂತೆ ನಾನು ಡೆಟಾ ಕಲೆಕ್ಟ್‌ ಮಾಡಿದಾಗ ತಿಳಿಯಿತು ಅವರ ಪಿಎ  ಅಣ್ಣನ ಹೆಂಡತಿಯನ್ನು ಇವರ ಬಿಸಿನೆಸ್‌ ಪಾರ್ಟ್‌ನರ್ ಅವರ ತಮ್ಮನ ಹೆಂಡತಿಯನ್ನು ಮೆಸ್ಕಾಂ ಉದ್ಯೋಗವನ್ನು ಕೊಡಿಸಿದ್ದಾರೆ. ನಾನು ಇವತ್ತು ಪ್ರಮಾಣಿಕವಾಗಿ ಕೇಳ್ತೇನೆ ಕೇವಲ ಎರಡು ಚೀಲ ಜುಬ್ಬಾ ಹಿಡಿದುಕೊಂಡು ಬಂದು ಗೋಪಾಲ್ ಬಂಡಾರ್ ಎಂಬ ಪ್ರಾಮಾಣಿಕರೆದುರಿಗೆ ಚುನಾವಣೆಗೆ ನಿಂತಂತಹ ನೀವು ಕಡೇ ಪಕ್ಷ ನಿಮಗಾಗಿ ಜೀವ ತೇಯ್ದಂತಹ ವಿಶ್ವ ಹಿಂದೂ ಪರಿಷತ್ತಿನ, ಬಜರಂಗ ದಳದ, ಬಿಜೆಪಿ ಯುವ ಮೋರ್ಚಾದ ಕೆಲವೇ ಕೆಲವು ಕಾರ್ಯಕರ್ತರನ್ನು ನೀವು ಉದ್ಯೋಗಕ್ಕೆ ತೆಗೆದುಕೊಂಡಿದ್ದರೆ ಮಿಸ್ಟರ್ ಸುನೀಲ್ ಕುಮಾರ್ ನಿಮಗೆ ನಾನು ಸ್ಯೆಲ್ಯೂಟ್ ಅನ್ನು ಹೊಡೆಯುತ್ತಿದ್ದೆ” ಎಂದಿದ್ದಾರೆ.

ಮುಂದುವರೆದು ನಮ್ಮಲ್ಲಿ ರಮಾನಾಥ್ ರೈ ಎಂಬ ಪ್ರಾಮಾಣಿಕ ರಾಜಕಾರಣಿ ಇದ್ದಾರೆ ಅವರ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗಿ 20 ದಿವಸಗಳ ಹಿಂದೆ ಕಾರ್ಕಾಳದ ಸುನೀಲ್ ಕುಮಾರ್ ‘ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ. ನಾವು ರಾಮನ ಭಕ್ತರು’ ಎಂದು ಹೇಳಿದ್ದಾರಂತೆ. ಮಿಸ್ಟರ್ ಸುನೀಲ್ ಕುಮಾರ್ ನಾವು ಕಾಂಗ್ರೆಸ್ಸಿಗರು, ಈಶ್ವರ ಅಲ್ಲಾ ತೇರೆ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಹೇಳಿ ಸ್ವಾತಂತ್ರ್ಯ ಚಳುವಳಿಯನ್ನು ಕಟ್ಟಿರುವಂತಹ ನಾವು ನಿಮಗೆ ಹೇಳ್ತೇವೆ, ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಅಲ್ಲ. ರಾಮ, ಕೃಷ್ಣ, ಕಲ್ಲುರ್ಟಿ, ಪಂಜುರ್ಲಿ, ಕೋಡ್ದಬ್ಬು, ಕೊರಗಜ್ಜ, ಬಬ್ಬುಸ್ವಾಮಿ, ದುರ್ಗಾಪರಮೇಶ್ವರಿ, ಕಾರ್ಕಾಳದ ವೆಂಕಟರಮಣ, ಜೀಸಸ್, ಗೊಮ್ಮಟೇಶ್ವರ, ಮಹಾವೀರ, ಬುದ್ಧ ಇವರೆಲ್ಲರೂ ಸೇರಿ ಕಾಂಗ್ರೆಸ್ಸಿಗರ ಮೇಲೆ ಆಶೀರ್ವಾದ ಮಾಡಿರುವಂತಹ ಚುನಾವಣೆ” ಎಂದಿದ್ದಾರೆ.

BJP ಶಾಸಕ ಸುನೀಲ್ ಕುಮಾರ್ ಅವರ ಮಾತನ್ನು ಉಲ್ಲೇಖಿಸಿ ಸುಧೀರ್ ಕುಮಾರ್ ಮುರೋಳಿ ಹೇಳಿರುವ ವಿಡಿಯೋವನ್ನು ತಿರುಚಿ ಕತ್ತರಿಸಿ  ತಪ್ಪು ಅರ್ಥ ಬರುವಂತೆ ಎಡಿಟ್ ಮಾಡಲಾಗಿದೆ. ಚುನಾವಣೆ ಸಂದರ್ಭದಲ್ಲಿ ಎದುರಾಳಿಯನ್ನು ಸೈದ್ದಾಂತಿಕವಾಗಿ ಎದುರಿಸಲಾಗದ BJP ಹೀಗೆ ಸುಳ್ಳು ಮತ್ತು ತಪ್ಪಾದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಕೋಮು ದ್ವೇಷಗಳನ್ನು ಹರಡಲು ಹೊಂಚುಹಾಕುತ್ತಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಹಂಚಿಕೊಂಡ ವಿಡಿಯೋ ಎಡಿಟ್‌ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಲು ಮುಸ್ಲಿಮರು ಕಲ್ಲು ಸಂಗ್ರಹಿಸಿದ್ದರು ಎಂದು ಕೋಮು ದ್ವೇಷದ ಪೋಸ್ಟ್‌ ಹಂಚಿಕೊಂಡ BJP ಬೆಂಬಲಿಗರು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights