FACT CHECK | ರಾಹುಲ್ ಗಾಂಧಿಯನ್ನು ನೋಡಲು ಬಂದ ಜನಸಾಗರ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಭವಿಷ್ಯದ ಪ್ರಧಾನಿ ಶ್ರೀ ರಾಹುಲ್ ಗಾಂಧಿಯವರ ದರ್ಶನಕ್ಕಾಗಿ ಆಗಮಿಸಿದ ಅಪಾರ ಜನಸ್ತೋಮ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಇದು ರಾಹುಲ್ ಗಾಂಧಿಯನ್ನು ನೋಡಲು ನೆರೆದ ಜನ ಸಾಗರ! ಮೋದಿಯ ಸಭೆಗೆ ಬಿಜೆಪಿಯವರು 500 ರೂಪಾಯಿ ಕೊಟ್ಟು ಕೂಲಿ ಕೆಲಸಗಾರರನ್ನು ತುಂಬಿಸಿ ತಂದ ಜನರ ಕೂಟವಲ್ಲ, ಬದಲಾವಣೆಯ ಶುಭ ಸೂಚನೆ” ಎಂದು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮಂಡ್ಯ ಮತ್ತು ಕೋಲಾರಕ್ಕೆ ನಿನ್ನೆ (ಏಪ್ರಿಲ್ 17) ಆಗಮಿಸಿದ ಹಿನ್ನಲೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋದಲ್ಲಿ ಪ್ರತಿಪಾದಿಸಿದಂತೆ ರಾಹುಲ್ ಗಾಂಧಿಯನ್ನು ನೋಡಲು ಆಗಮಿಸಿದ ಜನಸ್ತೀಮ ಎಂಬುದು ನಿವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವಿಡಿಯೋವನ್ನು ವೀಕ್ಷಿಸಿದಾಗ, abhijeet kalage_33 ಎಂಬ ವಾಟರ್ ಮಾರ್ಕ್ ಹೊಂದಿರುವುದನ್ನು ಗಮನಿಸಿದ್ದೇವೆ. ಕೀವರ್ಡ್ ಮೂಲಕ ಇನ್‌ಸ್ಟಾಗ್ರಾಮ್‌ ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋವನ್ನೆ ಹೋಲುವ ವಿಡಿಯೋ ಲಭ್ಯವಾಗಿದೆ.

Fact Check: ರಾಹುಲ್‌ ಗಾಂಧಿಯನ್ನು ನೋಡಲು ಜನಸಾಗರ ಎಂದು ಚಿಕ್ಕೋಡಿ ಎತ್ತಿನ ಗಾಡಿ ಸ್ಪರ್ಧೆಯ ವೀಡಿಯೋ ಹಂಚಿಕೆ

ಮಾರ್ಚ್ 5, 2024ರಂದು ಅಭಿಜೀತ್ ಅವರು ಈ ವೀಡಿಯೋವನ್ನು ಶೇರ್ ಮಾಡಿದ್ದು, “कोल्हापूरचा ढाण्या वाघं हारण्या”  ಎಂದು ಬರೆದಿದ್ದು, ಅದರ ಪ್ರಕಾರ ಇದು ಎತ್ತಿನಗಾಡಿ ಸ್ಪರ್ಧೆಗೆ ಸಂಬಂಧಿಸಿದ್ದು ಎಂದು ನ್ಯೂಸ್‌ ಚೆಕ್ಕರ್ ವರದಿ ಮಾಡಿದೆ.

ಕೊಲ್ಹಾಪುರದ ಹೆಸರನ್ನು ಇನ್‌ಸ್ಟಾಗ್ರಾಂ ಬಳಕೆದಾರರು ಬರೆದಿರುವುದರಿಂದ ನಾವು ಬೆಳಗಾವಿ-ಮಹಾರಾಷ್ಟ್ರ ಗಡಿ ಪ್ರದೇಶದ ಸ್ಥಳೀಯ ವರದಿಗಾರರಾದ ಕಾಶೀನಾಥ್ ಸುಲ್ಕುಡೆ ಅವರನ್ನು ನ್ಯೂಸ್‌ ಚೆಕ್ಕರ್ ಸಂಪರ್ಕಿಸಿ ಮಾಹಿತಿ ಪಡೆದಿದೆ.

ನ್ಯೂಸ್‌ ಚೆಕ್ಕರ್‌ಗೆ ಪ್ರತಿಕ್ರಿಯಿಸಿರುವ ಅವರು, ಇದು “ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್‌ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಎತ್ತಿನ ಗಾಡಿ ಸ್ಪರ್ಧೆ”ಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಬಳಿಕ ನಾವು ಈ ಬಗ್ಗೆ ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು ಫಲಿತಾಂಶಗಳು ಲಭ್ಯವಾಗಿವೆ.

ಫೆಬ್ರವರಿ 27, 2024ರ ಬೆಳಗಾವಿ ಸುದ್ದಿಯಲ್ಲಿ “ಶರ್ಯತ್ತಿನಲ್ಲೂ ಅಪ್ಪ, ಮಗನ ರೆಕಾರ್ಡ್ ಬ್ರೇಕ್‌” ಎಂಬ ವರದಿಯಲ್ಲಿ ಅಂತರರಾಜ್ಯ ಭವ್ಯ ಎತ್ತಿನಗಾಡಿ ಓಡಿಸುವ ಈ ಸ್ಪರ್ಧೆ ಮಾರ್ಚ್ 5 ರಂದು ಮಧ್ಯಾಹ್ನ 3 ಗಂಟಗೆ ಚಿಕ್ಕೋಡಿಯ ಎಕ್ಸಂಬಾ ಪಟ್ಟಣದ ಮೈದಾನದಲ್ಲಿ ನಡೆಯಲಿದೆ ಈ ಸ್ಪರ್ಧೆಯ ಟೈಟಲ್‌ ಸಾಹುಕಾರ್ ಶರ್ಯತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಒಟ್ಟು ₹51 ಲಕ್ಷ ಬಹುಮಾನ ನೀಡುವ ಮೂಲಕ ಪ್ರಕಾಶ್ ಹುಕ್ಕೇರಿ ಮತ್ತು ಗಣೇಶ್‌ ಹುಕ್ಕೇರಿ ಅವರು ರೆಕಾರ್ಡ್ ಬ್ರೇಕ್‌ ಮಾಡಿದ್ದಾರೆ ಎಂದಿದೆ.

ಮಾರ್ಚ್ 3, 2024ರ ಪ್ರಜಾವಾಣಿ ವರದಿಯಲ್ಲೂ “ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ ಜನ್ಮದಿನ, ಎತ್ತಿನಗಾಡಿ ಓಡಿಸುವ ಸ್ಪರ್ಧೆ ಮಾರ್ಚ್ 5ಕ್ಕೆ” ಎಂದಿದೆ. ಇದರಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರ 77ನೇ ಜನ್ಮದಿನ ಅಂಗವಾಗಿ ಅವರ ಅಭಿಮಾನಿ ಬಳಗದವರು ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ಮಾ.5ರಂದು ಮಧ್ಯಾಹ್ನ 3.30ಕ್ಕೆ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ ಎಂದಿದೆ.

ಪ್ರಜಾವಾಣಿ ವರದಿ
ಪ್ರಜಾವಾಣಿ ವರದಿ

Mar 7, 2024, ರಂದು’ ಟೈಮ್ಸ್‌ ಆಫ್ ಇಂಡಿಯಾ‘ದಲ್ಲಿ ಚಿಕ್ಕೋಡಿ ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ 64 ಲಕ್ಷ ರೂಪಾಯಿ ಬಹುಮಾನ ಎಂಬ ಶೀರ್ಷಿಕೆಯೊಂದಿಗೆ ಮಾಡಿದ ವರದಿ ಲಭ್ಯವಾಗಿದೆ.

All About belgaum ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ಇಲ್ಲಿ ನೋಡಬಹುದು.

ಹೆಸರಾಂತ ಎಕ್ಸಾಂಬಾ ಎತ್ತಿನ ಗಾಡಿ ಓಟವು ಮತ್ತೊಮ್ಮೆ ಸುದ್ದಿಯಲ್ಲಿದೆ. ಪ್ರಕಾಶ್ ಹುಕ್ಕೇರಿ ಅವರ 77ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಸಂದೀಪ ಪಾಟೀಲ ತಮ್ಮ ಎತ್ತುಗಳ ಜೊತೆಗೂಡಿ 9.5 ಕಿಲೋಮೀಟರ್ ದೂರವನ್ನು ಕೇವಲ 24 ನಿಮಿಷ 17 ಸೆಕೆಂಡುಗಳಲ್ಲಿ ಕ್ರಮಿಸಿದರು. ಈ ಗಮನಾರ್ಹ ಸಾಧನೆಯು ಅವರಿಗೆ ಸಾಮಾನ್ಯ ವಿಭಾಗದಲ್ಲಿ 17 ಲಕ್ಷ ರೂ. ತಂದುಕೊಟ್ಟಿದೆ. ಅದನ್ನು ಕಣ್ತುಂಬಿಕೊಳ್ಳಲು ಸೇರಿದ ಬಾರೀ ಜನಸ್ತೋಮ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಾಗಾಗಿ ವೈರಲ್ ವಿಡಿಯೋದಲ್ಲಿ ರಾಹುಲ್ ಗಾಂಧೀಯನ್ನು ನೋಡಲು ಸೇರಿರುವ ಬಾರೀ ಜನಸ್ತೋಮ ಎಂಬುದು ಸುಳ್ಳು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಕಾಶ್ ಹುಕ್ಕೇರಿ ಅವರ ಜನ್ಮದಿನದ ಅಂಗವಾಗಿ ಚಿಕ್ಕೋಡಿಯಲ್ಲಿ ನಡೆದ ಅಂತಾರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯನ್ನು ವೀಕ್ಷಿಸಲು ಸೇರಿದ್ದ ಬೃಹತ್ ಜನಸ್ತೋಮವನ್ನು, ರಾಹುಲ್ ಗಾಂಧಿಯನ್ನು ನೋಡಲು ಸೇರಿದ್ದಾರೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

 


ಸುಳ್ಳು : ಭವಿಷ್ಯದ ಪ್ರಧಾನಿ ಶ್ರೀ ರಾಹುಲ್ ಗಾಂಧಿಯವರ ದರ್ಶನಕ್ಕಾಗಿ ಆಗಮಿಸಿದ ಅಪಾರ ಜನಸ್ತೋಮ.

 

ವಾಸ್ತವ : ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ 77 ನೇ ಜನ್ಮದಿನ ಅಂಗವಾಗಿ, ಅವರ ಅಭಿಮಾನಿ ಬಳಗದವರು ತಾಲ್ಲೂಕಿನ ಮಲ್ಲಿಕವಾಡದ ಮೈದಾನದಲ್ಲಿ ಮಾ.5 ರಂದು ಏರ್ಪಡಿಸಿದ್ದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯನ್ನು ವೀಕ್ಷಿಸಲು ಸೇರಿದ್ದ ಜನಸ್ತೋಮ



ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights