FACT CHECK | ಜೈ ಶ್ರೀರಾಮ್ ಘೋಷಣೆ ಕೂಗಿದಕ್ಕೆ ಕ್ಷಮೆ ಕೇಳಿದ್ರಾ AAP ನಾಯಕಿ?

“ದೆಹಲಿಯ ಶ್ರೀರಾಮ್ ಕಾಲೊನಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿಯವರು ಭಾಷಣ ಮಾಡುವಾಗ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದಕ್ಕೆ ಅಲ್ಲಿಯ ಬಹುಸಂಖ್ಯಾತ ಮುಸ್ಲಿಂ ಜನರು ವಿರೋಧ ಮಾಡಿದ ಮೇಲೆ ಅವರು ಕ್ಷಮೆ ಕೇಳಿ ಭಾಷಣ ಮುಂದುವರಿಸಿದರು” ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

ದೆಹಲಿಯ ಶಿಕ್ಷಣ ಸಚಿವೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ಅವರು ಶಾಲಾ ಉದ್ಘಾಟನೆಯ ಸಮಯದಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಿಡಿಯೋದಲ್ಲಿ ಕೂಡ ಕೆಲವು ಗೊಂದಲಗಳಿರುವುದು ಮತ್ತು ಜನರು  ಎನ್ನನ್ನೋ ಗಂಭೀರವಾಗಿ ಚರ್ಚಿಸುವುದನ್ನು ಕೂಡ ಕಾಣಬಹುದಾಗಿದೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿಯನ್ನ ಪಡೆಯದ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಮೇಲಿನ ಪ್ರತಿಪಾದನೆಯಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ಸರ್ಚ್ ಮಾಡಿದಾಗ, ದಿನಾಂಕ 9 ಮಾರ್ಚ್‌ 2024ರಂದು ಆಮ್‌ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ್ದ ಅಧಿಕೃತ ಪತ್ರಿಕಾ ಹೇಳಿಕೆಯೊಂದು ಲಭ್ಯವಾಗಿದೆ. ಅದರಲ್ಲಿ ಈಶಾನ್ಯ ದೆಹಲಿಯ ಶ್ರೀರಾಮ್ ಕಾಲೋನಿಯಲ್ಲಿ ಕೇಜ್ರಿವಾಲ್ ಸರ್ಕಾರ ಎರಡು ಸರ್ಕಾರಿ ಶಾಲೆಗಳನ್ನು ಉದ್ಘಾಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಅತಿಶಿ ಮಾತನಾಡಿ, ಶ್ರೀರಾಮ ಕಾಲೋನಿಯ ಈ ಶಾಲೆಯು ದೆಹಲಿಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂದಿದ್ದರು ಎಂಬ ಅಂಶವನ್ನು ಕೂಡ ಅದರಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮತ್ತಷ್ಟು ಸರ್ಚ್ ಮಾಡಿದಾಗ, Directorate of Education GNCT of Delhi ಎಂಬ ಯುಟ್ಯುಬ್‌ ಚಾನಲ್‌ ನಲ್ಲಿ ದಿನಾಂಕ 9 ಮಾರ್ಚ್‌ 2024 ರಂದು ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದ  32:14  ಟೈಮ್‌ಸ್ಟ್ಯಾಂಪ್‌ನಲ್ಲಿ ಅತಿಶಿ ಅವರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಮತ್ತು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿರುವುದು ಕಂಡು ಬಂದಿದೆ.

ನಂತರ 40:30 ಟೈಮ್‌ಸ್ಟ್ಯಾಂಪ್‌ನಲ್ಲಿ, ಅತಿಶಿ ಖಜೂರಿ ಖಾಸ್ ಶಾಲೆಯ ಉದ್ಘಾಟನೆಯ ಬಗ್ಗೆ ತಮ್ಮ ಭಾಷಣವನ್ನು ಮುಂದುವರೆಸುತ್ತಿದ್ದರು. ಈ ವೇಳೆ ಭಾಷಣದಲ್ಲಿ, ಅತಿಶಿ ಖಜೂರಿ ಖಾಸ್ ಶಾಲೆಯ ಬಗ್ಗೆ ಪ್ರಸ್ತಾಪಿಸಿದಾಗ ಕೆಲವು ಹಾಜರಿದ್ದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅತಿಶಿ ಅಕ್ಷೇಪ ವ್ಯಕ್ತ ಪಡಿಸಿದವರನ್ನು ಕುಳಿತುಕೊಳ್ಳಲು ವಿನಂತಿಸಿದಾಗ, ನಗರಸಭಾ ಸದಸ್ಯ ಮೊಹಮ್ಮದ್ ಅಮಿಲ್ ಮಲಿಕ್ ವೇದಿಕೆಯ ಹಿಂದಿನಿಂದ ಅತಿಶಿಯ ಬಳಿಗೆ ಬಂದು, “ಇದು ಶ್ರೀರಾಮ ಕಾಲೋನಿಯ ಶಾಲೆ, ಶ್ರೀರಾಮ ಕಾಲೋನಿ ಎಂದು ಹೇಳಿ” ಎಂಬ ಸಲಹೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಅತಿಶಿ ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆಯಾಚಿಸುತ್ತಾ, “ನಾನು ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆ ಕೇಳಲು ಬಯಸುತ್ತೇನೆ; ಶ್ರೀರಾಮ್ ಕಾಲೋನಿಯ ಶಾಲೆ, ಖಜೂರಿ ಖಾಸ್, ಕರವಾಲ್ ನಗರ ಮತ್ತು ಸೋನಿಯಾ ವಿಹಾರ್‌ನ ಮಕ್ಕಳೂ ಇಲ್ಲಿ ಕಲಿಯುತ್ತಾರೆ ಎಂದು ಸ್ಥಳದ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿ ಎಲ್ಲಿಯೂ ಅತಿಶಿ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿದ್ದಾಗಲಿ, ಅದಕ್ಕೆ ಅವರು ಕ್ಷಮೆ ಕೇಳಿದ್ದಾಗಲಿ ಕಂಡು ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸುಳ್ಳು : ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿಯವರು ಭಾಷಣ ಮಾಡುವಾಗ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದಕ್ಕೆ ಅಲ್ಲಿಯ ಬಹುಸಂಖ್ಯಾತ ಮುಸ್ಲಿಂ ಜನರು ವಿರೋಧ ಮಾಡಿದ ಮೇಲೆ ಅವರು ಕ್ಷಮೆ ಕೇಳಿ ಭಾಷಣ ಮುಂದುವರಿಸಿದರು

 

ವಾಸ್ತವ : ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿಯವರು ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿದ್ದಾಗಲಿ, ಅದಕ್ಕೆ ಅವರು ಕ್ಷಮೆ ಕೇಳಿದ್ದಾಗಲಿ ಕಂಡು ಬಂದಿಲ್ಲ.  ಶ್ರೀರಾಮ್ ಕಾಲೋನಿ ಶಾಲೆಯ ಮಕ್ಕಳು ಎಂದು ಹೇಳಲು ಮರೆತಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಇದನ್ನು ತಿರುಚಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದರಿ : FACT CHECK | ರಾಹುಲ್ ಗಾಂಧಿಯನ್ನು ನೋಡಲು ಬಂದ ಜನಸಾಗರ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights