FACT CHECK | BJP ಮುಖಂಡನನ್ನು DMK ಕಾರ್ಯಕರ್ತರು ಥಳಿಸಿದ್ದಾರೆ ಎಂಬುದು ನಿಜವೇ?

“ತಮಿಳುನಾಡು ಬಿಜೆಪಿ ಮುಖಂಡ ರಾಜೇಶ್ ಬಿಜು ಅವರನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ. ತಮಿಳುನಾಡು ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದೆ” ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದನ್ನು  ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಾ, ತಮಿಳುನಾಡಿನ ಡಿಎಂಕೆ ಸರ್ಕಾರದ ವಿರುದ್ಧ ವ್ಯಾಪಕವಾಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಇನ್ನು ಕೆಲವು ಮಂದಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದೇ ವೇಳೆಯಲ್ಲಿ ಈ ವಿಡಿಯೋ ಕೇವಲ ತಮಿಳುನಾಡು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಕೂಡ ಹೆಚ್ಚಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಮೂಲಕ ಇಂಡಿಯಾ ಮೈತ್ರಿಕೂಟ ಡಿಎಂಕೆ ಪಕ್ಷ ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಗಿರಿಯನ್ನು ಪ್ರದರ್ಶಿಸುತ್ತಿದೆ ಎಂದು ಕೂಡ ಬಿಂಬಿಸಲಾಗುತ್ತಿದೆ. 2024ರ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಡಿಎಂಕೆ ಪಕ್ಷಗಳ ಬಗ್ಗೆ ಆರೋಪ ಪ್ರತ್ಯಾರೋಪಗಳ ಪೋಸ್ಟ್‌ಅನ್ನು ಮಾಡಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ,  1 ಆಗಸ್ಟ್‌ 2023 ರಂದು ಮಿಳಿನ ಮಲೈಮುರಾಸು ಎಂಬ ಸುದ್ದಿ ವಾಹಿನಿ ನ್ನ ಯುಟ್ಯೂಬ್‌ ಚಾನಲ್‌ನಲ್ಲಿಅಪ್‌ಲೋಡ್‌ ಮಾಡಿದ ವಿಡಿಯೋ ಲಭ್ಯವಾಗಿದೆ.

ವಿಡಿಯೋದಲ್ಲಿ ಜಗಳವಾಡುತ್ತಿರುವ ಎರಡೂ ಬಣದವರು ಬಿಜೆಪಿಯವರೇ ಆಗಿದ್ದಾರೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿಗಳು ಡಿಎಂಕೆ ಪಕ್ಷದ ಸದಸ್ಯರಲ್ಲ. ಚೆನ್ನೈ ಪೂರ್ವ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎಸ್.ಸುಬ್ಬಯ್ಯ ಮತ್ತು ಅವರ ಬೆಂಬಲಿಗರು ಬಿಜೆಪಿ ಐಟಿ ವಿಭಾಗದ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ತಮಿಳಿನ ಮಲೈಮುರಾಸು ಎಂಬ ಸುದ್ದಿ ವಾಹಿನಿ ತನ್ನ ಯುಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋವನ್ನು ಬಿತ್ತರಿಸಿದೆ.

ಇದಲ್ಲದೆ, ಗ್ರೇಟರ್ ಚೆನ್ನೈ ಪೋಲೀಸ್ ಅವರ ಅಧಿಕೃತ ‘X’ ಖಾತೆಯಲ್ಲಿ ಇತ್ತೀಚಿನ ಟ್ವೀಟ್ ಅನ್ನು ಹುಡುಕಾಟ ನಡಿಸಿದಾಗ, ವೈರಲ್‌ ವಿಡಿಯೊದಲ್ಲಿ ಚಿತ್ರಿಸಲಾದ ಘಟನೆ ಇತ್ತೀಚೆಗೆ ಸಂಭವಿಸಿಲ್ಲ. ಇದು 31 ಜುಲೈ 2023 ರಂದು ಸಂಭವಿಸಿದೆ ಎಂದು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.. ನಂಗನಲ್ಲೂರಿನಲ್ಲಿ ರಾಜಕೀಯ ಪಕ್ಷವೊಂದರ ಎರಡು ಬಣಗಳ ನಡುವಿನ ವೈಯುಕ್ತಿಕ ಜಗಳಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದೆ ಎಂಬುದನ್ನು ಕೂಡ ಅವರ ತಮ್ಮ ಟ್ವಿಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಈ ಕುರಿತು 1 ಆಗಸ್ಟ್‌ 2023ರಂದು ಪಕಟವಾಗಿದ್ದ ಅಂಕಣವೊಂದು ಪತ್ತೆಯಾಗಿದ್ದು ಅದರಲ್ಲಿ,  ಬಿಜೆಪಿಯ ಸುಬ್ಬಯ್ಯ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆ ಅಂಕಣದಲ್ಲಿ ಉಲ್ಲೇಖಿಸಲಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಚೆನ್ನೈ ಪೂರ್ವ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎಸ್.ಸುಬ್ಬಯ್ಯ ಮತ್ತು ಅವರ ಬೆಂಬಲಿಗರು ಬಿಜೆಪಿ ಐಟಿ ವಿಭಾಗದ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ನಡೆಸಿದ್ದ 2023ರ ಹಳೆಯ ವಿಡಿಯೋವನ್ನು, ತಮಿಳುನಾಡು ಬಿಜೆಪಿ ಮುಖಂಡ ರಾಜೇಶ್ ಬಿಜು ಅವರನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸುಳ್ಳು : ತಮಿಳುನಾಡು ಬಿಜೆಪಿ ಮುಖಂಡ ರಾಜೇಶ್ ಬಿಜು ಅವರನ್ನು ಡಿಎಂಕೆ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ. ತಮಿಳುನಾಡು ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದೆ

ವಾಸ್ತವ : ವಿಡಿಯೋದಲ್ಲಿ ಜಗಳವಾಡುತ್ತಿರುವ ಎರಡೂ ಬಣದವರು ಬಿಜೆಪಿಯವರೇ ಆಗಿದ್ದಾರೆ. ಈ ಘಟನೆ 2023ರಲ್ಲಿ ನಡೆದಿದೆ. ವಿಡಿಯೋದಲ್ಲಿ ಕಾಣುವ ವ್ಯಕ್ತಿಗಳು ಡಿಎಂಕೆ ಪಕ್ಷದ ಸದಸ್ಯರಲ್ಲ. ಚೆನ್ನೈ ಪೂರ್ವ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎಸ್.ಸುಬ್ಬಯ್ಯ ಮತ್ತು ಅವರ ಬೆಂಬಲಿಗರು ಬಿಜೆಪಿ ಐಟಿ ವಿಭಾಗದ ಕಾರ್ಯದರ್ಶಿ ರಾಜೇಶ್ ಬಿಜು ಮೇಲೆ ಹಲ್ಲೆ ನಡೆಸಿದ್ದಾರೆ. ಎಂದು ಚೆನ್ನೈನ ಪೊಲೀಸರು ಖಚಿತಪಡಿಸಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜೈ ಶ್ರೀರಾಮ್ ಘೋಷಣೆ ಕೂಗಿದಕ್ಕೆ ಕ್ಷಮೆ ಕೇಳಿದ್ರಾ AAP ನಾಯಕಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights