FACT CHECK : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ರವರ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡ BJP ಬೆಂಬಲಿಗರು

ಅಲ್ಪ ಸಂಖ್ಯಾರತನ್ನು ಓಲೈಸಲು ಹಣೆಯಲ್ಲಿನ ಕುಂಕುಮ ಅಳಿಸಿದ ಶಿಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಅವರ ಪತಿ.  ಪರಿಸ್ಥಿತಿ ಎಲ್ಲಿಗೆ ಬಂತು ನೋಡಿ. ಎಂಬ ಹೇಳಿಕೆಯೊಂದಿಗೆ ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ 2024ರ ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿರುವ ಗೀತಾ ಶಿವರಾಜ್‌ಕುಮಾರ್‌ರವರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಬಲಪಂಥೀಯ ಪ್ರತಿಪಾದಕ ಪ್ರಶಾಂತ್ ಸಂಬರಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನೂ ರಾಜಕೀಯರಂಗದಲ್ಲಿ ತೇಜೋವಧೆ ಎನ್ನುವುದು ಸರ್ವೇಸಾಧಾರಣ ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ. ಕೆಲ ಫೋಟೊ, ವೀಡಿಯೋಗಳನ್ನು ತಿರುಚಿ ತಪ್ಪಾಗಿ ಪ್ರಚಾರ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹಾಗೂ ಪತಿ ಶಿವರಾಜ್‌ಕುಮಾರ್ ಇಂಥದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ.

ಅಲ್ಪ ಸಂಖ್ಯಾರತನ್ನು ಓಲೈಸಲು ಹಣೆಯಲ್ಲಿನ ಕುಂಕುಮ ಅಳಿಸಿದ ಶಿಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹಾಗೂ ಅವರ ಪತಿ ಎಂದು ಹೇಳಿ ವೀಡಿಯೋವೊಂದು ವೈರಲ್ ಆಗುತ್ತಿದೆ. ವೋಟಿಗಾಗಿ ಏನು ಬೇಕಾದರೂ ಮಾಡುತ್ತಾರೆ ನೋಡಿ ಅಂತೆಲ್ಲಾ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ, ಏಪ್ರಿಲ್ 9ರಂದು ಶಿವಮೊಗ್ಗ ವಿನೋಬನಗರದ ಶ್ರೀರಾಮ ನಗರ ನಿವಾಸಿಗಳು ಆಯೋಜಿಸಿದ್ದ ‘ನವ ಸಂವತ್ಸರದ ಸಂಭ್ರಮದಲ್ಲಿ ಗೀತಕ್ಕ ಶಿವಣ್ಣ ನಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ಶಿವಣ್ಣ ದಂಪತಿ ಭಾಗಿ ಆಗಿದ್ದರು. ವೇದಿಕೆ ಏರಿದಾಗ ಬಹಳ ಬಿಸಿಲಿತ್ತು. ಹಾಗಾಗಿ ಸೆಕೆಗೆ ಶಿವಣ್ಣನ ಹಣೆಯಲ್ಲಿದ್ದ ಕುಂಕುಮ ತೇವವಾಗಿತ್ತು. ಹಾಗಾಗಿ ಶಿವಣ್ಣ ಅದನ್ನು ಅಳಿಸಿ ತೆಗೆದಿದ್ದರು.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಸರ್ಚ್ ಮಾಡಿದಾಗ ಟಿವಿ 9 ತನ್ನ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ  ವಿಡಿಯೋ ಲಭ್ಯವಾಗಿದೆ. “ಫೋಟೋಗಾಗಿ ವೇದಿಕೆಗೆ ಬಂದ ಮಕ್ಕಳ ಜೊತೆ ಶಿವಣ್ಣ ಏನ್ ಮಾಡಿದ್ರು ನೋಡಿ?” ಎಂದು 2 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನು ಟಿವಿ9 ಕನ್ನಡ ತನ್ನ ಯೂಟ್ಯೂಬ್‌ನಲ್ಲಿ ಏಪ್ರಿಲ್ 10 ರಂದು ಪ್ರಸಾರ ಮಾಡಿದೆ. ಆ ವಿಡಿಯೋ 24ನೇ ಸೆಕೆಂಡ್‌ನಲ್ಲಿ ಗೀತಾ ಶಿವರಾಜ್‌ ಕುಮಾರ್‌ರವರ ಹಣೆಯ ಮೇಲೆ ಎರಡು ಕಡೆ ಕುಂಕುಮ ಹಚ್ಚಿರುವುದನ್ನು ಕಾಣಬಹುದು. 34ನೇ ಸೆಕೆಂಡ್‌ನಲ್ಲಿ ಇನ್ನು ಶಿವರಾಜ್ ಕುಮಾರ್ ಬೆವರು ಒರೆಸಿದಾಗ ಕುಂಕುಮ ಸಹ ಅರ್ಧ ಅಳಿಸಿದೆ. ಹಾಗಾಗಿ ಕೂಂಕುಮವನ್ನು ಅಳಿಸಿದ್ದಾರೆ ಹೊರತು ಉದ್ದೇಶಪೂರ್ವಕವಾಗಿ ಅಲ್ಲ.

ಇನ್ನು ಗೀತಾ ಶಿವರಾಜ್‌ಕುಮಾರ್ ಹಣೆಯಲ್ಲಿದ್ದ ಕುಂಕುಮ ದೊಡ್ಡದಾಗಿದೆ ಎಂದು ಸಣ್ಣದಾಗಿ ಸರಿಪಡಿಸಿಕೊಂಡಿದ್ದರು.
ವಿಡಿಯೋದ 42ನೇ ಸೆಕೆಂಡ್‌ನಲ್ಲಿ ಗೀತಾ ಶಿವರಾಜ್ ಕುಮಾರ್‌ ಎದುರಿಗೆ ಇದ್ದವರ ಜೊತೆ ಸನ್ನೆ ಮಾಡುತ್ತಾ ಕುಂಕುಮ ಸರಿಪಡಿಸಿಕೊಳ್ಳುವುದನ್ನು ನೋಡಬಹುದು. ಅವರ ಹಣೆಯಲ್ಲಿ ಎರಡು ಕಡೆ ಕುಂಕುಮ ಇದ್ದುದರಿಂದ ಎದುರಿಗಿದ್ದರ ಸೂಚನೆಯ ಮೇರೆಗೆ ಸರಿಪಡಿಸಿಕೊಳ್ಳಲು ಯತ್ನಿಸಿ ಕುಂಕುಮ ಅಳಿಸಿದ್ದಾರೆ. ಆನಂತರ ಸರಿ ಹೋಯಿತ ಎಂಬರ್ಥದಲ್ಲಿ ಎದುರಿಗೆ ಇದ್ದರಿಗೆ ಸನ್ಹೆ ಮಾಡುವುದನ್ನು ಸಹ ವಿಡಿಯೋದ 50 ರಿಂದ 59 ಸೆಕೆಂಡ್‌ವರೆಗೂ ನೋಡಬಹುದು.

ಆದರೆ ಇದನ್ನೇ ಕೆಲವರು ತಪ್ಪಾಗಿ ತಿರುಚಿ ವೀಡಿಯೋ ವೈರಲ್ ಮಾಡುತ್ತಿದ್ದಾರೆ. ಅಲ್ಪ ಸಂಖ್ಯಾರತನ್ನು ಓಲೈಸಲು ಹೀಗೆ ಮಾಡಿದ್ದಾರೆ ಎಂದು ತಪ್ಪು ತಪ್ಪಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಹಾಗಾಗಿ ಫೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಜೈ ಶ್ರೀರಾಮ್ ಘೋಷಣೆ ಕೂಗಿದಕ್ಕೆ ಕ್ಷಮೆ ಕೇಳಿದ್ರಾ AAP ನಾಯಕಿ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights