ನೈಟ್‌ ಕರ್ಫ್ಯೂ ಮುಗಿದ ಅಧ್ಯಾಯ ಎಂದ ಸುಧಾಕರ್; ಅಗತ್ಯ ಎಂದ ಅಶೋಕ್‌; ಗೊಂದಲದಲ್ಲಿದೆ ಸರ್ಕಾರ

ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿಯಾವುದು ವಿಚಾರದಲ್ಲಿ ಸಾರ್ವಜನಿಕರು ಸರ್ಕಾರ ಯಾವಾಗ ಯಾವ ನಿರ್ಧಾರ ಮಾಡುತ್ತೋ ಎಂಬ ಸಂದೇಹದಲ್ಲಿದ್ದಾರೆ. ರಾಜ್ಯದ ಜನರಿಗಿಂತ ಹೆಚ್ಚಾಗಿ ರಾಜ್ಯ ಸರ್ಕಾರದ ಸಚಿವರೇ ಹೆಚ್ಚು ಗೊಂದಲದಲ್ಲಿದ್ದು, ಕರ್ಫ್ಯೂ ವಿಧಿಸುವ ವಿಚಾರವಾಗಿ ಒಬ್ಬಬ್ಬ ಸಚಿವರೂ ಒಂದೊಂದು ರೀತಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ನೈಟ್‌ ಕರ್ಫ್ಯೂ ಮುಗಿದ ಅಧ್ಯಾಯ. ಇನ್ನು ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಹೇರಿಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಮತ್ತೊಂದು ಕಡೆ, ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಈ ಇಬ್ಬರೂ ಸಚಿವ ಹೇಳಿಕೆಗಳು, ಕೊರೊನಾ ಸೋಂಕಿನ ಆಕ್ರಮಣ ಆರಂಭವಾಗಿ 10 ತಿಂಗಳು ಕಳೆದರೂ, ಈ ವಿಚಾರದಲ್ಲಿ ಸರ್ಕಾರ ಗೊಂದಲದ ಗೂಡಾಗಿಯೇ ಉಳಿದಿದೆ ಎಂಬುದಕ್ಕೆ ಸ್ಪಷ್ಟ ನಿಧರ್ಶನವಾಗಿದೆ.

ಡಿಸೆಂಬರ್ 24ರ ರಾತ್ರಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನೈಟ್‌ ಕರ್ಪ್ಯೂ ವಿಧಿಸಲಾಗಿತ್ತು. ಆದರೆ, ಸರ್ವಜನಿಕರ ತೀವ್ರ ಟೀಕೆಗೆ ಒಳಗಾದ ಸರ್ಕಾರ, ನಂತರ ತನ್ನ ನಿರ್ಧಾರವನ್ನು ಬದಲಿಸಿ, ಕರ್ಫ್ಯೂವನ್ನು ವಾಪಸ್‌ ಪಡೆದುಕೊಂಡಿತ್ತು.

ಇದೀಗ ರೂಪಾಂತರಿ ಕೊರೊನಾ ವೈರಸ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸುಧಾಕರ್‌, ಅಂತಹ ಯಾವುದೇ ನಿರ್ಧಾರ ಸರ್ಕಾರದ ಮುಂದೆ ಇಲ್ಲ. ಅಲ್ಲದೆ ಸೀಲ್‌ಡೌನ್ ಹಾಗೂ ಲಾಕ್‌ಡೌನ್ ಜಾರಿಗೊಳಿಸುವ ಯೋಚನೆಯೂ ಇಲ್ಲ ಎಂದು ಹೇಳಿದ್ದರು.

ಆದರೆ, ಅವರ ನಂತರ ಹೇಳಿಕೆ ನೀಡಿರುವ ಸಚಿವ ಆರ್‌ ಅಶೋಕ್‌, ರೂಪಾಂತರಿ ಕೊರೊನಾ ಹರಡದಂತೆ ತಡೆಯಲು ರಾಜ್ಯದಲ್ಲಿ ರಿಯಲ್ ನೈಟ್ ಕರ್ಫ್ಯೂ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ರಾಜ್ಯದಾದ್ಯಂತ ಮತ್ತಷ್ಟು ಬಿಗಿ ಕ್ರಮಜಾರಿಗೆ ತರಲು ಚರ್ಚೆಸುತ್ತೇವೆ ಎಂದು ಹೇಳಿದ್ದಾರೆ.

ಹೀಗಾಗಿ ರಾತ್ರಿ ಕರ್ಫ್ಯೂ ಜಾರಿಯಾಗುತ್ತಾಅಥವಾ ಸುಧಾಕರ್‌ ಹೇಳಿದಂತೆ ಅದು ಮುಗಿದ ಅಧ್ಯಾಯವಾ ಎಂಬುದು ಮತ್ತೆ ಗೊಂದಲವನ್ನು ಸೃಷ್ಟಿಸಿದೆ.

ರಾಜ್ಯದಲ್ಲಿ ಒಟ್ಟು 7 ಜನರಲ್ಲಿ ಕೋವಿಡ್ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ.


ಇದನ್ನು ಓದಿ: ಕನ್ನಡ ಧ್ವಜ ತೆಗೆಯದಿದ್ದರೆ ಭಗವಾಧ್ವಜ ಹಾರಿಸುತ್ತೇವೆ: ಮಹಾರಾಷ್ಟ್ರ ಏಕೀಕರಣ ಸಮಿತಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights