ಕನ್ನಡ ಧ್ವಜ ತೆಗೆಯದಿದ್ದರೆ ಭಗವಾಧ್ವಜ ಹಾರಿಸುತ್ತೇವೆ: ಮಹಾರಾಷ್ಟ್ರ ಏಕೀಕರಣ ಸಮಿತಿ
ಬೆಳಗಾವಿಯ ಮಹಾನಗರ ಪಾಲಿಕೆ ಕಛೇರಿ ಎದುರು ಹಾರಿಸಿರುವ ಕನ್ನಡ ಬಾವುಟವನ್ನು ಡಿಸಂಬರ್ 31ರೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಅಲ್ಲಿ ಭಗವಾಧ್ವಜ ಹಾರಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಏಕೀಕರಣ ಯುವ ಸಮಿತಿ ಮಂಗಳವಾರ ನಗರ ಪೊಲೀಸ್ ಆಯುಕ್ತರಿಗೆ ಗಡುವು ನೀಡಿದೆ ಎಂದು ತಿಳಿದು ಬಂದಿದೆ.
ಇದನ್ನು ಖಂಡಿಸಿರುವ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಧ್ವಜದ ಬಳಿಯೇ ಕಾವಲು ಕಾಯುತ್ತಿದ್ದಾರೆ. ಹಲವು ವರ್ಷಗಳ ಹೋರಾಟದ ನಂತರ, ಪಾಲಿಕೆ ಕಚೇರಿ ಎದುರು ಸೋಮವಾರ ಕನ್ನಡಪರ ಹೋರಾಟಗಾರರು ಕಂಬ ನೆಟ್ಟು, ಕನ್ನಡ ಬಾವುಟ ಹಾರಿಸಿದ್ದರು.
ಈ ಹಿಂದೆಯೂ, ಅಲ್ಲಿ ಕನ್ನಡ ಬಾವುಟ ಹಾರಿಸಿದ ಬೆನ್ನಲ್ಲೇ ಪೊಲೀಸರು ಅದನ್ನು ತೆರವುಗೊಳಿಸಿದ್ದರು. ಇದೇ ರೀತಿ ಈಗಲೂ ತೆರವುಗೊಳಿಸಬಹುದೆಂಬ ಕಾರಣಕ್ಕೆ ಕನ್ನಡಪರ ಹೋರಾಟಗಾರರು ಕಂಬ ಹಾಗೂ ಬಾವುಟವನ್ನು ಕಾವಲು ಕಾಯುತ್ತಿದ್ದಾರೆ. ಕೊರೆವ ಚಳಿಯಲ್ಲೂ ರಾತ್ರಿಯಿಡೀ ಅಲ್ಲಿಯೇ ಮಲಗಿ, ಧ್ವಜಸ್ತಂಭ ತೆರವುಗೊಳಿಸಬಾರದು ಎಂದು ಒತ್ತಾಯಿಸುತ್ತಿದ್ದಾರೆ.
“ಮಹಾನಗರ ಪಾಲಿಕೆ ಕಛೇರಿ ಸೇರಿದಂತೆ, ನಗರದ ರೈಲು ನಿಲ್ದಾಣ, ಪ್ರಾದೇಶಿಕ ಆಯುಕ್ತರ ಕಛೇರಿಯ ಬಳಿ ಕಾನೂನುಬಾಹಿರವಾಗಿ ಹಳದಿ–ಕೆಂಪು ಬಣ್ಣದ ಧ್ವಜ ಹಾರಿಸಲಾಗಿದೆ. ಈ ಧ್ವಜಕ್ಕೆ ಮಾನ್ಯತೆ ಸಿಕ್ಕಿಲ್ಲ. ರಾಷ್ಟ್ರಧ್ವಜದ ಎದುರು ಈ ಧ್ವಜ ಹಾರಿಸಿ, ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರಲಾಗಿದೆ. ಬಾವುಟ ಹಾರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಮಹಾರಾಷ್ಟ್ರ ಏಕೀಕರಣ ಯುವಸಮಿತಿಯ ಸದಸ್ಯರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
“ಪಾಲಿಕೆ ಎದುರಿನ ಕನ್ನಡ ಬಾವುಟವನ್ನು ಡಿಸಂಬರ್ 31ರೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವು ಅಲ್ಲಿ ಭಗವಾಧ್ವಜ ಹಾರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಪ್ರಜಾವಾಣಿ ವರದಿ ಮಾಡಿದೆ.
ಈ ಹಿಂದೆ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು-ಸ್ಥಾಪನೆಗೆ ಸಂಬಂಧಿಸಿದಂತೆ ಇದೆ ರೀತಿಯ ಗಲಭೆ ಆರಂಭವಾಗಿತ್ತು. ಆಡಳಿತ ಮತ್ತು ವಿರೋಧ ಪಕ್ಷಗಳು ಇದರಲ್ಲೂ ತಮ್ಮ ಬೇಳೆ ಬೇಯಿಸಿಕೊಂಡಿದ್ದವು.
ಇದನ್ನೂ ಓದಿ: ಜಾತ್ರೆ-ಎಲೆಕ್ಷನ್ ಓಕೆ: ನ್ಯೂ ಇಯರ್ ಬೇಡ: ಅನ್ಯಧರ್ಮೀಯ ಸಂಭ್ರಮಕ್ಕೆ ಬ್ರೇಕ್ ಹಾಕುತ್ತಿದೆ BJP ಸರ್ಕಾರ!