ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದದ್ದು ನಿಜವಲ್ಲ…

ತರಕಾರಿ ವ್ಯಾಪಾರಿಯೊಬ್ಬರು ಡ್ರೈನೇಜ್ ನೀರಿನಿಂದ ತರಕಾರಿಗಳನ್ನು ತೊಳೆಯುತ್ತಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಮುಸ್ಲಿಂ ಟೋಪಿ ಧರಿಸಿದ ವ್ಯಕ್ತಿಯೊಬ್ಬರು ಗಟಾರದಿಂದ ಟೊಮೆಟೊ ಮತ್ತು ಇತರ ತರಕಾರಿಗಳನ್ನು ತೆಗೆದುಕೊಂಡು ತಾಜಾ ತರಕಾರಿಗಳೊಂದಿಗೆ ಹಾಕುತ್ತಿರುವುದನ್ನು ಕಾಣಬಹುದು. ಮುಸ್ಲಿಂ ವ್ಯಾಪಾರಿಯೊಬ್ಬರು  ಡ್ರೈನೇಜ್ ನೀರಿನಿಂದ ತರಕಾರಿಗಳನ್ನು ತೊಳೆದು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿಕೊಂಡು ಹಲವರು ವಿಡಿಯೋ ಷೇರ್ ಮಾಡುತ್ತಿದ್ದಾರೆ.

ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೋದ ಸ್ಕ್ರೀನ್‌ಶಾಟ್ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು.  07 ಮಾರ್ಚ್ 2020 ರಲ್ಲಿ ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾದ ವೀಡಿಯೊ ವರದಿ ಲಭ್ಯವಾಗಿದೆ. ಇದರಲ್ಲಿ ಇದೇ ರೀತಿಯ ತುಣುಕನ್ನು ಕಾಣಬಹುದು. ವೀಡಿಯೊದ ಶೀರ್ಷಿಕೆಯು, “ತರಕಾರಿ ವ್ಯಾಪಾರಿಯೂ ಚರಂಡಿ ನೀರಿನಲ್ಲಿ ತರಕಾರಿಗಳನ್ನು ತೊಳೆಯುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ” ಎಂದು ಹೇಳುತ್ತದೆ. ವಿಸ್ತೃತ ವೀಡಿಯೊದಲ್ಲಿ ಚರಂಡಿಯಿಂದ ತರಕಾರಿಗಳನ್ನು ಎತ್ತುತ್ತಿರುವುದನ್ನು ನೋಡಿದ ಕೆಲವರು ಪ್ರಶ್ನಿಸುತ್ತಾರೆ, ಅಲ್ಲಿದ್ದ ಜನರಿಗೆ ತಾನು ಎತ್ತಿಕೊಂಡ ತರಕಾರಿಯನ್ನು ಗಟಾರದಲ್ಲಿ ಬಿದ್ದಿದ್ದವು ಎಂದು ಹೇಳುತ್ತಾನೆ. ಇದಾದ ನಂತರ ಅಲ್ಲಿದ್ದ ಕೆಲವರು ಅವರ ಕೈಗಾಡಿಯಲ್ಲಿ ಇಟ್ಟಿದ್ದ ತರಕಾರಿಗಳನ್ನು ಎಸೆಯಲು ಯತ್ನಿಸುತ್ತಾರೆ ಎಂದಿದೆ.

ಇದರ ಸತ್ಯಾಸತ್ಯತೆಯನ್ನು ತಿಳಿಯಲು  ಕೆಲವು ಕೀವರ್ಡ್ ಬಳಸಿ ಮತ್ತಷ್ಟು ಹುಡುಕಾಡಿದಾಗ ಘಟನೆಯು ಮೂಲ ವಿಡಿಯೊದ ವರದಿ ಲಭ್ಯವಾಗಿದೆ. ಘಟನೆಯು 28 ಫೆಬ್ರವರಿ 2020 ರ ನ್ಯೂಸ್ 18 ಲೋಕಮಾತ್ ವರದಿಯಲ್ಲಿ ವೀಡಿಯೊದ ಸ್ಟಿಲ್ ಕಂಡುಬಂದಿದೆ. ವರದಿಯ ಪ್ರಕಾರ, ವೈರಲ್ ಘಟನೆಯು ಮಹಾರಾಷ್ಟ್ರದ ಭಿವಂಡಿಯ ಗಾಯತ್ರಿ ನಗರ ಪ್ರದೇಶದಲ್ಲಿ ಸಂಭವಿಸಿದೆ,  ತರಕಾರಿ ವ್ಯಾಪಾರಿಯು ತನ್ನ ಕೈಗಾಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದ ವೇಳೆ ಚರಂಡಿಯ ಮುಚ್ಚಳ ತೆರೆವಾಗಿರುವುದನ್ನು ಗಮನಿಸದೆ ತಳ್ಳುವಾಗ ಕೈಗಾಡಿಯು ಏಕಾಏಕಿ ರಸ್ತೆ ಮಧ್ಯದ ಗಟಾರದಲ್ಲಿ ಪಲ್ಟಿಯಾಗಿದೆ, ಗಾಡಿಯಲ್ಲಿದ್ದ ತರಕಾರಿಗಳು ನೇರವಾಗಿ ಚರಂಡಿಗೆ ಬಿದ್ದಿವೆ. ನಂತರ, ಗಟಾರದಲ್ಲಿ ಬಿದ್ದ ತರಕಾರಿಗಳನ್ನು ಎತ್ತಿಕೊಂಡು ಮತ್ತೆ ಗಾಡಿಯಲ್ಲಿ ಹಾಕಿಕೊಳ್ಳುತ್ತಾನೆ. ಆ ವೇಳೆ ದಾರಿಹೋಕರು ಈ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾರೆ. ವರದಿಯ ಪ್ರಕಾರ, ತರಕಾರಿ ವ್ಯಪಾರಿಯು ಗಾಡಿಯಿಂದ ಬಿದ್ದ ತನ್ನ ತರಕಾರಿಗಳನ್ನ ತೆಗೆದುಕೊಳ್ಳುತ್ತಾನೆಯೇ ಹೊರತು ಆ ತರಕಾರಿಗಳನ್ನು ಗಟಾರ ನೀರಿನಿಂದ ತೊಳೆಯುವ ಉದ್ದೇಶ ಇರಲಿಲ್ಲ ಎಂದು ಹೇಳಲಾಗಿದೆ.

ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ಪೊಲೀಸರು ಆತನ ವಿರುದ್ಧ ಐಪಿಸಿಯ ಸೆಕ್ಷನ್ 273 (ಹಾನಿಕಾರಕ ಆಹಾರ ಅಥವಾ ಪಾನೀಯ ಮಾರಾಟ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

ಪೋಸ್ಟ್‌ ವೀಡಿಯೊ ಇತ್ತೀಚಿನದಲ್ಲ , ಗೂಗಲ್‌ನಲ್ಲಿ ಶೋಧಿಸಿದಾಗ 2020 ರಲ್ಲಿ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ ಎಂದು  ತಿಳಿದು ಬಂದಿದೆ. ಮತ್ತು ಹಿಂದೆಯೂ ಇದೇ ವಿಡಿಯೊವನ್ನು ಸುಳ್ಳು ಹೇಳಿಕೆಯೊಂದಿಗೆ ಪೋಸ್ಟ್‌ ಮಾಡಿಲಾಗಿದೆ. ಕೈಗಾಡಿಯನ್ನು ತಳ್ಳುವಾಗ ಗಟಾರದ ಮುಚ್ಚಳ ತೆರೆದಿರುವುದನ್ನು ಗಮನಿಸಿದ ವ್ಯಾಪಾರಿಯು ಗಾಡಿನ್ನು ತಳ್ಳುತ್ತಾನೆ, ತರಕಾರಿ ಪ್ಯಾಪಾರಿಯ ಕೈಗಾಡಿ ಗಟಾರದಲ್ಲಿ ಉರುಳಿಬಿದ್ದಿದ್ದು, ನಂತರ ಕೈಗಾಡಿಯಲ್ಲಿದ್ದ ಕೆಲವು ತರಕಾರಿಗಳು ಚರಂಡಿಗೆ ಬಿದ್ದಿವೆ. ನಂತರ ಅವನು ಬಿದ್ದ ತರಕಾರಿಗಳನ್ನು ಎತ್ತಿಕೊಂಡು ಮತ್ತೆ ಗಾಡಿಯಲ್ಲಿ ಹಾಕಿಕೊಳ್ಳುತ್ತಾನೆ.

ಹಿಂದೆಯೂ ಇದೇ ರೀತಿ ಆಹಾರ ಪದಾರ್ಥಗಳಿಗೆ ಮುಸ್ಲಿಮರು ಉಗುಳುತ್ತಿದ್ದಾರೆ ಎಂದು ಹೇಳಿ ಸುಳ್ಳು ಪೋಸ್ಟ್‌ಗಳನ್ನು ಹಂಚಿಕೊಂಡ ಉದಾಹರಣೆಗಳು ಇದ್ದು ಅವಗಳನ್ನು ಹಿಂದೆಯೂ ensuddi.com ಫ್ಯಾಕ್ಟ್‌ಚೆಕ್ ಮಾಡುವ ಮೂಲಕ ವಾಸ್ತವ ಏನೆಂದು ಜನಸಾಮಾನ್ಯರಿಗೆ ತಿಳಿಸಲಾಗಿತ್ತು. ಆ ಸುದ್ದಗಳನ್ನು ಇಲ್ಲಿ  ಮತ್ತು ಇಲ್ಲಿ ನೋಡಬಹುದು. ಮುಸ್ಲಿಂ ದ್ವೇಷ ಹರಡುವ ಸುಳ್ಳು ಸುದ್ದಿಗಳನ್ನು ಆಲ್ಟ್‌ನ್ಯೂಸ್‌ ಕೂಡ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಷ್ಟದ ಪರಿಸ್ಥಿತಿಯಲ್ಲಿದ್ದ ವ್ಯಾಪಾರಿಯ ವೀಡಿಯೊವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವ್ಯಾಪಾರಿಗೆ  ತರಕಾರಿಗಳನ್ನು ಗಟರ್ ನೀರಿನಿಂದ ತೊಳೆಯುವ ಯಾವ ಉದ್ದೇಶವು ಇರಲಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಮುಸ್ಲಿಂ ದ್ವೇಷ ಹರಡುವ ಉದ್ದೇಶದಿಂದ ಹೀಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯಾ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಾಡ ಪಿಸ್ತೂಲ್ ಹೊಂದಿದ್ದ ಕಾರಣಕ್ಕೆ ಬಂಧನಕ್ಕೊಳಗಾದ ಮಹಿಳೆ ಮುಸ್ಲಿಂ ಅಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights