ಫ್ಯಾಕ್ಟ್‌ಚೆಕ್: ನಾಡ ಪಿಸ್ತೂಲ್ ಹೊಂದಿದ್ದ ಕಾರಣಕ್ಕೆ ಬಂಧನಕ್ಕೊಳಗಾದ ಮಹಿಳೆ ಮುಸ್ಲಿಂ ಅಲ್ಲ
ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ. ಆ ವಿಡಿಯೋವನ್ನು ಹಂಚಿಕೊಂಡಿರುವ ಹಲವರು ಬಂಧಿತ ಮಹಿಳೆಯು ಮುಸ್ಲಿಂ ಎಂದು ಪ್ರತಿಪಾದಿಸಿ ಪೋಸ್ಟ್‌ವೊಂನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ವಿಡಿಯೊದಲ್ಲಿ ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಮಹಿಳೆಯ ಪ್ಯಾಂಟ್‌ನ ಜೇಬಿನಿಂದ ಪಿಸ್ತೂಲನ್ನು ಹೊರತೆಗೆದು ಮಹಿಳೆಯನ್ನು ವಶಕ್ಕೆ ತೆಗೆದುಕೊಳ್ಳುವುದನ್ನು ನೋಡಬಹುದಾಗಿದೆ. ಆ ಮಹಿಳೆ ಯಾರು ಎಂಬುದನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಪೋಸ್ಟ್‌ಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಗೂಗಲ್ ಸರ್ಚ್ ಮಾಡಿದಾಗ, ಆ ವೈರಲ್ ವೀಡಿಯೊಗೆ ಸಂಬಂಧಿಸಿದ ವರದಿಗಳು ಲಭ್ಯವಾಗಿವೆ. (ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು). ಈ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಕೊತ್ವಾಲಿ ಪೊಲೀಸರು ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಕಾರಣಕ್ಕೆ ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದರೆ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಆ ಮಹಿಳೆ ಮುಸ್ಲಿಂ ಸಮುದಾಯದವರಲ್ಲ.
ವರದಿಗಳ ಪ್ರಕಾರ, ಪೊಲೀಸರು ಮಹಿಳೆಯನ್ನು ಕರಿಷ್ಮಾ ಸಿಂಗ್ ಯಾದವ್ ಎಂದು ಗುರುತಿಸಿದ್ದಾರೆ. ಆ ಹೆಸರು ಅವರು ಮುಸ್ಲಿಂ ಸಮುದಾಯದವರಲ್ಲ ಎಂದು ಸೂಚಿಸುತ್ತದೆ. ಫಿರೋಜಾಬಾದ್‌ನ ಆ ಮಹಿಳೆ ಯಾವುದೋ ಕೆಲಸಕ್ಕಾಗಿ ಮೈನ್‌ಪುರಿಗೆ ಬಂದಿದ್ದರು. ಆಗ ಕೆಲವರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದ ಪತ್ರಿಕಾ ವರದಿಯನ್ನು ಮೈನ್‌ಪುರಿ ಪೊಲೀಸರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ಪೊಲೀಸರು ಹಂಚಿಕೊಂಡಿರುವ ನ್ಯೂಸ್ ಕ್ಲಿಪ್ ನಲ್ಲಿ ಮಹಿಳೆಯ ಹೆಸರನ್ನು ಕರಿಷ್ಮಾ ಎಂದು ವರದಿ ಮಾಡಿದೆ. ಕೊತ್ವಾಲಿ ಪೊಲೀಸರು ಕೂಡ ಪಿಸ್ತೂಲ್ ಹೊಂದಿದ್ದ ಮಹಿಳೆ ಮುಸ್ಲಿಂ ಅಲ್ಲ ಎಂದು ಖಚಿತಪಡಿಸಿದ್ದಾರೆ.
#UPPolice #UPPInNews #MainpuriPoliceINNews pic.twitter.com/a9NueC2MkN
— MAINPURI POLICE (@mainpuripolice) April 13, 2022
ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದಲ್ಲಿ ಪಿಸ್ತೂಲ್ ಹೊಂದಿದ ಮಹಿಳೆಯನ್ನು ಬಂಧಿಸಲಾಗಿದ್ದು, ಬಂಧಿತ ಮಹಿಳೆ ಮುಸ್ಲಿಂ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೋಮು ಪ್ರಚೋದನೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಇದನ್ನು ಓದಿರಿ: fact check: ಮುಸ್ಲಿಂ ಯುವಕನಿಂದ ಕಳ್ಳತನ ಎಂದು ನಟಿಸಿದ ವಿಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ