ಫ್ಯಾಕ್ಟ್‌ಚೆಕ್: ಭಗವಾನ್ ಶ್ರೀಧರ ಸ್ವಾಮಿಗಳಿಂದ ಆಶೀರ್ವಾದ ಪಡೆಯುತ್ತಿರುವ ವ್ಯಕ್ತಿ ಅಂಬೇಡ್ಕರ್ ಅಲ್ಲ

ಮೊನ್ನೆ ಏಪ್ರಿಲ್ 14 ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗಿದೆ. ಅವರ ಸಮಾನತೆ ಬಗೆಗಿನ, ವೈಚಾರಿಕತೆ ಕುರಿತ ನಿಲುವುಗಳನ್ನು ಸ್ಮರಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಅಂಬೇಡ್ಕರ್ ಅವರು ಶ್ರೀ ಶ್ರೀಧರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯುತ್ತಿರುವ ಅಪರೂಪದ ಫೋಟೋ ಎಂದು ಪ್ರತಿಪಾದಿಸಲಾಗಿದೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ಸ್ವಾಮೀಜಿಗಳಿಂದ ಆಶಿರ್ವಾದ ಪಡೆದರೂ ಎಂಬ ಸಂದೇಶ ಹರಡಲು ಯತ್ನಿಸಲಾಗುತ್ತಿದೆ. ಅಂಬೇಡ್ಕರ್ ಅವರು ನಿಜಕ್ಕೂ ಶ್ರೀಧರ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡಿದಿದ್ದರೆ ಎಂದು  ಪರಿಶೀಲಿಸೋಣ.

ಫ್ಯಾಕ್ಟ್‌ ಚೆಕ್: 

ಆರ್ಯವಾರ್ತಾ ಎಂಬ  ಫೇಸ್‌ಬುಕ್ ಪೇಜ್‌ನಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವರದಹಳ್ಳಿಯಲ್ಲಿರುವ ಆಶ್ರಮಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೇಟಿ ನೀಡಿ ಶ್ರೀ ಶ್ರೀಧರ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ. ಅಲ್ಲಿರುವ ಫೋಟೊದಲ್ಲಿ ಕನ್ನಡಕ ಧರಿಸಿರುವ ವ್ಯಕ್ತಿಯೊಬ್ಬರಿಗೆ ಶ್ರೀಧರ ಸ್ವಾಮಿಗಳು ಆಶೀರ್ವಾದ ನೀಡುತ್ತಿದ್ದು, ಜೊತೆಯಲ್ಲಿ ಮತ್ತೊಬ್ಬರು ಕುಳಿತಿರುವುದನ್ನು ಕಾಣಬಹುದು.

ಪೋಟೋದಲ್ಲಿರುವ ವ್ಯಕ್ತಿ ಅಂಬೇಡ್ಕರ್ ಅಲ್ಲ:

ಅಂಬೇಡ್ಕರ್ ಅವರ ಕರ್ನಾಟಕಕ್ಕೆ ಭೇಟಿ ನೀಡಿರುವ ಸ್ಥಳಗಳ ಬಗ್ಗೆ ಪರಿಶೀಲಿಸಿದಾಗ ಫೋಸ್ಟ್‌ನಲ್ಲಿ ಉಲ್ಲೇಖಿಸಿರುವ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ರೀ ಶ್ರೀಧರಸ್ವಾಮಿ ಆಶ್ರಮಕ್ಕೆ ಭೇಟಿ ನೀಡಿರುವ ಯಾವ ಉಲ್ಲೇಖ ಕಂಡುಬಂದಿಲ್ಲ.

ಏನ್ ಸುದ್ದಿ ವತಿಯಿಂದ ವರದಪುರ ಭಗವಾನ್ ಶ್ರೀ ಶ್ರೀಧರಸ್ವಾಮಿ ಆಶ್ರಮಕ್ಕೆ ಕರೆ ಮಾಡಿ ಈ ಕುರಿತು ವಿಚಾರಿಸಿದಾಗ ಆಶ್ರಮದ ಟ್ರಸ್ಟಿಯೊಬ್ಬರು ಮಾತನಾಡಿ ” ಅಂಬೇಡ್ಕರ್ ಅವರು ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ ಎಂಬುದು ಸುಳ್ಳು, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಫೋಟೋದಲ್ಲಿ ಇರುವುದು ಅಂಬೇಡ್ಕರ್ ಅಲ್ಲ. ಈ ಹಿಂದೆಯೂ ಇದೇ ರೀತಿ ಸುಳ್ಳು ಸುದ್ದಿ ಹರಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಹಾಗಿದ್ದರೆ ಫೋಟೋದಲ್ಲಿ ಕಾಣುವ ವ್ಯಕ್ತಿ ಯಾರು?

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗುತ್ತಿರುವ ಫೋಟೋದಲ್ಲಿ ಇರುವ ವ್ಯಕ್ತಿ ಅಂಬೇಡ್ಕರ್ ಅಲ್ಲ. ಅಂಬೇಡ್ಕರ್ ರೀತಿ ಕಾಣುವ ಮಹಾರಾಷ್ಟ್ರದ ಸುಪ್ರಸಿದ್ಧ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು. ಆತ್ರೆಯವರ ಮತ್ತು ಭಗವಾನ್ ಶ್ರೀಧರರ ಭೇಟಿಯ ಪೋಟೋ ಮತ್ತು ಲೇಖನ ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ನೋಡಬಹುದು.

ಸದ್ಗುರು ಭಗವಾನರು ಅತ್ರೆಯವರಿಗೆ ಆಶೀರ್ವಾದ ನೀಡುತ್ತಿರುವುದು
ಸದ್ಗುರು ಭಗವಾನರು ಅತ್ರೆಯವರಿಗೆ ಆಶೀರ್ವಾದ ನೀಡುತ್ತಿರುವುದು

ಅಂಬೇಡ್ಕರ್‌ರವರ ಕರ್ನಾಟಕ ಭೇಟಿ

ಕರ್ನಾಟಕಕ್ಕೆ ಅಂಬೇಡ್ಕರ್ ಮೊದಲ ಬಾರಿಗೆ ಭೇಟಿ ನೀಡಿದ್ದು 1925 ನವೆಂಬರ್ 11 ಮತ್ತು 12 ರಂದು. ಬೆಳಗಾವಿಯಲ್ಲಿ ನಡೆದ ಬಹಿಷ್ಕ್ರತ ಹಿತಕಾರಿಣಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಂತರ ಅವರು ಕರ್ನಾಟಕಕ್ಕೆ ಸುಮಾರು 7 ಬಾರಿ ಭೇಟಿ ನೀಡಿದ್ದಾರೆ (ಭೇಟಿ ನೀಡಿದ್ದ ವಿವರವನ್ನು ಈ ಲೇಖನದಲ್ಲಿ ನೋಡಬಹುದು) ಆದರೆ ಈ ಭೇಟಿಗಳಲ್ಲಿ ಎಲ್ಲಯೂ ಶಿವಮೊಗ್ಗದ ಸಾಗರಕ್ಕೆ ಬಂದಿದ್ದರ ಉಲ್ಲೇಖವಿಲ್ಲ.

ಸದ್ಗುರು ಭಗವಾನ್ ಶ್ರೀ ಶ್ರೀಧರಸ್ವಾಮಿ ಅವರೊಂದಿಗೆ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು
ಸದ್ಗುರು ಭಗವಾನ್ ಶ್ರೀ ಶ್ರೀಧರಸ್ವಾಮಿ ಅವರೊಂದಿಗೆ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು

ಹಿಂದೂವಾಗಿ ಹುಟ್ಟಿರುವೆ ಹಿಂದೂವಾಗಿ ಮಾತ್ರ ಸಾಯಲಾರೆ ಎಂದಿದ್ದ ಅಂಬೇಡ್ಕರ್

ಅಂಬೇಡ್ಕರ್‌ರವರು ತಮ್ಮ ಜೀವಮಾನ ಪೂರ್ತಿ ಹಿಂದೂ ಧರ್ಮದ ಜಾತೀಯತೆ, ಅಸಮಾನತೆ, ಕಪಟ ಆಚಾರಗಳನ್ನು ವಿರೋಧಿಸಿದ್ದರು. ಹಿಂದೂವಾಗಿ ಹುಟ್ಟಿರುವೆ ಹಿಂದೂವಾಗಿ ಮಾತ್ರ ಸಾಯಲಾರೆ ಎಂದು ಘೋಷಿಸಿದ್ದರು. ಅದರಂತೆಯೇ ಅವರು ಬೌದ್ಧ ಧರ್ಮದ ಕಡೆ ಆಕರ್ಷಿತರಾಗಿ 1956 ರಲ್ಲಿ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸೇರಿದ್ದರು. ಹಾಗಾಗಿ ಅವರು ಯಾವ ಹಿಂದೂ ಸ್ವಾಮೀಜಿಯಿಂದಲೂ ಆರ್ಶಿವಾದ ಪಡೆದಿರಲಿಲ್ಲ.

ಹಾಗಾಗಿ ಈ ಎಲ್ಲಾ ಆಧಾರದಲ್ಲಿ ಫೋಟೋದಲ್ಲಿ ಭಗವಾನ್ ಶ್ರೀ ಶ್ರೀಧರಸ್ವಾಮಿಗಳೊಂದಿಗೆ ಆಶೀರ್ವಾದ ಪಡೆಯುತ್ತಿರುವ ವ್ಯಕ್ತಿಯು ಅಂಬೇಡ್ಕರ್ ಅಲ್ಲ ಮರಾಠ ಪತ್ರಿಕೆಯ ಸಂಪಾದಕರಾದ ಆಚಾಯ೯ ಆತ್ರೆಯವರು ಎಂದು ಖಚಿತವಾಗಿ ಹೇಳಬಹುದಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಟಿಸಿದ ವಿಡಿಯೊವನ್ನು ‘ಲವ್ ಜಿಹಾದ್’ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights