ಫ್ಯಾಕ್ಟ್‌ಚೆಕ್: ನಟಿಸಿದ ವಿಡಿಯೊವನ್ನು ‘ಲವ್ ಜಿಹಾದ್’ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಈಗಾಗಲೇ ಮದುವೆ ಆಗಿರುವ ಮುಸ್ಲಿಂ ಯುವಕನೊಬ್ಬ, ತನ್ನ ಹೆಸರನ್ನು ರಾಹುಲ್ ಎಂದು ಬದಲಾಯಿಸಿಕೊಂಡು ಹಿಂದೂ ಯುವತಿಯನ್ನು ಮದುವೆಯಾಗುದಾಗಿ ನಂಬಿಸಲು ಯತ್ನಿಸುವಾಗ ಈ ವಿಷಯ ತಿಳಿದ ಅವನ ಹೆಂಡತಿ ಹಿಂದೂ ಹುಡುಗಿಗೆ ವಾಸ್ತವವನ್ನು ತಿಳಿಸಿ ಮದುವೆಯನ್ನು ತಡೆದಿದ್ದಾಳೆ. ನಂತರ ಆ ಮುಸ್ಲಿಂ ಯುವಕನಿಗೆ ಚೆನ್ನಾಗಿ ಹೊಡೆಯುತ್ತಿದ್ದಾರೆ. ಇದೇ ನೋಡಿ ಲವ್ ಜಿಹಾದ್ ‘ಹಿಂದೂ ಹೆಣ್ಣು ಮಕ್ಕಳೇ ಎಚ್ಚರ ಎಚ್ಚರ’ ಎಂದು ಹೇಳುವ ವಿಡಿಯೊ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣ ನಡೆದಿರುವುದು ನಿಜವೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ನ ವೀಡಿಯೊವನ್ನು ಗೂಗಲ್ ಸರ್ಚ್ ಮಾಡಿದಾಗ, ‘ಬಸಂತ್ ಜಂಗ್ರಾ’ ಎಂಬುವವರ ಫೇಸ್‌ಬುಕ್ ಪೇಜ್‌ನಲ್ಲಿ ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಅವರ ವಿಡಿಯೋಗಳಲ್ಲಿ ಇದು ಕೇವಲ ಮನೋರಂಜನೆಗಾಗಿ ಮಾತ್ರ ಎಂದು ಉಲ್ಲೇಖಿಸಿದ್ದಾರೆ. ಅಂದರೆ ಈ ವಿಡಿಯೋಗಳು ಉದ್ದೇಶಪೂರ್ವಕವಾಗಿ ನಟಿಸಿದ ವಿಡಿಯೋಗಳಾಗಿವೆ. ಅವರ ಫೇಸ್‌ಬುಕ್ ಪೇಜ್‌ನಲ್ಲಿ ಇದೇ ರೀತಿ ನಟಿಸಿದ ಕೆಲವು ವಿಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. (ನೀವು ಅವುಗಳನ್ನು ಇಲ್ಲಿ ಮತ್ತು ಅಲ್ಲಿ ನೋಡಬಹುದು) ಹಾಗಾಗಿ ಇದು ಲವ್ ಜಿಹಾದ್ ಹೆಸರಿನಲ್ಲಿ ನಡೆದ ನೈಜ ಘಟನೆಯಲ್ಲ ಎಂಬ ತೀರ್ಮಾನಕ್ಕೆ ಬರಬಹುದು.

ವೈರಲ್ ವಿಡಿಯೊದಲ್ಲಿ ವಧು ಕೆಂಪು ಬಣ್ಣದ ಬಟ್ಟೆ ಧರಿಸಿರುವುದನ್ನು ಕಾಣುತ್ತಿದೆ. ಹಾಗೆಯೇ ‘ಬಸಂತ್ ಜಂಗ್ರಾ’ ಮಾಡಿರುವ ಇತರೆ ವಿಡಿಯೊಗಳಲ್ಲಿ ಅದೇ ನಟಿ ಅದೇ ಕೆಂಪು ಬಟ್ಟೆಗಳನ್ನು ಧರಿಸಿ ನಟಿಸಿರುವುದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದೇ ರೀತಿಯ ಸ್ಕ್ರಿಪ್ಟ್ ಮಾಡಲಾದ ಹಲವು ವೀಡಿಯೊಗಳು ಈ ಹಿಂದೆ ನೈಜ ಘಟನೆಗಳಂತೆ ವೈರಲ್ ಮಾಡಿದಾಗ, ಅದರ ಫ್ಯಾಕ್ಟ್ ಚೆಕ್ ಮಾಡಿದ ಲೇಖನಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಮನೊರಂಜನೆಗಾಗಿ ಮಾಡಲಾದ ಸ್ಕ್ರಿಪ್ಟೆಡ್ ವಿಡಿಯೊವನ್ನು ‘ಲವ್ ಜಿಹಾದ್’ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಕೋಮು ಪ್ರಚೋದನೆ ಉಂಟು ಮಾಡಲು ಹಂಚಿಕೊಳ್ಳಲಾಗಿದೆ. ಇದು ನೈಜ ಘಟನೆಯಲ್ಲ. ಇಂತಹ ವಿಡಿಯೋಗಳ ಬಗ್ಗೆ ಎಚ್ಚರವಿರಲಿ..

