ಫ್ಯಾಕ್ಟ್‌ಚೆಕ್: ಮೋದಿ ಅಧಿಕಾರಕ್ಕೆ ಬರುವ ಮೊದಲೂ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಮನವಮಿ ಆಚರಣೆ ನಡೆದಿವೆ

2014ರ ಮೊದಲು ಅಂದರೆ ಮೋದಿ ಪ್ರಧಾನಿಯಾಗುವುದಕ್ಕಿಂತ ಮುಂಚೆ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕ್ ಧ್ವಜ ಹಾರುತ್ತಿತ್ತು ಮತ್ತು ರಾಮನವಮಿಯನ್ನೆ ಆಚರಿಸಿರಲಿಲ್ಲ ಎಂದು ಹೇಳುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಕಳೆದ ವಾರ ನಡೆದ ರಾಮನವಮಿ ಸಂದರ್ಭದಲ್ಲಿ ಸೆರೆ ಹಿಡಿದಿರುವ ಫೋಟೋದೊಂದಿಗೆ ಹಳೆಯ ಪಾಕ್ ಧ್ವಜದ ಪೋಟೊವನ್ನು ಕೊಲಾಜ್ ಮಾಡುವ ಮೂಲಕ ಈ ರೀತಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿರುವ ಪಾಕಿಸ್ತಾನದ ಧ್ವಜವಿರುವ ಲಾಲ್ ಚೌಕ್‌ನ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ಚಿತ್ರವು 2011 ರಲ್ಲಿ  ಬ್ಲಾಗ್ ಪೋಸ್ಟ್‌ನಲ್ಲಿ  ಪ್ರಕಟವಾದ ವರದಿ ಕಂಡುಬಂದಿದೆ.  2014 ರಲ್ಲಿ ಮೋದಿ ಸರ್ಕಾರ ರಚನೆಗೂ ಮೊದಲು ಈ ಘಟನೆ ನಡೆದಿದೆ.

ಪ್ರತ್ಯೇಕತಾವಾದಿ ಪ್ರತಿಭಟನಾಕಾರರು ಭಾರತ ಸಾರ್ವಭೌಮತ್ವದ ವಿರುದ್ದ ನಡೆದ ಪ್ರತಿಭಟನಾ ಪ್ರದರ್ಶನದ ವೇಳೆ ಆ ಧ್ವಜವನ್ನು ಹಾರಿಸಲಾಗಿದೆ ಇದು  2010 ರ ಸಂದರ್ಭದಲ್ಲಿ ನಡೆದ ಘಟನೆಯಾಗಿದೆ. ಆದರೂ, ಕೇಂದ್ರದಲ್ಲಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರವೂ ಲಾಲ್ ಚೌಕ್‌ನಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿಗಳು ಪಾಕಿಸ್ತಾನದ ಧ್ವಜವನ್ನು 2016 ರಲ್ಲಿ ಹಾರಿಸಿದ ಉದಾಹರಣೆಗಳು ಇವೆ. ಈ ವೇಳೆ  ಮಾಡಲಾದ ವರದಿಗಳು (ಇಲ್ಲಿ ಮತ್ತು ಇಲ್ಲಿ) ಲಭ್ಯವಾಗಿವೆ.

ಈ ಬಾರಿ ಅಂದರೆ 2022 ರಲ್ಲಿ ಶ್ರೀನಗರದಲ್ಲಿ ಆಚರಿಸಿದ ರಾಮನವಮಿ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು, ಅದೇ ಚಿತ್ರವು ಲಾಲ್ ಚೌಕ್‌ನಲ್ಲಿ ರಾಮನವಮಿ ಮೆರವಣಿಗೆಯ ಇತ್ತೀಚಿನ ಲೇಖನದಲ್ಲಿ ಕಂಡುಬಂದಿದೆ. 10 ಏಪ್ರಿಲ್ 2022 ರಂದು ಪ್ರಕಟವಾದ ಲೇಖನವು ಶ್ರೀನಗರದ ಲಾಲ್ ಚೌಕ್‌ನಲ್ಲಿ ಕಾಶ್ಮೀರಿ ಪಂಡಿತರು ನಡೆಸಿದ ಶೋಭಾ ಯಾತ್ರೆಯ ಬಗ್ಗೆ. ಇತ್ತೀಚಿನ ರಾಮನವಮಿ ಮೆರವಣಿಗೆಯ ಹೆಚ್ಚಿನ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಇತ್ತೀಚೆಗೆ ಶ್ರೀನಗರದಲ್ಲಿ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆದರೂ, 2014 ರ ಮೊದಲು ಶ್ರೀನಗರದ ಲಾಲ್ ಚೌಕ್‌ನಲ್ಲಿ  ರಾಮನವಮಿ ಮೆರವಣಿಗೆಗಳನ್ನು ಉತ್ಸಾಹದಿಂದ ಆಚರಿಸಲಾಗಿದೆ.  2013 ರಲ್ಲಿ ರಾಮನವಮಿ ಆಚರಣೆಯ ಅದ್ದೂರಿ ಮೆರವಣಿಗೆಯನ್ನು ಮಾಡಲಾಗಿದ್ದು ಅದನ್ನು ಇಲ್ಲಿ ನೋಡಬಹುದು.

ಏಪ್ರಿಲ್ 2014 ರಲ್ಲಿ ಲಾಲ್ ಚೌಕ್ ನಲ್ಲಿ ರಾಮ ನವಮಿ ಆಚರಣೆಯ ಮತ್ತೊಂದು ಚಿತ್ರವನ್ನು ಇಲ್ಲಿ ನೋಡಬಹುದು. ಮೋದಿ ಸರ್ಕಾರ ರಚನೆಯಾಗಿದ್ದು ಮೇ 2014 ರಲ್ಲಿ.  ಇದರರ್ಥ 2014 ರಲ್ಲಿ ಮೋದಿ ಸರ್ಕಾರ ರಚನೆಯಾಗುವ ಮೊದಲು ಶ್ರೀನಗರದ ಲಾಲ್ ಚೌಕ್ ಬಳಿ ರಾಮನವಮಿ ಮೆರವಣಿಗೆಗಳು ನಡೆದಿವೆ. ಆದರೆ ಕೆಲವರು ಮೋದಿ ಅಧಿಕಾರಕ್ಕೆ ಬಂದ ನಂತರವೇ ಶ್ರೀನಗರದ ಲಾಲ್‌ಚೌಕ್‌ನಲ್ಲಿ ರಾಮನವಮಿ ಆಚರಣೆ ಮಾಡಲಾಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ ಅದು ತಪ್ಪಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2014 ರಲ್ಲಿ ಮೋದಿ ಸರ್ಕಾರ ರಚನೆ ಆಗುವ ಮೊದಲೂ ಶ್ರೀನಗರದ ಲಾಲ್ ಚೌಕ್‌ನಲ್ಲಿ ರಾಮನವಮಿಯನ್ನು ಆಚರಿಸಲಾಗಿದೆ. ಹಾಗಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ರಾಮನವಮಿ ಆಚರಣೆ ನಡದೇ ಇಲ್ಲ ಎಂಬುದು ಸುಳ್ಳು.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: Congress ನಾಯಕರಾದ ರಾಮಲಿಂಗಾ ರೆಡ್ಡಿ ಬೈಬಲ್ ಗೆ ಪೂಜೆ ಮಾಡಿದ್ದಾರೆ ಎಂಬುದು ನಿಜವಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights