ಜಾರ್ಖಂಡ್ನಲ್ಲಿ ಮತದಾನ ಪ್ರಕ್ರಿಯೆ ಆರಂಭ : ಮತಕೆಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ
ಜಾರ್ಖಂಡ್ನಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಮತಕೆಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಗೆ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 3 ಗಂಟೆಗೆ ಮುಕ್ತಾಯವಾಗಲಿದೆ.
ಮಾವೋವಾದಿಗಳು ಪ್ರಾಬಲ್ಯ ಹೊಂದಿರುವ ಜಾರ್ಖಂಡ್ನಲ್ಲಿ ಆರು ಜಿಲ್ಲೆಗಳ 13 ಕ್ಷೇತ್ರಗಳಿಗೆ (ಛತ್ರ, ಗುಮಾಲ್, ಬಿಷ್ಣುಪುರ್, ಲೋಹರ್ದಾಗ, ಮನಿಕ, ಲಾತೇಹಾರ್, ಪಾಂಕಿ, ದಂಲ್ಟೋನ್ಗಂಜ್, ಬಿಷ್ರಾಮ್ಪುರ್, ಛಾತಪುರ್, ಹುಸೈನಾಬಾದ್, ಗರ್ವಾ ಮತ್ತು ಭವಂತಪುರ್) ಮೊದಲ ಹಂತದ ಚುನಾವಣೆ ನಡೆಯುತ್ತಿದೆ. 37 ಲಕ್ಷ ಮತದಾರರು 15 ಮಹಿಳೆಯರು ಸೇರಿದಂತೆ 189 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಅಹಿತಕರ ಸಂಘಟನೆಗಳು ನಡೆಯದಂತೆ ಮತಕೆಂದ್ರಗಳ ಸಮೀಪದಲ್ಲಿ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ನಕ್ಸಲೈಟ್ಗಳ ದಾಳಿ ನಡೆದಿದ್ದ ಲಾತೇಹಾರ್ ಮತ್ತು ಮಾನಿಕ ಕ್ಷೇತ್ರಗಳಲ್ಲಿ ಭದ್ರತೆ ದುಪ್ಪಟ್ಟುಗೊಳಿಸಲಾಗಿದೆ. ಅಂಗವಿಕಲ ಮತದಾರರಿಗೆ ಮತಕೇಂದ್ರಗಳಲ್ಲಿ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಾರ್ಖಂಡ್ ಮುಖ್ಯ ಚುನಾವಣಾ ಆಯುಕ್ತ ವಿನಯ್ ಕುಮಾರ್ ಚೌಧರಿ ಹೇಳಿದ್ದಾರೆ.
81 ಸಂಖ್ಯಾಬಲ ಹೊಂದಿರುವ ಜಾರ್ಖಂಡ್ ವಿಧಾನಸಭೆಗೆ ಐದು ಹಂತಗಳಲ್ಲಿ ಡಿಸೆಂಬರ್ 20 ವರೆಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.